
ಹುಬ್ಬಳ್ಳಿಯಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶದಲ್ಲಿ ದಿಂಗಾಲೇಶ್ವರ ಶ್ರೀಗಳು ಪ್ರೇಕ್ಷಕರಿಗೆ ಇಷ್ಟು ಹೇಳುವಷ್ಟರಲ್ಲಿ ಸಾಕು ಸಾಕಾಗಿ ಹೋದ್ರು.
ವಿಷಯ ಏನಪ್ಪ ಅಂದ್ರೆ, ಏಕತಾ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದ ಸಾರ್ವಜನಿಕರಿಗೆ ಪ್ರಸಾದ (ಊಟ) ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನವೇ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 4ಕ್ಕೆ ಆಗಿತ್ತು. ಆಗಲೇ ಪ್ರಸಾದವೆಲ್ಲ ರೆಡಿ ಆಗಿತ್ತು. ಸಂಜೆ 7ಕ್ಕೆ ಕಾರ್ಯಕ್ರಮ ಮುಗಿಸುವ ಆಲೋಚನೆ ಸಂಘಟಕರದ್ದಾಗಿತ್ತು. ಜನ ಕಾರ್ಯಕ್ರಮ ಮುಗಿದ ಮೇಲೆ ಎದ್ದು ಹೋದರೆ ಮಾಡಿದ ಅಡುಗೆಯೆಲ್ಲ ವೇಸ್ಟ್ ಆಗುತ್ತದೆ ಎಂಬ ಯೋಚನೆ ಸಂಘಟಕರದ್ದು.
ಇದನ್ನೂ ಓದಿ: ಹುಬ್ಬಳ್ಳಿ: ವೀರಶೈವ-ಲಿಂಗಾಯತ ಏಕತಾ ಸಮಾವೇಶದಲ್ಲಿ ಸಾವಿರಾರು ಸ್ವಾಮೀಜಿಗಳು ಒಂದೇ ಎಂಬ ಸಂದೇಶ!
ಹೀಗಾಗಿ ಕಾರ್ಯಕ್ರಮದ ಮಧ್ಯೆಯೇ ದಿಂಗಾಲೇಶ್ವರ ಶ್ರೀಗಳು, ಪ್ರಸಾದದ ವ್ಯವಸ್ಥೆ ಇದೆ. ಎಲ್ಲರೂ ಊಟ ಮಾಡಿಕೊಂಡು ಹೋಗಬೇಕು. ಹಾಗೇ ಹೋಗಬಾರದು ಎಂದು ಹೇಳಿದರು. ಶ್ರೀಗಳು ಹೀಗೆ ಹೇಳುತ್ತಿದ್ದಂತೆ, ಅಷ್ಟೊತ್ತಿನವರೆಗೂ ಕಾರ್ಯಕ್ರಮ ಕೇಳುತ್ತಿದ್ದವರೆಲ್ಲರೂ ಕಾರ್ಯಕ್ರಮವೆಲ್ಲ ಮುಗಿತು ಅಂತ ಅದ್ಕೊಂಡ್ರೋ? ಏನೋ? ಎದ್ದು ಊಟಕ್ಕೆ ಹೊರಟು ನಿಂತರು. ಕೆಲವರು ಊಟದ ಕಡೆ ಹೆಜ್ಜೆ ಹಾಕಿದ್ದೂ ಆಗಿತ್ತು. ಆದರೆ ಕಾರ್ಯಕ್ರಮವೇ ಮುಗಿದಿರಲಿಲ್ಲ. ಇನ್ನು ಜನಪ್ರತಿನಿಧಿಗಳು, ಹಲವು ಶ್ರೀಗಳು ಮಾತನಾಡುವುದು ಬಾಕಿಯಿತ್ತು.
