ರಾಜ್ಯದ ಐದು ಜಿಲ್ಲೆಗಳಲ್ಲಿ ಮಾನವ-ಚಿರತೆಗಳ ಸಂಘರ್ಷ ಹೆಚ್ಚಿದ್ದು, ಇದಕ್ಕೆ ಆಯಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿ ಅಥವಾ ಗಣಿಗಾರಿಕೆಗಳು ಕಾರಣವಾಗಿವೆ.
ಬೆಂಗಳೂರು (ಡಿ.09): ರಾಜ್ಯದ ಐದು ಜಿಲ್ಲೆಗಳಲ್ಲಿ ಮಾನವ-ಚಿರತೆಗಳ ಸಂಘರ್ಷ ಹೆಚ್ಚಿದ್ದು, ಇದಕ್ಕೆ ಆಯಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿ ಅಥವಾ ಗಣಿಗಾರಿಕೆಗಳು ಕಾರಣವಾಗಿವೆ. ಇನ್ನಾದರು ಚಿರತೆಗಳ ಆವಾಸ ಸ್ಥಾನ ಉಳಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮುಖ್ಯಮಂತ್ರಿಗಳಿಗೆ ಸಲಹಾ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಸುಮಾರು 2,500 ಚಿರತೆಗಳಿವೆ. ಸುಮಾರು 700 ಹಳ್ಳಿಗಳಲ್ಲಿ ಮಾನವ-ಚಿರತೆ ಸಂಘರ್ಷ ದಾಖಲಾಗಿದೆ. ಈ ಪೈಕಿ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳು ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಹಾಸನದಲ್ಲಿ ವರದಿಯಾಗಿದೆ. ಇತ್ತೀಚೆಗೆ ಕೊಪ್ಪಳ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲೂ ಹೆಚ್ಚುತ್ತಿದೆ. ಈ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿ ಅಥವಾ ಗಣಿಗಾರಿಕೆಯು ಅತಿಯಾಗಿ ನೆಡೆಯುತ್ತಿರುವುದು, ಹಾಗಾಗಿ ಚಿರತೆಗಳ ನೈಸರ್ಗಿಕ ಆವಾಸ ಸ್ಥಾನ ದಿನೇ ದಿನೇ ಕ್ಷೀಣಿಸುತ್ತಿದೆ.
ಇದರಿಂದ ಕಬ್ಬಿನ ಗದ್ದೆ, ಜೋಳದ ಹೊಲ, ನೀಲಗಿರಿ ತೋಪು, ಇತರೆ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದು, ಮಾನವ ಚಿರತೆ ಸಂಘರ್ಷ ಹೆಚ್ಚುತ್ತದೆ. ಇದನ್ನು ತಗ್ಗಿಸಲು ಗಣಿಗಾರಿಕೆ, ಲೋಕೋಪಯೋಗಿ ಇಲಾಖೆಗಳು ಅರಣ್ಯ ಇಲಾಖೆಯೊಡನೆ ಜೊತೆಗೂಡಿ ಕೆಲಸ ಮಾಡಬೇಕು. ಈ ಕುರಿತು ಅಗತ್ಯ ಕ್ರಮವಹಿಸಿ ಎಂದಿದ್ದಾರೆ. ಚಿರತೆಗಳಿಗೆ ದಿನವೊಂದಕ್ಕೆ ಸುಮಾರು 4 ಕೆ.ಜಿ.ಯಷ್ಟುಆಹಾರದ ಆವಶ್ಯಕತೆಯಿರುತ್ತದೆ. ಸದ್ಯ ರಾಜ್ಯದಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳಲ್ಲಿ ಚಿರತೆಗಳ ನೈಸರ್ಗಿಕ ಆಹಾರವಾದ ಜಿಂಕೆ, ಕಡವೆ, ಕೊಂಡು ಕುರಿ, ಕಾಡು ಕುರಿ, ಮೊಲ, ಕಾಡು ಕೋಳಿ ಇನ್ನಿತರ ಬಲಿ ಪ್ರಾಣಿಗಳ ಕಳ್ಳ ಬೇಟೆಯು ಹೆಚ್ಚಿದೆ. ಹಾಗಾಗಿ ನೈಸರ್ಗಿಕ ಆಹಾರವನ್ನು ಕಳೆದುಕೊಂಡ ಚಿರತೆಗಳು ಪರ್ಯಾಯವಾಗಿ ಕುರಿ ಮೇಕೆಯಂತಹ ಪ್ರಾಣಿಗಳತ್ತ ಒಲವು ತೋರುತ್ತವೆ. ಕಾಡು ಬೇಟೆಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಕೋರಿದ್ದಾರೆ.
