ಏಳೆಂಟು ವರ್ಷಗಳಿಂದ ಕರುನಾಡಿನಲ್ಲಿ ಹಿಂದೂ ಕಾರ್ಯಕರ್ತರ ನೆತ್ತರು ಹರಿಸಲು ಹುಕುಂ ನೀಡಿದ ಪ್ರ್ಯಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮುಖಂಡ ಯಾರು? ಮೊಬೈಲ್ ಸೇರಿದಂತೆ ಯಾವುದೇ ಸಂವಹನ ಸಾಧನ ಬಳಸದೆ ಹೋದರೂ ತನ್ನ ಹಂತಕ ಪಡೆಗೆ ಆತ ಕೊಲೆ ಸಂದೇಶ ರವಾನೆ ಮಾಡುತ್ತಿದ್ದುದು ಹೇಗೆ?
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಅ.06): ಏಳೆಂಟು ವರ್ಷಗಳಿಂದ ಕರುನಾಡಿನಲ್ಲಿ ಹಿಂದೂ ಕಾರ್ಯಕರ್ತರ ನೆತ್ತರು ಹರಿಸಲು ಹುಕುಂ ನೀಡಿದ ಪ್ರ್ಯಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮುಖಂಡ ಯಾರು? ಮೊಬೈಲ್ ಸೇರಿದಂತೆ ಯಾವುದೇ ಸಂವಹನ ಸಾಧನ ಬಳಸದೆ ಹೋದರೂ ತನ್ನ ಹಂತಕ ಪಡೆಗೆ ಆತ ಕೊಲೆ ಸಂದೇಶ ರವಾನೆ ಮಾಡುತ್ತಿದ್ದುದು ಹೇಗೆ?
ಈ ಎರಡು ಪ್ರಶ್ನೆಗಳಿಗೆ ಇತ್ತೀಚೆಗೆ ರಾಜ್ಯದಲ್ಲಿ ಬಂಧಿತರಾದ ಪಿಎಫ್‌ಐ ಸಂಘಟನೆಯ 22 ಮಂದಿ ಪ್ರಮುಖ ಮುಖಂಡರ ವಿಚಾರಣೆ ನಡೆಸಿದ ನಂತರವೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಬೆಂಗಳೂರಿಗೆ ಪೊಲೀಸರಿಗೆ ಸ್ಪಷ್ಟಉತ್ತರ ದೊರಕಿಲ್ಲ. ಪಿಎಫ್‌ಐನ ಹಣಕಾಸು ವಹಿವಾಟು ಹಾಗೂ ಕಾರ್ಯಕರ್ತರ ತರಬೇತಿ ಸೇರಿದಂತೆ ಇತರೆ ಕೆಲವು ಮಾಹಿತಿ ಲಭ್ಯವಾದರೂ ಹಿಂದೂಗಳ ಹತ್ಯೆಗಳ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಡುತ್ತಿಲ್ಲ ಎಂದು ಉನ್ನತ ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ನಿಷೇಧಿತ ಪಿಎಫ್‌ಐ ಜೊತೆಗೆ ನಂಟು: ಮಾಧ್ಯಮ ವರದಿ ತಳ್ಳಿಹಾಕಿದ ಕೇರಳ ಪೊಲೀಸರು
2015ರಿಂದ 2022ವರೆಗೆ ಹಿಂದೂ ಮುಖಂಡರಾದ ಮೈಸೂರಿನ ಕ್ಯಾತಮಾರನಹಳ್ಳಿ ರಾಜು, ಬೆಂಗಳೂರು ಶಿವಾಜಿನಗರದ ರುದ್ರೇಶ್, ಮಂಗಳೂರಿನ ಬಂಟ್ವಾಳದ ಶರತ್ ಮಡಿವಾಳ ಹಾಗೂ ಇತ್ತೀಚಿನ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಕೊಲೆ ಕೃತ್ಯಗಳಲ್ಲಿ ಪಿಎಫ್‌ಐ ಪಾತ್ರ ಬಯಲಾಗಿತ್ತು. ಅಲ್ಲದೆ 2016ರಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದ್ದ ಹಿಂದೂ ಸಂಘಟನೆ ಮುಖಂಡ ಫಣೀಂದ್ರ ಮೇಲಿನ ಮಾರಣಾಂತಿಕ ಹಲ್ಲೆ ಕೃತ್ಯದಲ್ಲಿ ಸಹ ಅದೇ ಸಂಘಟನೆ ಹೆಸರು ಕೇಳಿ ಬಂದಿತ್ತು.
