‘ಕೈನಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ- ದೇಶಕ್ಕೆ ಮೇಲ್ಪಂಕ್ತಿ’

Published : Jun 14, 2025, 06:31 AM IST
Shakti Yojana revision

ಸಾರಾಂಶ

 ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಎಂದರೆ ಅದು ಶಕ್ತಿ ಯೋಜನೆ. ಯೋಜನೆ ಜಾರಿಗೆ ಬಂದು 2.5 ವರ್ಷ ಕಳೆದರೂ ಇಂದಿಗೂ ಖ್ಯಾತಿಯಲ್ಲಿ ಮೇಲಕ್ಕೇರುತ್ತಲೇ ಇದೆ. ಇದು ನಾರಿ ಸಬಲೀಕರಣಕ್ಕೆ ಪ್ರೇರಣೆಯಾಗಿದೆ. ಈವರೆಗೆ ಒಟ್ಟು 476 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೇವೆ ಪಡೆದಿದ್ದಾರೆ.  

ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಬಹಳಷ್ಟು ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಒಬ್ಬ ಮಹಿಳೆಯನ್ನು ಸಬಲೀಕರಣಗೊಳಿಸಿದರೆ, ಇಡೀ ಕುಟುಂಬ, ಅದರಿಂದ ಇಡೀ ಸಮಾಜ, ಆ ಮೂಲಕ ಇಡೀ ದೇಶ ಶಕ್ತಿಯುತವಾಗುತ್ತದೆ. ಒಂದು ಕುಟುಂಬದ ಆಧಾರ ಸ್ತಂಭವಾಗಿ ಮಹಿಳೆ ಇರುವುದರಿಂದಲೇ, ಆ ಮಹಿಳೆಗೆ ಸಬಲೀಕರಣದ ಸ್ಪರ್ಶ ನೀಡುವುದು ಅಗತ್ಯವಾಗುತ್ತದೆ. ‘ಯಾವುದೇ ಸಮುದಾಯದ ಏಳಿಗೆಯನ್ನು ಅಳೆಯಬೇಕಾದರೆ, ಆ ಸಮುದಾಯದ ಸ್ತ್ರೀಯರ ಏಳಿಗೆಯನ್ನು ಮಾನದಂಡವಾಗಿ ಪರಿಗಣಿಸಬೇಕು’ ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಹೇಳಿದ್ದರು. ಅಂದರೆ ಇಡೀ ಸಮಾಜದ ಅಭಿವೃದ್ಧಿಗೆ ಮಹಿಳೆಯರ ಪ್ರಗತಿಯೇ ಅಳತೆಗೋಲು ಇದ್ದಂತೆ.

ಪ್ರತಿ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ತರುತ್ತವೆ. ಒಂದೋ ಅವು ಬದ್ಧತೆ ಇಲ್ಲದೆ ಬಿದ್ದುಹೋಗುತ್ತವೆ. ಅಥವಾ ಸರಿಯಾದ ಅನುಷ್ಠಾನ ಇಲ್ಲದೆ ಮೂಲೆ ಸೇರುತ್ತವೆ. ಆದರೆ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಇಂದಿಗೂ ಅತಿ ಜನಪ್ರಿಯ ಯೋಜನೆಯಾಗಿ ಸ್ಥಾಪನೆಯಾಗಿದೆ.

