
ಬೆಂಗಳೂರು(ಡಿ.09): ರಾಜ್ಯ ಸರ್ಕಾರಿ ನೌಕರರು ಇನ್ನುಮುಂದೆ ತಮ್ಮ ಆಸ್ತಿ ವಿವರ ಸಲ್ಲಿಕೆಯನ್ನು ಡಿಸೆಂಬರ್ ಅಂತ್ಯಕ್ಕೆ ಬದಲಿಗೆ ಮಾರ್ಚ್ ಅಂತ್ಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರವು ಅವಕಾಶ ನೀಡಿದ್ದು, ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆದಾಯ ತೆರಿಗೆ ಪಾವತಿಗೆ ಆರ್ಥಿಕ ವರ್ಷ ಮಾ.31ಕ್ಕೆ ಅಂತ್ಯಗೊಳ್ಳುವುದನ್ನು ಪರಿಗಣಿಸಿರುವುದರಿಂದ ಸರ್ಕಾರಿ ನೌಕರರು ಆಸ್ತಿ ವಿವರದ ಲೆಕ್ಕಪತ್ರದ ವರದಿಯನ್ನು ಸಿದ್ಧಪಡಿಸಲು ಅನುಕೂಲವಾಗಲೆಂದು ಸರ್ಕಾರವು ಈ ಕ್ರಮ ಕೈಗೊಂಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಈವರೆಗೆ ಸರ್ಕಾರಿ ನೌಕರರು ಡಿ.31ಕ್ಕೆ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರು ತಮ್ಮ ಮತ್ತು ತಮ್ಮ ಕುಟುಂಬದವರ ಆಸ್ತಿಯ ವಿವರವನ್ನು ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳ ಆರ್ಥಿಕ ವ್ಯವಹಾರ ನಿರ್ವಹಣೆಗೆ ಏಪ್ರಿಲ್-ಮಾರ್ಚ್ ಮಾನದಂಡವನ್ನಾಗಿಸಿರುವುದರಿಂದ ಆದಾಯ ತೆರಿಗೆ ಉದ್ದೇಶಕ್ಕೆ ಒಂದು ಬಾರಿ ಮತ್ತು ಸರ್ಕಾರಕ್ಕೆ ನೀಡಲು ಮತ್ತೊಂದು ವರದಿ ಸಿದ್ಧಪಡಿಸಬೇಕು. ಇದರಿಂದ ಎರಡೆರಡು ಬಾರಿ ಸಲ್ಲಿಕೆ ಮಾಡುವ ಬದಲು ಒಂದೇ ಬಾರಿ ಆಸ್ತಿ ವಿವರ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಸಂಬಂಧ ಮಾಚ್‌ರ್ ಅಂತ್ಯಕ್ಕೆ ಸಲ್ಲಿಸಲು ಅವಕಾಶ ನೀಡಿ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಮಾರ್ಚ್ ನಲ್ಲಿ ಡಿಎ ಹೆಚ್ಚಳ ಸಾಧ್ಯತೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮಾರ್ಚ್ ಅಂತ್ಯಕ್ಕೆ ಆರ್ಥಿಕ ವರ್ಷವನ್ನು ಪರಿಗಣಿಸಿ ಆಸ್ತಿ ವಿವರ ಸಲ್ಲಿಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. ಆದಾಯ ತೆರಿಗೆ ಪಾವತಿಗೆ ಮಾರ್ಚ್ ಅಂತ್ಯಕ್ಕೆ ಆರ್ಥಿಕ ವರ್ಷ ಎಂದು ಪರಿಗಣಿಸಿರುವುದರಿಂದ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಕೆಗೆ ವರದಿ ಸಿದ್ಧಪಡಿಸಲು ಸುಲಭವಾಗಲಿ ಎಂದು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