ಜನಪ್ರತಿನಿಧಿಗಳ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವ ಕೇಂದ್ರ ಸಚಿವ ಗಡ್ಕರಿ ಅವರಿಗೆ ಮನವಿ ಮಾಡಿ ನಗರ ಪಟ್ಟಣಗಳ ಜನರಿಗೆ ಈ ರಸ್ತೆಯ ಉಪಯೋಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದ ಸಚಿವ ಸಿ.ಸಿ.ಪಾಟೀಲ್
ವಿಧಾನ ಪರಿಷತ್(ಡಿ.29): ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಯ ಸೌಲಭ್ಯವನ್ನು ಹೈವೇ ಪಕ್ಕದ ಪ್ರಮುಖ ಪಟ್ಟಣ ಮತ್ತು ಜಿಲ್ಲಾ ಕೇಂದ್ರಗಳ ಜನರೂ ಬಳಸಿಕೊಳ್ಳುವಂತೆ ಮಾಡಬೇಕು’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.
ಬುಧವಾರ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ರಸ್ತೆ ಯಾವುದೇ ಅಡೆತಡೆಯಿಲ್ಲದೇ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಒಂದೆರಡು ಕಡೆ ಮಾತ್ರ ಈ ರಸ್ತೆಗೆ ಪ್ರವೇಶ ಮತ್ತು ನಿರ್ಗಮನ ಮಾರ್ಗವಿದೆ. ಹೀಗಾಗಿ ಮಾರ್ಗ ಮಧ್ಯ ಬರುವ ಎಲ್ಲ ಪಟ್ಟಣ, ನಗರಗಳನ್ನು ಈ ರಸ್ತೆಗೆ ಸಂಪರ್ಕಿಸಲು ಬರುವುದಿಲ್ಲ, ಆದರೂ ಜನಪ್ರತಿನಿಧಿಗಳ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವ ಕೇಂದ್ರ ಸಚಿವ ಗಡ್ಕರಿ ಅವರಿಗೆ ಮನವಿ ಮಾಡಿ ನಗರ ಪಟ್ಟಣಗಳ ಜನರಿಗೆ ಈ ರಸ್ತೆಯ ಉಪಯೋಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು’ ಎಂದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಬಗ್ಗೆ ಕೇಳಿ ಬಂದಿರುವ ದೂರುಗಳನ್ನು ಪ್ರಾಧಿಕಾರದ ಗಮನಕ್ಕೆ ತಂದು ಸರಿಪಡಿಸಲು ಸೂಚಿಸಲಾಗುವುದು ಎಂದರು.
undefined
ಮಂಡ್ಯ: ಕೆ.ಕೋಡಿಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಅಸ್ತು, ಪ್ರತಾಪ್ ಸಿಂಹ
ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು, ಈ ರಸ್ತೆಗಳಲ್ಲಿನ ಉಬ್ಬು-ತಗ್ಗು ಸರಿಪಡಿಸಬೇಕು, ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಎಕ್ಸ್‌ಪ್ರೆಸ್ ವೇ ನಡುವೆ ಬರುವ ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯ ಜನರು ನೇರವಾಗಿ ಈ ರಸ್ತೆ ಪ್ರಯೋಜನ ಪಡೆಯುವುದರಿಂದ ವಂಚಿತರಾಗಲಿದ್ದಾರೆ. ಹಾಗಾಗಿ ಈ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.