ಶಕ್ತಿ ಯೋಜನೆ ಕಾಂಗ್ರೆಸ್‌ನ ಸಾಹಸ

ಏಕೆಂದರೆ ಇಂತಹ ಯೋಜನೆಯನ್ನು ತರಲು ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ. ಸಾರ್ವಜನಿಕ ಸಾರಿಗೆಯನ್ನು ಮಹಿಳೆಯರ ಪ್ರಯಾಣಕ್ಕಾಗಿ ಸಂಪೂರ್ಣವಾಗಿ ಉಚಿತ ನೀಡಿ, ಪ್ರತಿ ತಿಂಗಳು ಆ ಅಪಾರ ವೆಚ್ಚವನ್ನು ಸರ್ಕಾರವೇ ಭರಿಸುವುದು ಸುಲಭದ ಮಾತಲ್ಲ. ಅಂತಹ ಸಾಹಸವನ್ನು ಕಾಂಗ್ರೆಸ್ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಈ ಯೋಜನೆಯನ್ನು ತಂದಾಗ, ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಮಾನ್ಯವಾಗಿ ಯಾವುದೇ ಯೋಜನೆಗೆ ಆರಂಭದಲ್ಲಿ ಬರುವ ಯಶಸ್ಸು ಅಥವಾ ಮೆಚ್ಚುಗೆ ಮತ್ತೆ ಇರುವುದಿಲ್ಲ. ಆದರೆ 2.5 ವರ್ಷ ಕಳೆದರೂ ಶಕ್ತಿ ಯೋಜನೆ ಇಂದಿಗೂ ಖ್ಯಾತಿಯಲ್ಲಿ ಮೇಲಕ್ಕೇರುತ್ತಲೇ ಇದೆ. ಕನ್ನಡನಾಡಿನ ಮಹಿಳೆಯರು ನಮ್ಮನ್ನು ಹರಸುತ್ತಲೇ ಇದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ ಕೂಡಲೇ ಮಹಿಳೆಯರು ಬಸ್ ಹತ್ತಿ ನಮಗೆ ಇನ್ನು ಫ್ರೀ ಸರ್ವಿಸ್ ಎಂದು ಕಂಡಕ್ಟರ್, ಚಾಲಕರಿಗೆ ಹೇಳಿದ್ದರು. ನಮ್ಮನ್ನು ಅಧಿಕಾರಕ್ಕೆ ತಂದ ಆ ನಾರಿಗಳಿಗೆ ಅಂತಹ ಅಧಿಕಾರ ಖಂಡಿತ ಇದೆ. ಆ ಸಮಯದಲ್ಲಿ ಸರ್ಕಾರ ಆಗಷ್ಟೇ ರಚನೆಯಾಗಿತ್ತು. ಆದರೂ ತಡ ಮಾಡದೆಯೇ ಕೂಡಲೇ ಯೋಜನೆಯನ್ನು ಜಾರಿ ಮಾಡಲಾಯಿತು. ಇದರಿಂದಾಗಿ ಮಹಿಳೆಯರ ಕೈಗೆ ಆರ್ಥಿಕ ಶಕ್ತಿ ಸಿಕ್ಕಿದೆ. ಮಹಿಳೆಯರ ಖರ್ಚು ಕಡಿಮೆ ಆಗಿರುವುದು ಮಾತ್ರವಲ್ಲದೆ, ಇಡೀ ಕುಟುಂಬದ ಸಾರಿಗೆಯ ವೆಚ್ಚವೇ ಇಲ್ಲವಾಗಿದೆ. ಒಟ್ಟಾರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ನಾರಿ ಸಬಲೀಕರಣಕ್ಕೆ ಪ್ರೇರಣೆಯಾಗಿದೆ.

476 ಕೋಟಿ ಬಾರಿ ಮಹಿಳೆಯರ ಪ್ರಯಾಣ

ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 476 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೇವೆ ಪಡೆದಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ದಾಖಲೆ. ಇದಕ್ಕಾಗಿ ನಮ್ಮ ಸರ್ಕಾರ, 12,015 ಕೋಟಿ ರೂ. ಖರ್ಚು ಮಾಡಿದೆ. ಅಂದರೆ ಇಷ್ಟು ಹಣವನ್ನು ನಾಡಿನ ಮಹಿಳೆಯರ ಪ್ರಯಾಣಕ್ಕೆ ಎರಡೂವರೆ ವರ್ಷದಲ್ಲಿ ಖರ್ಚು ಮಾಡಿದ್ದೇವೆ. ಕೆಎಸ್‌ಆರ್‌ಟಿಸಿಯಲ್ಲಿ 144.46 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಅದಕ್ಕಾಗಿ ₹4,563.87 ಕೋಟಿ ಟಿಕೆಟ್ ವೆಚ್ಚ ಭರಿಸಲಾಗಿದೆ. ಬೆಂಗಳೂರಿನ ಬಿಎಂಟಿಸಿಯಲ್ಲಿ 150.94 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ₹2,064.68 ಕೋಟಿ ವೆಚ್ಚ ಮಾಡಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ 111.27 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಅದರ ₹2973.46 ಕೋಟಿ ವೆಚ್ಚ ಭರಿಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್‌ಗಳಲ್ಲಿ 68.87 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದು, ₹2412.26 ಕೋಟಿ ಭರಿಸಲಾಗಿದೆ.

