ಕೂಡಲಶ್ರೀ ವಿರುದ್ಧವೇ ತಿರುಗಿಬಿದ್ದ ಪಂಚಮಸಾಲಿ ಮುಖಂಡರು! ಯತ್ನಾಳ್ ಪರ ಬ್ಯಾಟಿಂಗ್‌ಗೆ ವಿರೋಧ!

ಬಸನಗೌಡ ಪಾಟೀಲ ಯತ್ನಾಳ ಪರವಾಗಿ ಜಯಮೃತ್ಯುಂಜಯ ಶ್ರೀಗಳು ಬ್ಯಾಟಿಂಗ್ ಮಾಡುತ್ತಿರುವುದಕ್ಕೆ ಪಂಚಮಸಾಲಿ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜವು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಇಲ್ಲ ಎಂದು ಮುಖಂಡರು ಹೇಳಿದ್ದಾರೆ.

why panchamasali leaders outraged against jayamrityunjay Swamiji? here is reason  rav

ಹುಬ್ಬಳ್ಳಿ (ಏ.6): ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಬ್ಯಾಟಿಂಗ್‌ ಮಾಡುತ್ತಿರುವ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ನಡೆಗೆ ಪಂಚಮಸಾಲಿ ಸಮಾಜದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಮ್ಮ ಸಮಾಜ ಇರುವುದು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಅಲ್ಲ. ಶ್ರೀಗಳು ಹೀಗೆ ವ್ಯಕ್ತಿಯ ಪರವಾಗಿ ಹೇಳಿಕೆ ನೀಡಬಾರದು ಎಂದು ಮುಖಂಡರು ಆಕ್ಷೇಪಿಸುವ ಮೂಲಕ ಶ್ರೀಗಳ ವಿರುದ್ಧ ಸಮಾಜದ ಮುಖಂಡರೇ ತಿರುಗಿ ಬಿದ್ದಂತಾಗಿದೆ.

Latest Videos

ನಗರದ ಖಾಸಗಿ ಹೋಟೆಲ್‌ನಲ್ಲಿ "ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್‌ " ಹಾಗೂ ಸಮಾಜದ ಮುಖಂಡರು ಚಿಂತನ- ಮಂಥನ ಸಭೆ ನಡೆಸಿ ಶ್ರೀಗಳ ನಡೆ ಬಗ್ಗೆ ತೀವ್ರವಾಗಿ ಖಂಡಿಸಿದರು. ಮುಂದೆ ಈ ಯಾವುದೇ ವ್ಯಕ್ತಿಯ ಪರವಾಗಿ ಹೇಳಿಕೆ ನೀಡಬಾರದು ಎಂದು ಹೇಳಿದರು.

ಇದನ್ನೂ ಓದಿ:  ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ: ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಹುಬ್ಬಳ್ಳಿ -ಧಾರವಾಡ, ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಪಂಚಮಸಾಲಿ ಸಮಾಜದ ಮುಖಂಡರು ಭಾಗಿಯಾಗಿದ್ದರು. ನಮ್ಮ ಸಮಾಜ ಯಾವುದೇ ವ್ಯಕ್ತಿ ಕೇಂದ್ರೀತವಾಗಬಾರದು ಎಂದು ಮುಖಂಡರು ಹೇಳಿದರು.
ಚಿಂತನ -ಮಂಥನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ಸಮಾಜದ ಸಂಘಟನೆ, ಆರ್ಥಿಕ, ಶೈಕ್ಷಣಿಕವಾಗಿ ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ 2008ರಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆದರೆ, ಇಂದು ಪೀಠದ ಗುರಿ ಮರೆತು ಬೇರೆ ಮಾರ್ಗದೆಡೆಗೆ ಸಾಗುತ್ತಿದೆ. ಶ್ರೀಗಳಾದವರು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ವ್ಯಕ್ತಿ ಅಥವಾ ಪಕ್ಷದ ಪರವಾಗಿ ಶ್ರೀಗಳು ಹೇಳಿಕೆ ನೀಡುತ್ತಿರುವುದು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ಹೇಳಿಕೆ ನೀಡದೇ ಸಮಾಜದ ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜ ಕಟ್ಟುವ ಕೆಲಸ ಮಾಡುವಂತೆ ಶ್ರೀಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪಕ್ಷಾತೀತವಾಗಿ ಪಾಲ್ಗೊಂಡು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಬಸವ ಜಯ ಮೃತ್ಯುಂಜಯ ಶ್ರೀಗಳು ಈಚೆಗೆ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪರವಾಗಿ ಹೋರಾಟ ನಡೆಸುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ. ಶ್ರೀಗಳನ್ನು ಸಮಾಜದ ಸಂಘಟನೆ, ಆರ್ಥಿಕ, ಶೈಕ್ಷಣಿಕವಾಗಿ ಗುರುತಿಸಿ ಮೇಲೆತ್ತುವುದಕ್ಕಾಗಿ ನೇಮಕ ಮಾಡಲಾಗಿದೆ. ಶ್ರೀಗಳು ವ್ಯಕ್ತಿ, ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸ್ವಾಮೀಜಿ, ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಸ್ವತ್ತಾಗಬಾರದು. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂಬುದು ನಮ್ಮೆಲ್ಲರ ಉದ್ದೇಶ ಎಂದರು.