ಆದರೆ ಈ ಹತ್ಯೆಗಳಲ್ಲಿ ಪಿಎಫ್‌ಐ ಸಂಘಟನೆಯ ಕೆಳಹಂತದ ಕಾರ್ಯಕರ್ತರನ್ನು ಹೊರತುಪಡಿಸಿದರೆ ಸಂಚಿನ ಸೂತ್ರಧಾರ ಪತ್ತೆಯಾಗಿಲ್ಲ. ಇದರಲ್ಲಿ ಬೆಂಗಳೂರಿನ ರುದ್ರೇಶ್ ಕೊಲೆ ಕೃತ್ಯದಲ್ಲಿ ಬೆಂಗಳೂರು ಪಿಎಫ್‌ಐ ಸಂಘಟನೆ ಅಧ್ಯಕ್ಷ ಅಜೀಮ್ ಶರೀಫ್ ಹಾಗೂ ಶರತ್ ಮಡಿವಾಳ ಹತ್ಯೆಯಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ಖಲೀಲ್‌ವುಲ್ಲಾ ಬಂಧಿತರಾಗಿದ್ದರು. ಈ ಇಬ್ಬರ ಬಿಟ್ಟು ಹತ್ಯೆಯಲ್ಲಿ ಕೆಳಹಂತದ ಕಾರ್ಯಕರ್ತರು ಜೈಲು ಸೇರಿದ್ದರು. ಎನ್‌ಐಎ ಸಹ ಹತ್ಯೆ ಸೂತ್ರಧಾರನ ಪತ್ತೆ ಹಚ್ಚುವರಲ್ಲಿ ವಿಫಲವಾಯಿತು ಎಂಬ ಟೀಕೆಗಳು ವ್ಯಕ್ತವಾಗಿವೆ.
ಹೇಗೆ ಹತ್ಯೆ ಸಂಚಿನ ಸಂದೇಶ ರವಾನೆ?: ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಹಂತಕರರು ಪಕ್ಕಾ ಯೋಜಿತವಾಗಿ ಸಂಚು ರೂಪಿಸುತ್ತಿದ್ದರು. ರಾಜ್ಯದಲ್ಲಿ ಹತ್ಯೆಗೀಡಾದ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಹತ್ಯೆಗೆ ಮುನ್ನ ಸಕ್ರಿಯವಾಗಿ ಹಿಂದೂ ಪರ ವಿಚಾರಗಳಲ್ಲಿ ಪಾತ್ರವಹಿಸಿದವರೇ ಆಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. 2015ರಲ್ಲಿ ಮೈಸೂರಿನ ಕ್ಯಾತಮಾರನಹಳ್ಳಿ ರಾಜು ಹತ್ಯೆ ನಡೆದಿತ್ತು. ಇದಕ್ಕೆ ಸ್ಥಳೀಯ ಮಸೀದಿ ವಿಚಾರವಾಗಿ ರಾಜು ಹೋರಾಟ ನಡೆಸಿದ್ದ. ಹಾಗೆಯೇ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರ್‌ಎಸ್‌ಎಸ್ ಸಂಘಟನೆಯಲ್ಲಿ ರುದ್ರೇಶ್ ಮಂಚೂಣಿಯಲ್ಲಿದ್ದರು. ಬಂಟ್ವಾಳದ ಶರತ್ ಮಡಿವಾಳ, ತನ್ನ ಸಮುದಾಯದಲ್ಲಿ ಹಿಂದೂ ಪರ ಸಂಘಟನೆಯಲ್ಲಿ ತೊಡಗಿದ್ದ.