ಉಚಿತ ಬಸ್ ಪ್ರಯಾಣ ಎಂದಾಕ್ಷಣ ಇದು ದುಂದುವೆಚ್ಚ, ಮಹಿಳೆಯರು ಸುಖಾಸುಮ್ಮನೆ ಓಡಾಡುತ್ತಾರೆ ಎಂದೆಲ್ಲ ಕೆಟ್ಟ ಟೀಕೆಗಳು ಬಂದಿವೆ. ಆದರೆ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರು ಒಂದು ರೂಪಾಯಿ ಖರ್ಚಿಲ್ಲದೆ ಓಡಾಡಿದ್ದಾರೆ. ವಿದ್ಯಾರ್ಥಿನಿಯರು ಹಣದ ಚಿಂತೆ ಇಲ್ಲದೆ ಪ್ರಯಾಣಿಸಿದ್ದಾರೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಆಸೆ ಇಟ್ಟುಕೊಂಡವರು ಅದನ್ನು ಪೂರೈಸಿಕೊಂಡು ಪುಣ್ಯ ಸಂಪಾದಿಸಿದ್ದಾರೆ. ಮಹಿಳೆಯರು ಎಂದರೆ ಅಡುಗೆ ಮನೆಗೆ ಸೀಮಿತವಾದವರು ಎಂಬ ಕೀಳು ಮನಸ್ಥಿತಿಯಿಂದ ಹೊರಬರಬೇಕಿದೆ ಎಂಬ ಸಂದೇಶವನ್ನು ನಮ್ಮ ಯೋಜನೆ ನೀಡಿದೆ.

ಸ್ವಾವಲಂಬಿ ಮಹಿಳೆಯರ ಶಕ್ತಿ ಯೋಜನೆ

ದಕ್ಷಿಣ ಏಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಬಡ ಕುಟುಂಬಗಳು ತಿಂಗಳಿನ ಆದಾಯದ ಶೇ.20ರಷ್ಟು ಹಣವನ್ನು ಸಾರಿಗೆಗೆ ಖರ್ಚು ಮಾಡುತ್ತವೆ ಎಂದು ವಿಶ್ವಬ್ಯಾಂಕ್‌ನ ಒಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಅನೇಕ ಮಹಿಳೆಯರು ಉದ್ಯೋಗಕ್ಕೆ ಅಥವಾ ಬೇರಾವುದೇ ಉದ್ದೇಶಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡದೆ ಮನೆಯಲ್ಲೇ ಉಳಿಯುತ್ತಾರೆ. ಉಚಿತ ಬಸ್ ಸೇವೆಯಿಂದಾಗಿ ಈಗ ಮಹಿಳೆಯರ ಉದ್ಯೋಗದ ಓಡಾಟ ಸುಲಭವಾಗಿದೆ. ವಿಜಯಪುರ ಜಿಲ್ಲೆಯ ಇಂಡಿಯ 20 ಮಹಿಳೆಯರು ‘ಒಡಲ ಧ್ವನಿʼ ಎಂಬ ಸಂಘಟನೆ ರೂಪಿಸಿಕೊಂಡು, ಹೋಳಿಗೆ ತಯಾರಿಸಿ, ಬೆಂಗಳೂರಿಗೆ ಉಚಿತ ಬಸ್ ಪ್ರಯಾಣ ಮಾಡಿ ಬಂದು ಹೋಳಿಗೆ ಮಾರಾಟ ಮಾಡುತ್ತಾರೆ. ಮೊದಲು ಪ್ರತಿ ದಿನ 200 ಹೋಳಿಗೆ ಮಾಡುತ್ತಿದ್ದವರು, ಈಗ 1000 ಹೋಳಿಗೆ ತಯಾರಿಸಿ ಮಾರುತ್ತಿದ್ದಾರೆ. ಇವರಿಗೆ ಉಚಿತ ಬಸ್ ಪ್ರಯಾಣದಿಂದ ಓಡಾಟ ಸುಲಭವಾಗಿದೆ. ಇಂತಹ ಅವೆಷ್ಟೋ ಸ್ವಾವಲಂಬಿ, ಸ್ವಾಭಿಮಾನಿ ಮಹಿಳೆಯರಿಗೆ ಈ ಯೋಜನೆ ಶಕ್ತಿ ನೀಡಿದೆ.