ಶ್ರೀಗಳು ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ. ಹಾಗಾಗಿ ಪಕ್ಷಾತೀತವಾಗಿ ಸಮಾಜದ ಮುಖಂಡರ ಸಭೆ ಕರೆದು ಶ್ರೀಗಳಿಗೆ ಯಾವ ನಿಟ್ಟಿನಲ್ಲಿ ಸಮಾಜವನ್ನು ಕರೆದುಕೊಂಡು ಹೋಗಬೇಕು ಎಂಬುದರ ಕುರಿತು ಮನವರಿಕೆ ಮಾಡಲಾಗುವುದು. ನಮ್ಮ ಮಾತಿಗೆ ಸಹಮತ ವ್ಯಕ್ತಪಡಿಸದೇ ಇದೇ ರೀತಿ ಶ್ರೀಗಳು ಮುಂದುವರೆದಲ್ಲಿ ಎಲ್ಲ ಪಕ್ಷಗಳಲ್ಲಿರುವ ಸಮಾಜದ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಟ್ರಸ್ಟ್‌ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡ್ರ, ಎಲ್‌.ಎಂ.ಪಾಟೀಲ, ರಾಜಶೇಖರ ಮೆಣಸಿನಕಾಯಿ, ಸೋಮಣ್ಣ ಬೇವಿನಮರದ, ನಂದಕುಮಾರ ಪಾಟೀಲ, ಕಲ್ಲಪ್ಪ ಯಲಿವಾಳ, ಜಿ.ಜಿ. ದ್ಯಾಮನಗೌಡ್ರ, ಎಂ.ಎಸ್‌. ಮಲ್ಲಾಪುರ ಸೇರಿದಂತೆ ಹಲವರಿದ್ದರು.

ಇದನ್ನೂ ಓದಿ: 'ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್‌ಗೆ ಬರೆದುಕೊಟ್ಟಿಲ್ಲ' : ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಸಭೆಯಲ್ಲಿ ಕೈಗೊಂಡ ನಿರ್ಣಯ: ಯಾವುದೇ ವ್ಯಕ್ತಿ, ಪಕ್ಷದ ಪರವಾಗಿ ಹೇಳಿಕೆ ನೀಡದಂತೆ ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಮನವರಿಕೆ ಮಾಡುವುದು. ಸಮಾಜವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ಟ್ರಸ್ಟ್‌ನ ಅಡಿ ಇರುವ ಎಲ್ಲ ಜಿಲ್ಲಾ, ತಾಲೂಕು ಸಮಿತಿಗಳನ್ನು ವಿಸರ್ಜಿಸಲಾಗುತ್ತಿದ್ದು, ಒಂದು ತಿಂಗಳೊಳಗೆ ನೂತನ ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳುವುದು. ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಇರುವ 12 ಗುಂಟೆ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣ. ವಿವಿಧ ಮಠ, ಮಾನ್ಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಸಮಾಜ ಬಾಂಧವರನ್ನು ಗುರುತಿಸಿ ಅವರು ಕೈಗೊಳ್ಳುತ್ತಿರುವ ವೈದಿಕ ಪರಂಪರೆ ಪೂಜೆ ಕೈಬಿಟ್ಟು ಬಸವತತ್ವದಡಿ ಪೂಜೆ ಕೈಗೊಳ್ಳುವಂತೆ ಮಾಡುವುದು. ಸಮಾಜದ ಮಕ್ಕಳಿಗೆ ಮುಂದಾಳತ್ವ ತರಬೇತಿ ನೀಡಲಾಗುವುದು. ಹಲವು ವರ್ಷಗಳಿಂದ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರ್ಕಾರದಿಂದ ಈ ವರೆಗೂ ಸಮರ್ಪಕವಾದ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಕಾನೂನು ತಜ್ಞರ ಸಮಿತಿ ಸಮಿತಿ ರಚಿಸಿ 2 ತಿಂಗಳಲ್ಲಿ ಸಂಪೂರ್ಣ ವರದಿ ಸಿದ್ಧಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಇಂದಿನ ಚಿಂತನ ಮಂಥನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು

vuukle one pixel image
click me!