ನೀಲಾವರ ಗೋಶಾಲೆಯಲ್ಲಿ ಸಗಣಿಯಿಂದ ವಿದ್ಯುತ್‌ ಉತ್ಪಾದನೆಗೆ ಚಿಂತನೆ!

By Santosh NaikFirst Published Jul 11, 2022, 7:31 PM IST
Highlights

ಹಸುವಿನ ಸಗಣಿಯಿಂದ ಏನೇನೆಲ್ಲಾ ಉತ್ಪಾದನೆ ಮಾಡಬಹುದು. ಆದರೆ, ಉಡುಪಿಯ ನೀಲಾವರ ಗೋಶಾಲೆ, ಹಸುವಿನ ಸಗಣಿಯಿಂದ ವಿದ್ಯುತ್‌ ಉತ್ಪಾದನೆ ಮಾಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ. ಶೀಘ್ರದಲ್ಲೇ ಇದನ್ನು ಪ್ರಾರಂಭ ಮಾಡುವುದಾಗಿ ಹೇಳಿದೆ. ಆ ಮೂಲಕ ಗೋಹತ್ಯೆ ಸಮಸ್ಯೆಗೆ ಪರೋಕ್ಷವಾಗಿ ಪರಿಹಾರ ಮಾಡುವ ಗುರಿ ಇರಿಸಿಕೊಂಡಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್‌ ಸುವರ್ಣ ನ್ಯೂಸ್
ಉಡುಪಿ (ಜುಲೈ 11):  ಹಸುವನ್ನು ಕಾಮಧೇನು ಎಂದು ಸುಮ್ಮನೆ ಕರೆಯುವುದಿಲ್ಲ. ಗೋವು ಯಾವತ್ತೂ ನಿಷ್ಪ್ರಯೋಜಕ ಆಗೋದಕ್ಕೆ ಸಾಧ್ಯವಿಲ್ಲ. ಹಾಲು ಕೊಡುವುದನ್ನು ನಿಲ್ಲಿಸಿದ ನಂತರ ಗೋವುಗಳನ್ನು ಮಾರಾಟ ಮಾಡಬೇಕಾಗಿಲ್ಲ , ಕರಾವಳಿಯ ಜ್ವಲಂತ ಸಮಸ್ಯೆಯಾದ ಗೋಹತ್ಯೆಗೆ ಕಡಿವಾಣ ಹಾಕಬಲ್ಲ ಯೋಜನೆಯೊಂದು ಜಾರಿಗೆ ಬರುತ್ತಿದೆ . ಪೇಜಾವರ ಮಠದ ನೀಲಾವರ ಗೋಶಾಲೆಯಲ್ಲಿ , ಗೊಡ್ಡು ದಿನಗಳಿಂದಲೂ , ಲಾಭವಿದೆ ಎಂದು ಸಾಬೀತು ಮಾಡುವ ಯೋಜನೆಯನ್ನು ಜಾರಿಗೆ ಬರುತ್ತಿದೆ . ಕರಾವಳಿ ಜಿಲ್ಲೆ ಸದ್ಯಕ್ಕೆ ಎದುರಿಸುತ್ತಿರುವ ಗಂಭೀರ ಸಾಮಾಜಿಕ ಸಮಸ್ಯೆ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ. ಹಾಲು ನೀಡುವುದನ್ನು ನಿಲ್ಲಿಸಿದ ಗೊಡ್ಡು ದನಗಳ ನಿರ್ವಹಣೆ ಹೈನುಗಾರಿಕೆಯಲ್ಲಿ ಅತಿ ದೊಡ್ಡ ಸವಾಲಾಗಿದೆ. ಒಂದು ಹಸುಗಳು ಹಣದಾಸೆಗೆ ಕಸಾಯಿಕಾನೆ ಸೇರುತ್ತಿದೆ, ಇಲ್ಲವೇ ಬೀದಿಪಾಲಾದ ಹಸುಗಳನ್ನು ದುಷ್ಕರ್ಮಿಗಳು ಕೊಂಡೊಯ್ಯುತ್ತಿದ್ದಾರೆ. ಹಲವು ಸಂಕಟಗಳ ನಡುವೆ, ನೀಲಾವರದ ಗೋಶಾಲೆಯನ್ನು ಪೇಜಾವರ ಮಠಾಧೀಶರು ನಡೆಸಿಕೊಂಡು ಬರುತ್ತಿದ್ದಾರೆ.  ಪೊಲೀಸ್ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಗಾಯಾಳು ದನಗಳು, ನಿಷ್ಪ್ರಯೋಜಕವೆಂದು ಬೀದಿಪಾಲಾದ ಗೊಡ್ಡು, ರೋಗಗ್ರಸ್ತ ದನಗಳು ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಅನಾಥ ದನಗಳ ರಕ್ಷಣೆಯನ್ನು ಮಾಡುತ್ತಿದ್ದಾರೆ. ಅದಕ್ಕಂತಲೇ ಮಾಸಿಕ ಸುಮಾರು 30ರಿಂದ 40 ಲಕ್ಷ ರೂಪಾಯಿ ವ್ಯಯಿಸುತ್ತಿದ್ದಾರೆ.  ಶೂನ್ಯ ಸಂಪಾದನೆಯ ಈ ಸಮಾಜ ಸೇವೆಗೆ, ಇದೀಗ ಅನಾಥ ಗೋವುಗಳೇ ಆಸರೆಯಾಗುವ ನಿರೀಕ್ಷೆಯಿದೆ. 

