ಜೂ.16ರಿಂದ ಬೈಕ್‌ಟ್ಯಾಕ್ಸಿ ಸೇವೆಗೆ ಪೂರ್ತಿ ನಿರ್ಬಂಧ

Published : Jun 14, 2025, 05:42 AM IST
Bike Taxi Banned

ಸಾರಾಂಶ

ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ಒದಗಿಸುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಕಂಪನಿಗಳಿಗೆ ನಿರ್ದೇಶಿಸಿ ಹೈಕೋರ್ಟ್‌ ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ.

 ಬೆಂಗಳೂರು :  ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ಒದಗಿಸುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಕಂಪನಿಗಳಿಗೆ ನಿರ್ದೇಶಿಸಿ ಹೈಕೋರ್ಟ್‌ ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ. ಹೀಗಾಗಿ ಈ ಮೊದಲು ನಿಗದಿ ಆದಂತೆ ಜೂ.16ರಿಂದ ಬೈಕ್‌ ಟ್ಯಾಕ್ಸಿ ಸೇವೆಗೆ ಬ್ರೇಕ್‌ ಬೀಳಲಿದೆ.

ಏಕ ಸದಸ್ಯಪೀಠ ಆದೇಶ ರದ್ದುಪಡಿಸುವಂತೆ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎನ್ಐ ಟಕ್ನಾಲಜಿ ಪ್ರೈವೇಟ್ ಲಿಮಿಟೆಡ್(ಓಲಾ) ಇನ್ನಿತರ ಅಗ್ರಿಗೇಟರ್‌ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

ಈ ಮೇಲ್ಮನವಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠ, ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿಲ್ಲ. ರಾಜ್ಯ ಸರ್ಕಾರ ಜೂ.15ರೊಳಗೆ ನಿಯಮಗಳನ್ನು ರೂಪಿಸಬೇಕು. ಇಲ್ಲದೆ ಹೋದರೆ ಜೂ.15ರ ನಂತರ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ಮುಂದುವರಿಸಬಾರದು ಎಂದು ಏಕಸದಸ್ಯ ಪೀಠ ನಿರ್ದೇಶಿಸಿದೆ. ಇದೀಗ ಸರ್ಕಾರ ನಿಯಮಗಳನ್ನು ರೂಪಿಸುತ್ತಿಲ್ಲ ಎಂದು ತಿಳಿಸಿದೆ. ಇಂತಹ ಸಂದರ್ಭದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರೆಸಲು ಅನುಮತಿಸಿ ಮೇಲ್ಮನವಿದಾರ ಕಂಪನಿಗಳಿಗೆ ಮಧ್ಯಂತರ ಪರಿಹಾರ ನೀಡಲಾಗದು ಎಂದು ಹೇಳಿತು.

ನಂತರ ಮೇಲ್ಮನವಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಸರ್ಕಾರದ ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಮೇಲ್ಮನವಿದಾರ ಕಂಪನಿಗಳು, ನಾಲ್ಕು ಚಕ್ರ ವಾಹನಗಳು ಮತ್ತು ಮೂರು ಚಕ್ರ ವಾಹನಗಳ ಟ್ಯಾಕ್ಸಿ ಸೇವೆ ಒದಗಿಸಲು ಅನುಮತಿ ಪಡೆದು ತೆರಿಗೆ ಪಾವತಿಸಿ ಬಾಡಿಗೆ ವಾಹನಗಳಾಗಿ ನಿರ್ವಹಿಸುತ್ತಿವೆ. ಸಂಚಾರ ದಟ್ಟಣೆಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ದೊಡ್ಡ ವಾಹನಗಳ ಸಂಚಾರ ವಿಭಿನ್ನವಾಗಿರಲಿದೆ. ದ್ವಿಚಕ್ರವಾಹನಗಳು ಬಾಡಿಗೆ ವಾಹನಗಳಾಗಿ ಕಾರ್ಯಾಚರಿಸಲು ಸಾಧ್ಯವಿಲ್ಲ. ಅದಕ್ಕೆ ಇಡೀ ದೇಶದಲ್ಲಿ ಎಂಟು ರಾಜ್ಯಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ದೇಶದ ಹಲವು ರಾಜ್ಯಗಳಲ್ಲಿ ಬೈಕ್‌ ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ದ್ವಿಚಕ್ರ ವಾಹನಗಳು ದೊಡ್ಡ ವಾಹನಗಳಿಗಿಂದ ಹೆಚ್ಚು ಪರಿಸರ ಸ್ನೇಹಿಯಾಗಿದೆ. ಇದರಿಂದ ಪರಿಸರಕ್ಕೆ ಹಾನಿ ಪ್ರಮಾಣ ಅತ್ಯಂತ ಕಡಿಮೆ ಇರಲಿದೆ. ಆದ್ದರಿಂದ ದ್ವಿಚಕ್ರ ವಾಹನಗಳಲ್ಲಿ ಬಾಡಿಗೆ ವಾಹನಗಳನ್ನಾಗಿ ಬಳಕೆಗೆ ಅನುಮತಿ ನೀಡಬೇಕು ಎಂದು ಪೀಠಕ್ಕೆ ಕೋರಿದರು.

