ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೆ ಸರ್ಕಾರ ಚಿಂತನೆ| ನಮ್ಮ ಸರ್ಕಾರಕ್ಕೆ ಜನರ ಆರೋಗ್ಯವೇ ಮುಖ್ಯ| ನೈಟ್ ಕರ್ಪ್ಯೂ ವಿಧಿಸುವ ಬಗ್ಗೆ ಮುನ್ಸೂಚನೆ ನೀಡಿದ ಆರೋಗ್ಯ ಸಚಿವ ಸುಧಾಕರ್
ಬೆಂಗಳೂರು(ಡಿ.22): ಕಳೆದೊಂದು ವರ್ಷದಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುವ ಹಂತದಲ್ಲಿದೆ ಎನ್ನುವಾಗಲೇ ಇದರ ಹೊಸ ರೂಪಾಂತರ ಜಗತ್ತಿನ ನಿದ್ದೆಗೆಡಿಸಿದೆ. ಬ್ರಿಟನ್‌ನಲ್ಲಿ ಈ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳು ಅಲರ್ಟ್ ಆಗಿವೆ. ಯುಕೆಯಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿವೆ. ಸದ್ಯ ರಾಜ್ಯದಲ್ಲೂ ಈ ಹೊಸ ವೈರಸ್ ತಡೆಯುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.
ಹೌದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂಜಾಗರೂಕತೆ ದೃಷ್ಟಿಯಿಂದ ನೈಟ್ ಕರ್ಪ್ಯೂ ವಿಧಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ನಮ್ಮ ಸರ್ಕಾರಕ್ಕೆ ಜನರ ಆರೋಗ್ಯವೇ ಮುಖ್ಯ. ಅವರ ರಕ್ಷಣೆಗಾಗಿ ನೈಟ್ ಕರ್ಪ್ಯೂ ಜಾರಿಗೆ ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಕೇಂದ್ರ ಆರೋಗ್ಯ ಸಚಿವಾಲಯ ನೈಟ್ ಕರ್ಪ್ಯೂ ವಿಧಿಸುವ ಅಧಿಕಾರ ರಾಜ್ಯಗಳಿಗೆ ನೀಡಿದೆ ಎಂದಿದ್ದಾರೆ.
ಇದೇ ವೇಳೆ ಬ್ರಿಟನ್‌ನಿಂದ ಈಗಾಗಲೇ ಆಗಮಿಸಿದವರ ಬಗ್ಗೆಡಯೂ ಮಾಹಿತಿ ನೀಡಿರುವ ಸಚಿವರು 'ಬ್ರಿಟನ್ ನಿಂದ ಆಗಮಿಸಿರುವ 138 ಜನರ ಪತ್ತೆ ಹಚ್ಚುವ ಕಾರ್ಯ ಮುಗಿದಿದೆ. ನಿನ್ನೆ ರಾತ್ರಿಯೇ ಬಹುತೇಕ ಪ್ರಯಾಣಿಕರ ಸಂಪರ್ಕಿಸಲಾಗಿದೆ. ಅವರೆಲ್ಲರಿಗೂ ಕ್ವಾರಂಟೈನ್ ಆಗಲು ಸೂಚಿಸಿದ್ದೇವೆ ಎಂದಿದ್ದಾರೆ.