ಗೋಶಾಲೆಯ ಬಳಕೆಗೆ ವಿದ್ಯುತ್‌: ಹೌದು, ಸೆಗಣಿಯಿಂದ (Cow Dung) ವಿದ್ಯುತ್ (electricity ) ಉತ್ಪಾದಿಸಬಲ್ಲ ಮಹತ್ವಕಾಂಕ್ಷಿ ಯೋಜನೆಯೊಂದು ನೀಲಾವರ ಗೋಶಾಲೆಯಲ್ಲಿ (Neelavara Goshala) ಜಾರಿಯಾಗುತ್ತಿದೆ. ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ನೀಲಾವರ ಗೋಶಾಲೆ ಯನ್ನು ಆಯ್ಕೆ ಮಾಡಲಾಗಿದೆ. ಹಸುಗಳ (Cows) ಸಗಣಿಯಿಂದಲೇ ಪ್ರತಿದಿನ ಸಾವಿರಾರು ಯೂನಿಟ್ ವಿದ್ಯುತ್ ಉತ್ಪಾದಿಸಬಲ್ಲ ಘಟಕ ತೆರೆಯಲಾಗುತ್ತಿದೆ. ಗೋಶಾಲೆಯ ಬಳಕೆಗೆ ಉಪಯೋಗಿಸಿ ಉಳಿದ ವಿದ್ಯುತ್ತನ್ನು ಮೆಸ್ಕಾಂಗೆ (Mescom) ಮಾರಾಟ ಮಾಡುವ ಯೋಜನೆ ಇದಾಗಿದೆ.

ಗೋಮಯ ಆಧಾರಿತ ಬಯೋ ವಿದ್ಯುತ್‌ ಘಟಕ: ನೀಲಾವರ ಗೋಶಾಲೆಯಲ್ಲಿ ರಾಜ್ಯದ ಮೊದಲ ಗೋಮಯ ಆಧಾರಿತ  ಬಯೋ ವಿದ್ಯುತ್ ಘಟಕ (Bio electricity Plant) ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ನವೀಕಿಸಬಹುದಾದ ಇಂಧನಮಂತ್ರಾಲಯದ (central government renewable energy department) ವತಿಯಿಂದ  ಗೋಶಾಲೆಯಲ್ಲಿ  ಗೋಮಯ ಆಧಾರಿತ ಮೊದಲ ಬಯೋ ವಿದ್ಯುತ್ ಘಟಕ ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರಕಿದೆ. ಇಲಾಖೆಯ ರಾಜ್ಯಮಂತ್ರಿ ಭಗವಂತ್ ಖೂಬಾ (bhagwanth khuba) ಅವರು ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ್ದ ಸಂದರ್ಭ ಈ ಬಗ್ಗೆ ಸಮಾಲೇಚನೆ ನಡೆಸಿದ್ದರು ಗೋಮಯವನ್ನು ಬಳಸಿಕೊಂಡು ವಿದ್ಯುತ್ ತಯಾರಿಯು ಭವಿಷ್ಯದ ಭರವಸೆಯ ಇಂಧನ ಮೂಲವಾಗಿದ್ದು ಇದರಿಂದ ಗೋರಕ್ಷಣೆಯ ಕಾರ್ಯಕ್ಕೆ ಬಲಬಂದಂತಾಗುತ್ತದೆ.