ದೇವಸ್ಥಾನ ಅಭಿವೃದ್ಧಿಗೂ ಸಹಕಾರಿ

ಮಲೆ ಮಾದೇಶ್ವರ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಡ ಮಹಿಳೆಯರು ಇಡೀ ವರ್ಷ ಹಣ ಕೂಡಿ ಇಡುತ್ತಿದ್ದರು. ಕಳೆದೆರಡು ವರ್ಷಗಳಿಂದ ಯಾರೂ ಹಣದ ಬಗ್ಗೆ ಚಿಂತಿಸುತ್ತಿಲ್ಲ. ಮಹಿಳೆಯರು ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದಲೇ ರಾಜ್ಯದ 34,565 ಮುಜರಾಯಿ ದೇವಸ್ಥಾನಗಳು ಸೇರಿ 1 ಲಕ್ಷಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳ ಆದಾಯದಲ್ಲಿ ಏರಿಕೆಯಾಗಿದೆ. 2022-23 ರಲ್ಲಿ ದೇವಾಲಯಗಳ ಹುಂಡಿಯಿಂದ ₹8.48 ಕೋಟಿ ದೊರೆತರೆ, 2023-24 ರಲ್ಲಿ ₹9.59 ಕೋಟಿ ದೊರೆತಿದೆ. 2024-25ರಲ್ಲಿ ಇದು ₹18.08 ಕೋಟಿಗೆ ತಲುಪಿದೆ. ಅಂದರೆ ಶಕ್ತಿ ಯೋಜನೆಯಿಂದಾಗಿ ದೇವಸ್ಥಾನಗಳ ಅಭಿವೃದ್ಧಿ ಸಾಧ್ಯವಾಗಿದೆ. ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿ ವೇಗವಾಗಿದೆ.

ಯೋಜನೆಗೆ ಇನ್ನಷ್ಟು ಚುರುಕು

ಗ್ಯಾರಂಟಿಗಳನ್ನು ಹಿಂದಕ್ಕೆ ಪಡೆಯಲಿ ಎಂದೇ ಪ್ರತಿಪಕ್ಷಗಳು ಕಾಯುತ್ತಿವೆ. ಆದರೆ ಕಾಂಗ್ರೆಸ್ ಎಂದಿಗೂ ಕೊಟ್ಟ ಮಾತನ್ನು ತಪ್ಪಿಲ್ಲ. ಈ ಯೋಜನೆ ಇನ್ನಷ್ಟು ಚುರುಕಾಗಿ ಮುಂದಕ್ಕೆ ಸಾಗಿ ಇಡೀ ದೇಶಕ್ಕೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಡಲಿದೆ. ಶಕ್ತಿ ಯೋಜನೆ ಆರಂಭವಾದಾಗ ವೃದ್ಧೆಯೊಬ್ಬರು ಬಸ್ಸಿನ ಮೆಟ್ಟಿಲಿಗೆ ನಮಸ್ಕಾರ ಮಾಡಿ ನಮ್ಮ ಸರ್ಕಾರವನ್ನು ಹರಸಿದ್ದರು. ಮಹಿಳೆಯರು ಬಸ್‌ನಲ್ಲಿ ಹಾಡು ಹಾಡುತ್ತಾ ಉಚಿತ ಸೇವೆಯ ಸಂಭ್ರಮಾಚರಣೆ ಮಾಡಿದ್ದರು. ಆ ಎಲ್ಲ ಹಾರೈಕೆ, ಆಶೀರ್ವಾದದ ಬಲದೊಂದಿಗೆ ಕಾಂಗ್ರೆಸ್ ಗ್ಯಾರಂಟಿಗಳನ್ನು ಇನ್ನಷ್ಟು ಶಕ್ತಿಯುತಗೊಳಿಸಿದೆ. ನುಡಿದಂತೆ ನಡೆಯುವುದು ಎನ್ನುವುದು ಕೇವಲ ಒಂದು ವಾಕ್ಯವಲ್ಲ, ಅದೇ ನಮ್ಮ ಸಂಕಲ್ಪ ಶಕ್ತಿ.

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರ ಮಾರ್ಗದರ್ಶನದಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಯೋಜನೆಗೆ ಅಗತ್ಯವಾದ ಅನುದಾನವನ್ನು ಒದಗಿಸಿದ್ದಾರೆ. ನಮ್ಮ ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇವರೆಲ್ಲರಿಗೂ ನಾನು ರಾಜ್ಯದ ನಾರಿಯರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