ಬೆಸ್ಕಾಂ ಓಸಿ ಇಲ್ಲದ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಆದೇಶಿಸಿದೆ. ಇದರಿಂದ ಬಿ ಖಾತಾ ನಿವೇಶನ ಹೊಂದಿರುವವರಿಗೆ ತೊಂದರೆಯಾಗಲಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೂ ಹೊಡೆತ ಬೀಳಲಿದೆ.
ಬೆಂಗಳೂರು (ಏ.6): ಕೆಇಆರ್‌ಸಿ ಆದೇಶದ ಬೆನ್ನಲ್ಲೇ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ನೀಡಬಾರದು. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದ ನಿವೇಶನದಾರರಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಶುಕ್ರವಾರ ಬೆಸ್ಕಾಂ ಆದೇಶ ಹೊರಡಿಸಿದೆ. ಇಂತಹುದೇ ಆದೇಶ ಇತರೆ ಎಸ್ಕಾಂಗಳಿಂದಲೂ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ.
ಈ ಆದೇಶದಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಕಂದಾಯ ನಿವೇಶನ ಹಾಗೂ ಬಿ ಖಾತಾ ಹೊಂದಿರುವ ನಿವೇಶನಗಳಲ್ಲಿನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಮರೀಚಿಕೆಯಾಗಲಿದ್ದು, ಜನಸಾಮಾನ್ಯರ ಜೀವನ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ನಗರದಲ್ಲಿ ಎ ಖಾತಾ ಹೊಂದಿದ್ದು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದಿದ್ದರೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ನೀಡದಂತೆ ಬೆಸ್ಕಾಂ ಆದೇಶಿಸಿದೆ. ಹೀಗಾಗಿ ನಿರ್ಮಾಣ ಚಟುವಟಿಕೆಗಳಿಗೂ ಬ್ರೇಕ್ ಬೀಳಲಿದ್ದು, ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಮೋದಿತ ನಿವೇಶನಗಳು ಅಲ್ಲದ ಕಂದಾಯ ನಿವೇಶನ ಅಥವಾ ಬಿ ಖಾತಾ ನಿವೇಶನಗಳಿಗೆ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪತ್ರ ನೀಡುವಂತಿಲ್ಲ ಎಂದು ಈಗಾಗಲೇ ಬಿಬಿಎಂಪಿ ಹಾಗೂ ಬಿಡಿಎ ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಬೆಂಗಳೂರಿನಲ್ಲಿ ಶೇ.80ರಷ್ಟು ನಿವೇಶನಗಳು ಬಿ ಖಾತಾ ನಿವೇಶನಗಳೇ ಆಗಿದ್ದು, ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪತ್ರ ಪಡೆಯಲು ಸಾಧ್ಯವಿಲ್ಲ. ಇದೀಗ ಬೆಸ್ಕಾಂ ಸುಪ್ರೀಂ ಕೋರ್ಟ್ ಹಾಗೂ ಕೆಇಆರ್‌ಸಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿರುವುದರಿಂದ ನಾಗರಿಕರಿಗೆ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವನ್ನು 5 ದಿನ ಕತ್ತಲೆಯಲ್ಲಿಟ್ಟ ಗುಜರಾತ್ ಸರ್ಕಾರ!
ಏನಿದು ವಿದ್ಯುತ್ ಸಂಪರ್ಕ ವಿವಾದ?:
ಸುಪ್ರೀಂ ಕೋರ್ಟ್ 2024ರ ಡಿ.17ರ ಆದೇಶದಲ್ಲಿ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶ ಮಾಡಿದ್ದು, ನಕ್ಷೆ ಮಂಜೂರಾತಿ ಹಾಗೂ ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡದಂತೆ ತಿಳಿಸಿದೆ. ಇದರ ಅನ್ವಯ ಮಾ.13ರಂದು ಆದೇಶ ಹೊರಡಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ), ಬೆಂಗಳೂರಿನ ಬೆಸ್ಕಾಂ, ಮಂಗಳೂರು, ಹುಬ್ಬಳ್ಳಿ, ಚಾಮುಂಡೇಶ್ವರಿ (ಮೈಸೂರು), ಕಲಬುರ್ಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿ ಸೇರಿ ಆರೂ ಎಸ್ಕಾಂಗಳು ಓಸಿ ಪ್ರಮಾಣಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಬಾರದು. ಈ ಬಗ್ಗೆ ಕೋರ್ಟ್ ಹೊರಡಿಸಿರುವ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಜನವರಿಯಲ್ಲಿ ಬಿಬಿಎಂಪಿ ಆಯುಕ್ತರು ಬೆಸ್ಕಾಂ ಹಾಗೂ ಬೆಂಗಳೂರು ಜಲಮಂಡಳಿಗೆ ಪತ್ರ ಬರೆದು ಸ್ವಾಧೀನಾನುಭವ ಪತ್ರ ಹೊಂದಿಲ್ಲದ ಕಟ್ಟಡಗಳಿಗೆ ನೀರಿನ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ನೀಡದಂತೆ ಸೂಚಿಸಿದ್ದರು.