ಇದನ್ನೂ ಓದಿ: ಮುಂದಿನ ಡಿಸೆಂಬರ್‌ಗೆ ರಾಮಕುಂಜದಲ್ಲಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ: ಪ್ರಭು ಚವ್ಹಾಣ್‌

ಅಲ್ಲದೇ ಪರಿಸರ ಸ್ನೇಹಿಯೂ ಆಗಿರುವುದರಿಂದ ಕೇಂದ್ರ ಸರ್ಕಾರವು ಈ ಬಗ್ಗೆ ವಿಶೇಷ ಪ್ರೋತ್ಸಾಹ ನೀಡಲು ಉದ್ದೇಶಿಸಿದೆ.   ನೀಲಾವರ ಗೋಶಾಲೆ ಮತ್ತು ಆಸುಪಾಸಿನ ಗೋಶಾಲೆಗಳು ಮತ್ತು ಹೈನುಗಾರರಿಂದಲೂ ಈ ಘಟಕಕ್ಕೆ ಬೇಕಾದ ಗೋಮಯವನ್ನು ಪಡೆಯಲು ಅವಕಾಶವಿದೆ . ಇಲ್ಲಿ  ಮತ್ತು ಈಗ ಇರುವ ಗೋವುಗಳ ಸಂಖ್ಯೆ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಿಷ್ಠ 5000 ಹಸುಗಳ ದಿನವಹಿ ಗೋಮಯವನ್ನು ಅಂದಾಜಿಸಿ ಯೋಜನೆ ಸಿದ್ಧಪಡಿಸಲಾಗುತ್ತದೆ . ಇವುಗಳಿಂದ ಕನಿಷ್ಠ ಅಂದಾಜು ದಿನವೊಂದಕ್ಕೆ 1200 ಯುನಿಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. 

ಇದನ್ನೂ ಓದಿ: ರಾಜ್ಯದ ಮೊದಲ ಸರ್ಕಾರಿ ಗೋಶಾಲೆ, ಗೋವು ದತ್ತು ಪಡೆಯಲೂ ಅವಕಾಶ!

10 ಕೋಟಿ ರೂಪಾಯಿ ವೆಚ್ಚ:  ಸ್ಲರಿ( ಸೆಗಣಿ ಮಿಶ್ರಿತ ನೀರು )ಕೃಷಿಗೆ ಅತ್ಯುತ್ತಮವಾಗಿದ್ದು ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ  ಟ್ಯಾಂಕರ್ ಮೂಲಕ ಮಾರಾಟ ಮಾಡುವುದರಿಂದಲೂ ಗೋಶಾಲೆಗೆ ಆದಾಯ ಬರಲು ಅವಕಾಶ ಇದೆ .  ಈ ಸ್ಥಾವರ ಸ್ಥಾಪನೆಗೆ  ಅಂದಾಜು ಹತ್ತು ಕೋಟಿ ರೂ ವೆಚ್ಚವಾಗಬಹುದು . ಮುಂದಿನ ಎರಡು ಮೂರು ತಿಂಗಳೊಳಗೆ ಈ ಯೋಜನಾ ವರದಿಯನ್ನು ಇಲಾಖೆಗೆ ಸಲ್ಲಿಸಿ ತಾತ್ವಿಕ ಅನುಮೋದನೆ ಮತ್ತು  ಯೋಜನಾ  ಅನುದಾನವನ್ನು ಪಡೆಯುವ ಚಿಂತನೆ ಇದೆ.  

click me!