ಅಲ್ಲದೆ, ಕೇವಲ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ದ್ವಿಚಕ್ರ ವಾಹನಗಳಿಗೆ ಬಾಡಿಗೆ ವಾಹನಗಳನ್ನಾಗಿ ಬಳಸಲು ಅವಕಾಶ ಕಲ್ಪಿಸಬಹುದಾಗಿದೆ. ಬಿಳಿ ಬಣ್ಣದ ನಂಬರ್ ಫಲಕವನ್ನು ಹಸಿರು ಬಣ್ಣಕ್ಕೆ ಬದಲಾವಣೆ ಮಾಡುವುದು ಮಾತ್ರ ಅಗತ್ಯವಿದೆ. ಆದರೆ, ಯಾವುದೇ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಬೈಕ್‌ ಟ್ಯಾಕ್ಸಿ ಸೇವೆ ಮುಂದುವರೆಸಲು ಸರ್ಕಾರ ನಿಯಮಗಳನ್ನು ರೂಪಿಸುವಂತಿದ್ದರೆ, ಮೇಲ್ಮನವಿದಾರ ಕಂಪನಿಗಳ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು. ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಸಬೇಕು ಎಂದು ಹೇಳಬಹುದಾಗಿತ್ತು. ಆದರೆ, ಸರ್ಕಾರ ನಿಯಮಗಳನ್ನು ರೂಪಿಸುತ್ತಿಲ್ಲ ಎಂದು ಹೇಳಿರುವ ಕಾರಣ ಜೂ.15ರ ನಂತರ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ಮುಂದುವರೆಯುವುದು ಸಂಶಯಾಸ್ಪದ. ಹಾಗಾಗಿ, ಮೇಲ್ಮನವಿದಾರರಿಗೆ ಮಧ್ಯಂತರ ಪರಿಹಾರ ಕಲ್ಪಿಸಲಾಗದು’ ಎಂದು ತಿಳಿಸಿತು.

ಪ್ರಕರಣದ ಹಿನ್ನೆಲೆ:

ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ ಹಳದಿ ನೋಂದಣಿ ಫಲಕ (ಎಲ್ಲೋ ಬೋರ್ಡ್) ಹೊಂದಿರುವ ಸಾರಿಗೆ ವಾಹನಗಳಂತೆ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಊಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್‌ಪೋರ್ಟೇಷನ್‌ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು.

ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಬೈಕ್ ಸೇವೆ ಸ್ಥಗಿತಗೊಳಿಸಲು 2025ರ ಏ.2ರಂದು ಆದೇಶಿಸಿತ್ತು. ಆದರೆ, ಸರ್ಕಾರ ನಿಯಮಗಳನ್ನು ರೂಪಿಸುವವರೆಗೆ ಅಂದರೆ ಜೂ.15ರವರೆಗ ಬೈಕ್‌ ಟ್ಯಾಕ್ಸಿ ಮುಂದುವರಿಸಬಹುದು ಎಂದು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಅಗ್ರಿಗ್ರೇಟರ್ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