ಪ್ರೇಕ್ಷಕರು ಎದ್ದು ಹೋಗುತ್ತಿರುವುದನ್ನು ನೋಡಿ ಕಂಗಾಲಾದ ದಿಂಗಾಲೇಶ್ವರ ಶ್ರೀಗಳು, ಅಯ್ಯೋ ಏನ್ರಪಾ ಊಟ ಐತಿ ಅಂತ ಹೇಳಿದ ಕೂಡಲೇ ಎಲ್ಲರೂ ಎದ್ದು ಹೊರಟು ಬಿಡುವುದೇ? ಬರ್ರೋ ಕುಂದ್ರರೋ...ಹಂಗೆಲ್ಲ ಎದ್ದು ಹೋಗಬ್ಯಾಡ್ರಿ... ಇನ್ನು ಸಾಕಷ್ಟು ಜನ ಮಾತನಾಡುವುದಿದೆ ಅಂತ ಹೊರಟು ನಿಂತವರನ್ನು ತಡೆದು ಕುಳಿತುಕೊಳ್ಳುವಂತೆ ಮಾಡುವಲ್ಲಿ ಶ್ರೀಗಳಿಗೆ ಸಾಕು ಬೇಕಾಯಿತು.
ಇದರಿಂದ ವೇದಿಕೆ ಮೇಲೆ ಕುಳಿತವರು, ಇತ್ತ ಮುಂದೆ ಕುಳಿತವರೆಲ್ಲರೂ ನಗೆಗಡಲಲ್ಲಿ ತೇಲಾಡಿದರು.
ಸಿಎಂ, ಡಿಸಿಎಂ ಜತೆ ಓಪನ್ ಬಸ್ನಲ್ಲಿ ಲೈಟಿಂಗ್ಸ್ ತೋರ್ಸಿ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲೆಲ್ಲ ಮುಂಚಿತವಾಗಿ ಅಧಿಕಾರೇತರ ಉಪ ಸಮಿತಿಗಳನ್ನು ನೇಮಿಸುತ್ತಿದ್ದರು. ಈ ಸಮಿತಿಗಳಿಗೆ ಆಯಾ ಕ್ಷೇತ್ರದ ಪರಿಣತರನ್ನು ಸೇರಿಸುತ್ತಿದ್ದರು. ಪಕ್ಷಾತೀತವಾಗಿ ಎಲ್ಲರೂ ಇರುತ್ತಿದ್ದರು. ದಸರಾ ಯಶಸ್ಸಿಗೆ ಅತ್ಯುತ್ತಮವಾದ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದರು. ಬರುಬರುತ್ತಾ ಇದು ಆಡಳಿತದಲ್ಲಿರುವ ಪಕ್ಷದವರ ನೇಮಕಕ್ಕೆ ಸೀಮಿತವಾಯಿತು. ಎಷ್ಟೇ ಆದರೂ ಉಪ ಸಮಿತಿ ಸದಸ್ಯರ ಸಂಖ್ಯೆ 30-35 ಮೀರುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಉಪ ಸಮಿತಿ ಸದಸ್ಯರ ಸಂಖ್ಯೆ ಶತಕ ದಾಟಿದೆ!
110, 120, 126... ಹೀಗೆ ಮನಬಂದಂತೆ ನೇಮಕ ಮಾಡಲಾಗುತ್ತಿದೆ. ಅದು ಮುಂಚಿತವಾಗಿ ಅಲ್ಲ. ‘ಸಂತೆ ಹೊತ್ತಿಗೆ ಮೂರು ಮೊಳ’ ಎಂಬಂತೆ ಎಷ್ಟೋ ಬಾರಿ ದಸರಾ ಆರಂಭವಾದ ನಂತರವೂ ನೇಮಕ ಮಾಡಿದ್ದೂ ಇದೆ. ಒಂದೆರಡು ಉಪ ಸಮಿತಿಗಳಿಗೆ ಕಾರ್ಯಕ್ರಮ ಮುಕ್ತಾಯ ಹಂತದಲ್ಲಿರುವಾಗ ನೇಮಕ ನಡೆದಿದೆ. ಈ ಸಮಿತಿಗಳಿಗೆ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಿರುವುದು ಮತ್ತೊಂದು ವಿಶೇಷ!