ಇತ್ತೀಚಿಗೆ ಸುಳ್ಯದಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು, ಕೆಲ ತಿಂಗಳ ಹಿಂದಿನ ಮುಸ್ಲಿಂ ವ್ಯಾಪಾರಿಗಳಿಂದ ಮಾಂಸ ಖರೀದಿ ವಿರುದ್ಧದ ಅಭಿಯಾನ (ಹಲಾಲ್ ಕಟ್)ಯದಲ್ಲಿ ಮುಂದಾಳತ್ವ ವಹಿಸಿದ್ದ. ಅಲ್ಲದೆ ತಾನೇ ಮಾಂಸದ ಮಾರಾಟ ಅಂಗಡಿ ತೆರೆದು ಬೇರೆಯವರಿಗೆ ಸಹ ಪ್ರವೀಣ್ ಉತ್ತೇಜನ ಕೊಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲ ಹತ್ಯೆಗಳ ಯೋಜನೆ ದಿಢೀರನೆ ರೂಪಿತವಾಗಿಲ್ಲ. ಬಹಳ ದಿನಗಳಿಂದ ಅವರನ್ನು ಪಿಎಫ್‌ಐ ಸಂಘಟನೆ ಹಿಂಬಾಲಿಸಿದೆ. ಹೀಗಾಗಿ ಸ್ಥಳೀಯವಾಗಿ ಮುುಸ್ಲಿಂ ವಿರೋಧಿ ಹೋರಾಟದಲ್ಲಿ ತೊಡಗಿರುವರ ಕುರಿತು ಮಾಹಿತಿ ಸಂಗ್ರಹಿಸಿ ಪಟ್ಟಿಸಿದ್ಧಪಡಿಸುತ್ತಿದ್ದರು. ಈ ಪಟ್ಟಿಯಲ್ಲಿದ್ದವರನ್ನು ಸಮಯ ನೋಡಿ ಹತ್ಯೆ ಮಾಡುತ್ತಿದ್ದರು. ಪ್ರತಿ ಹತ್ಯೆಯಿಂದಲೂ ಒಂದು ಸಂದೇಶವನ್ನು ರವಾನಿಸುತ್ತಿದ್ದರು.
ಪಿಎಫ್‌ಐ ನಿಷೇಧದ ನಂತರ ಇನ್ ತಿ ಫದಾ ಆತಂಕ: ಹಿಂದೂ ಜಾಗರಣ ಮುಖಂಡ ಶ್ರೀಕಾಂತ್ ಶೆಟ್ಟಿ ಕಳವಳ
ಹತ್ಯೆ ಸಂಚಿನ ಸೂತ್ರಧಾರರು ನೇರವಾಗಿ ಫೀಲ್ಡ್‌ಗೆ ಬರುತ್ತಿರಲಿಲ್ಲ. ಮೌಖಿಕ ಆದೇಶದ ಮೂಲಕ ಕೊಲೆ ಸಂಚನ್ನು ಕಾರ್ಯರೂಪಕ್ಕಿಳಿಸುತ್ತಿದ್ದರು. ಮೊಬೈಲ್ ಮಾತ್ರವಲ್ಲ ಯಾವುದೇ ರೀತಿಯ ಸಂವಹನ ಸಾಧನಗಳನ್ನು ಮುಖಂಡರು ಬಳಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಪಿಎಫ್‌ಐ ಪ್ರಮುಖ ಮುಖಂಡರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈಗ ಹಿಂದೂ ಕಾರ್ಯಕರ್ತರ ಹತ್ಯೆ ಸೂತ್ರಧಾರ ಯಾರು ಎಂಬುದು ಬಹಿರಂಗವಾಗಬೇಕಿತ್ತು. ಆದರೆ ವಿಚಾರಣೆ ವೇಳೆ ಆರೋಪಿಗಳು ಕೊಲೆಗಳ ಕುರಿತು ಬಾಯ್ಬಿಟ್ಟಿಲ್ಲ. ತನಿಖೆಯಲ್ಲಿ ಕೂಡ ಸೂಕ್ತ ಪುರಾವೆಗಳು ಲಭ್ಯವಾಗಿಲ್ಲ. ಈ ಬಗ್ಗೆ ಎನ್‌ಐಎ ತನಿಖೆ ಮುಂದುವರೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.