Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, ಶೇ.4ರ ಮೇಲೇರಿದ ಪಾಸಿಟಿವಿಟಿ ದರ

By Suvarna NewsFirst Published Jan 7, 2022, 11:43 PM IST
Highlights

* ಕರ್ನಾಟಕದಲ್ಲಿ ಕೊರೋನಾ ಕೇಸ್ ದ್ವಿಗುಣ
* ಶೇ 4.15ಕ್ಕೆ ಏರಿಕೆ ಪಾಸಿಟಿವಿಟಿ ರೇಟ್
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ 

ಬೆಂಗಳೂರು, (ಜ.07):: ಕರ್ನಾಟಕದಲ್ಲಿ ಶುಕ್ರವಾರ (ಜ.7) ಒಂದೇ ದಿನ 8449 ಕೊರೋನಾ ಪಾಸಿಟಿವ್ (Coronavirus) ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಈವರೆಗೆ 30,31,052 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 29,62,548 ಮಂದಿ ಚೇತರಿಸಿಕೊಂಡಿದ್ದಾರೆ. ಕೊರೋನಾದಿಂದ ಒಟ್ಟು 38,362 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 30,113 ಸಕ್ರಿಯ ಪ್ರಕರಣಗಳಿವೆ. 

Lockdown ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಚಿವ ಸುಧಾಕರ್

ಇನ್ನು  ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 4.15 ಇದ್ದು, ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ 0.04 ಇದೆ.  ದಿನೇ ದಿನೇ ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ದ್ವಿಗುಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಬೆಂಗಳೂರು ನಗರದಲ್ಲೇ ಕಳೆದ 24 ಗಂಟೆಗಳಲ್ಲಿ 6812 ಕೇಸ್ ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.  352 ಮಂದಿ ಚೇತರಿಸಿಕೊಂಡಿದ್ದಾರೆ. 

ಈ ಮೂಲಕ ನಗರದಲ್ಲಿಒಟ್ಟು 12,83,186 ಜನರಲ್ಲಿ ಸೋಂಕು ದೃಢಪಟ್ಟಿದ್ದು,  ಒಟ್ಟು 16,417 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ.  12,41,398 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 25,370 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ 6812, ದಕ್ಷಿಣ ಕನ್ನಡ 211, ಮೈಸೂರು 219, ಮಂಡ್ಯ 129, ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 74, ಬಾಗಲಕೋಟೆ, ರಾಯಚೂರು 2, ಬಳ್ಳಾರಿ 62, ಬೀದರ್ 20, ಚಾಮರಾಜನಗರ 7, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 24, ಚಿತ್ರದುರ್ಗ 14, ದಾವಣಗೆರೆ 18, ಧಾರವಾಡ 66, ಗದಗ 10, ಹಾಸನ 89, ಕಲಬುರಗಿ 43, ಕೊಡಗು 29, ಕೋಲಾರ 98, ಕೊಪ್ಪಳ 5, ರಾಮನಗರ 20, ಶಿವಮೊಗ್ಗ 43, ತುಮಕೂರು 96, ಉಡುಪಿ 148, ಉತ್ತರ ಕನ್ನಡ, ವಿಜಯಪುರ 36, ಯಾದಗಿರಿ 1.

ರಾಜ್ಯದಲ್ಲಿ 2 ವಾರ ವೀಕೆಂಡ್ ಕರ್ಫ್ಯೂ 
ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew)  ಇರಲಿದೆ ಎಂದು  ಸ್ಪಷ್ಟಪಡಿಸಿದರು

ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು. 

ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ವೀಕೆಂಡ್​ನಲ್ಲಿ ಹೋಟೆಲ್​​, ಬಾರ್​, ರೆಸ್ಟೋರೆಂಟ್​ ಬಂದ್​ ಮಾಡಿಸಲು ಸುತ್ತೋಲೆ ಹೊರಡಿಸಲಾಗಿದೆ.  ಪಿಎಸ್​ಐಗಳು ತಾವೇ ಮುಂದೆ ನಿಂತು ಹೋಟೆಲ್, ಬಾರ್ , ರೆಸ್ಟೋರೆಂಟ್​ ಅನ್ನು ಶುಕ್ರವಾರ ರಾತ್ರಿ ಬಂದ್​ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶ ಹಿನ್ನೆಲೆ ಎಲ್ಲ ಪಿಎಸ್​ಐಗಳಿಗೂ ಸೂಚನೆ ನೀಡಲಾಗಿದೆ.

click me!