ದೀಪಾಲಂಕಾರ ಸಮಿತಿಯಲ್ಲಿ 126 ಸದಸ್ಯರು ಇದ್ದಾರೆ. ಇವರ ಬೇಡಿಕೆ ಏನು ಗೊತ್ತೇ? ಸಿಎಂ, ಡಿಸಿಎಂ ಜತೆ ಓಪನ್ ಬಸ್ನಲ್ಲಿ ದೀಪಾಲಂಕಾರ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು. ಎಲ್ಲ ಸದಸ್ಯರಿಗೂ ಒಂದೇ ರೀತಿಯ ಡ್ರೆಸ್ ಕೋಡ್ ಮಾಡಬೇಕು ಅರ್ಥಾತ್ ಮಾಡಿಕೊಡಬೇಕು!
ಯಾರ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಮೆರವಣಿಗೆ ಸಮಿತಿಯವರು ಪ್ರತಿ ವರ್ಷ ಸರ್ಕಾರದ ದುಡ್ಡಲ್ಲಿ ಹಾರ್ಡ್ ಕೋಟ್ ಹೊಲಿಸಿಕೊಳ್ಳುತ್ತಾರೆ. ಬಹುತೇಕ ಸಮಿತಿ ಸದಸ್ಯರು ನಮಗೆ ಇಷ್ಟು ಪಾಸ್ ಬೇಕು. ಇಂಥದ್ದೇ ಮೊಮೆಂಟೋ ಬೇಕು, ನಾನ್ ವೆಜ್ ಊಟ ಹಾಕಿಸಬೇಕು ಎಂಬ ಬೇಡಿಕೆ ಇಡುತ್ತಾರೆ. ಕೆಲ ಉಪ ಸಮಿತಿ ಸದಸ್ಯರು ಸಭೆಗಳಿಗೆ ತಮ್ಮ ಬೆಂಬಲಿಗರನ್ನು ಕರೆತರುತ್ತಾರೆ. ಅವರಿಗೂ ಪಾಸ್ ಕೊಡಿ, ಊಟ- ತಿಂಡಿ ಕೊಡಿ ಎಂದು ಒತ್ತಾಯಿಸುತ್ತಾರೆ. ಆಹಾರ ಸಮಿತಿಯಲ್ಲಂತು ಈ ಸಮಸ್ಯೆ ತೀವ್ರವಾಗಿದೆ.
ಇದನ್ನೂ ಓದಿ: ಸಮಾಜ ಒಡೆಯುವುದರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಏಕತಾ ಸಮಾವೇಶ: ಸಂಸದ ಬೊಮ್ಮಾಯಿ
ಅಧಿಕಾರಿಗಳಿಗೆ ವಿವಿಐಪಿಗಳಿಗಿಂತ ಈ ಕಮಿಟಿಯ ಸದಸ್ಯರನ್ನು ಸಂಭಾಳಿಸುವುದೇ ದೊಡ್ಡ ತಲೆನೋವಾಗಿದೆ!.
ಇನ್ನೂ ಕೆಲವರು ತಾನು ಇಂಥ ಉಪ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಎಂದು ಲೆಟರ್ ಹೆಡ್ ಮಾಡಿಸಿಕೊಳ್ಳುವುದೂ ಉಂಟು!
ಉಪ ಸಮಿತಿಯ ಸದಸ್ಯರ ಉಪದ್ರವಗಳು ಈ ರೀತಿಯಾದರೆ ಇನ್ನು ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿರುವವ ಅಧಿಕಾರಿಗಳ ಪಾಸ್ ಬೇಡಿಕೆ ಮತ್ತೊಂದು ರೀತಿಯದು. ಈ ಬಾರಿ ಒಬ್ಬರು 500 ಪಾಸ್ ಕೇಳಿದ್ದಾರೆ! ಜಿಲ್ಲಾಡಳಿತಕ್ಕಂತು ಈ ದಸರಾ ಯಾಕಾದ್ರೂ ಬರುತ್ತೋ ಬಂದ್ರೂ ಪಾಸ್ ಯಾಕಾದ್ರೂ ಮಾಡುತ್ತಾರೋ ಎಂಬಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