ಬೆಂಗಳೂರು: ಚಿರತೆ ಹುಡುಕಾಟದಲ್ಲಿ ಸಿಬ್ಬಂದಿ ಜೊತೆ ಜನಜಾತ್ರೆ..!
ಮತ್ತೆ 2 ಕಡೆ ಚಿರತೆ: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಕಳೆದ ಗುರುವಾರ ಸಂಜೆ ಮೇಘನಾ (22) ಎಂಬ ಯುವತಿ ಚಿರತೆ ದಾಳಿಗೆ ಬಲಿಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನ ಹಿಂದೆಯೇ ರಾಜಧಾನಿ ಬೆಂಗಳೂರಿನಲ್ಲಿ ಕೆಂಗೇರಿ ಹಾಗೂ ಚಿಕ್ಕಜಾಲ ಸುತ್ತಮುತ್ತ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಆತಂಕವನ್ನು ಮತ್ತಷ್ಟುಹೆಚ್ಚಿಸಿತ್ತು. ಈ ಚಿರತೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದ ಬೆನ್ನ ಹಿಂದೆಯೇ ಶನಿವಾರ ಮತ್ತೆರಡು ಕಡೆ ಚಿರತೆಗಳು ಕಾಣಿಸಿಕೊಂಡಿವೆ. ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದ ಹರೀಶ್ ಎಂಬುವರ ತೋಟದಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿದೆ. ಜೊತೆಗೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಅಂಗಳದಲ್ಲಿ ಕಟ್ಟಿಹಾಕಲಾಗಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ.
ತೋಟಕ್ಕೆ ಬಂತು ಚಿರತೆ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದ ಹರೀಶ್ ಎಂಬುವರ ತೋಟದಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಕಾಣಿಸಿತು. ಇದರಿಂದ ಗಾಬರಿಗೊಂಡು ಓಡಿದ ಹರೀಶ್, ಗ್ರಾಮದ ಜನರಿಗೆ ವಿಷಯ ತಿಳಿಸಿದರು. ಗ್ರಾಮಸ್ಥರು ಶಾಸಕ ಸಾ.ರಾ.ಮಹೇಶ್ ಅವರಿಗೆ ವಿಷಯ ತಿಳಿಸಿದರು. ಶಾಸಕರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೋಡಿ, ಚಿರತೆ ಸೆರೆ ಹಿಡಿಯಲು ಸೂಚಿಸಿದರು. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಬೋನು ಇಟ್ಟು ಕಾದು ಕುಳಿತಿದ್ದಾರೆ. ಚಿರತೆ ರಾತ್ರಿ ವೇಳೆ ರೈತರ ಭತ್ತ, ಗದ್ದೆ, ತೋಟಗಳಲ್ಲಿ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದೆ.
ಚಿರತೆ ದಾಳಿಗೆ ಡೀಮ್ಡ್ ಅರಣ್ಯ ಪ್ರದೇಶಕ್ಕೆ ಜನರ ಲಗ್ಗೆ ಕಾರಣ..!
ನಾಯಿ ಮೇಲೆ ದಾಳಿ: ಈ ಮಧ್ಯೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ ಗೊಳಿಬೈಲ್ ಸಮೀಪದ ಗಣಪು ಪಿ.ಹೆಗಡೆ ಎಂಬುವರ ಮನೆಯ ಅಂಗಳಕ್ಕೆ ಶನಿವಾರ ಬೆಳಗಿನ ಜಾವ 4.50ರ ಸುಮಾರಿಗೆ ಚಿರತೆಯೊಂದು ಮನೆಯಂಗಳದಲ್ಲಿದ್ದ ನಾಯಿ ತಿನ್ನಲು ಬಂದಿದೆ. ನಾಯಿ ಕೂಗಿಕೊಂಡು ತಪ್ಪಿಸಿಕೊಳ್ಳುವಾಗ ನಾಯಿ ಹಾಗೂ ಚಿರತೆ ಎರಡೂ ಸಹ ಕಟ್ಟೆಯ ಮೇಲಿಂದ ಕೆಳಗೆ ಬಿದ್ದಿವೆ. ನಾಯಿಯ ಕೂಗಾಟ ಕೇಳಿ, ಮನೆಯವರು ಲೈಟ್ ಆನ್ ಮಾಡಿದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. ದೃಶ್ಯಾವಳಿಯ ತುಣುಕು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನವಿಲುಗೋಣ ಗ್ರಾಮದಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿದೆ. ಕೆಲವು ದಿನಗಳ ಹಿಂದೆ ಹೊಸಾಕುಳಿಯ ಸಾಲ್ಕೋಡ್ ಗ್ರಾಮದಲ್ಲೂ ಚಿರತೆ ಕಾಣಿಸಿಕೊಂಡಿತ್ತು.