ಸುಪ್ರೀಂ, ಕೆಇಆರ್‌ಸಿ ಆದೇಶ ಪಾಲನೆ:
ಸುಪ್ರೀಂ ಕೋರ್ಟ್ ಹಾಗೂ ಕೆಇಆರ್‌ಸಿ, ಬಿಬಿಎಂಪಿ ಈ ಮೂರೂ ಆದೇಶಗಳನ್ನು ಸ್ಪಷ್ಟವಾಗಿ ಪಾಲಿಸುವಂತೆ ಬೆಸ್ಕಾಂ ಏ.4 ರಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಇದು ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಈ 8 ಜಿಲ್ಲೆಗಳಲ್ಲಿ ಅನ್ವಯವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೆವೆನ್ಯೂ ನಿವೇಶನ, ಬಿ ಖಾತಾ ನಿವೇಶನಗಳಿಗೆ ಬಿಬಿಎಂಪಿ ನಕ್ಷೆ ಮಂಜೂರಾತಿಯೇ ನೀಡಲ್ಲ. ಎ ಖಾತಾ ನಿವೇಶನ ಅಲ್ಲದಿದ್ದರೆ 20 ಗುಂಟೆಗೆ ಹೆಚ್ಚಿನ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮೋದನೆಗೆ ಅವಕಾಶ ಇದೆ. ಇದೀಗ ಅನಧಿಕೃತ ನಿವೇಶನ ಹಾಗೂ ಕಟ್ಟಡಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡದಿರಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗಲಿದೆ.
ಇದನ್ನೂ ಓದಿ: BESCOM: ವಿದ್ಯುತ್ ಸ್ಮಾರ್ಟ್ ಮೀಟರ್ ದರ ಶೇ.400ರಿಂದ ಶೇ.800ರಷ್ಟು ಏರಿಕೆ ಬಿಗ್ ಶಾಕ್!
ಓಸಿ ಕಡ್ಡಾಯ ಪರಿಣಾಮವೇನು?
ಬೆಸ್ಕಾಂ ಆದೇಶದಿಂದಾಗಿ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಂದಾಯ ನಿವೇಶನ ಹಾಗೂ ಬಿ ಖಾತಾ ನಿವೇಶನಗಳಲ್ಲಿನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಮರೀಚಿಕೆಯಾಗಲಿದ್ದು, ಜನಸಾಮಾನ್ಯರ ಜೀವನ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ನಗರದಲ್ಲಿ ಎ ಖಾತಾ ಹೊಂದಿದ್ದು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದಿದ್ದರೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ನೀಡದಂತೆ ಬೆಸ್ಕಾಂ ಆದೇಶಿಸಿದೆ. ಹೀಗಾಗಿ ನಿರ್ಮಾಣ ಚಟುವಟಿಕೆಗಳಿಗೂ ಬ್ರೇಕ್ ಬೀಳಲಿದ್ದು, ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿನ ಶೇ.80ರಷ್ಟು ನಿವೇಶನಗಳು ಬಿ ಖಾತಾ ಅಥವಾ ಕಂದಾಯ ನಿವೇಶನಗಳೇ ಆಗಿವೆ. ಹೀಗಾಗಿ ಬೆಸ್ಕಾಂ ಆದೇಶದಿಂದ ವಿದ್ಯುತ್ ಸಂಪರ್ಕವೇ ಪಡೆಯಲಾಗದ ಸ್ಥಿತಿ ಎದುರಾಗಲಿದೆ.
ಗ್ರಾಹಕರಿಗೆ ಮಾರಕ ಆದೇಶ
ಸುಪ್ರೀಂ ಕೋರ್ಟ್ ಹಾಗೂ ಕೆಇಆರ್‌ಸಿ ಆದೇಶವನ್ನು ಏ.5ರಿಂದ ಕರಾರುವಕ್ಕಾಗಿ ಪಾಲಿಸಲು ಬೆಸ್ಕಾಂ ಸೂಚಿಸಿದ್ದು, ಏಕಾಏಕಿ ಈ ಆದೇಶ ಮಾಡಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇದು ಜನರಿಗೆ ಮಾರಕ ಆದೇಶವಾಗಿದ್ದು, ವಿದ್ಯುತ್ ಸಂಪರ್ಕವೇ ಮರೀಚಿಕೆಯಾಗಲಿದೆ.- ರೇಣುಕಾ ಪ್ರಸಾದ್, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವಕ್ತಾರ