ನವೋದಯ ಸ್ವಸಹಾಯ ಗುಂಪು ದೇಶಕ್ಕೆ ಮಾದರಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಭಿಮತ

ನವೋದಯ ಸ್ವಸಹಾಯ ಗುಂಪುಗಳು ರಾಜ್ಯದ 8 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶಕ್ಕೇ ಮಾದರಿಯಾಗಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ. 
 

Navodaya Self Help Group Model for the country Says Dr MN Rajendra Kumar gvd

ಮಂಗಳೂರು (ಮಾ.25): ನವೋದಯ ಸ್ವಸಹಾಯ ಗುಂಪುಗಳು ರಾಜ್ಯದ 8 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶಕ್ಕೇ ಮಾದರಿಯಾಗಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ನ ಮ್ಯಾನೆಜಿಂಗ್‌ ಟ್ರಸ್ಟಿಯೂ ಆಗಿರುವ ‘ಸಹಕಾರ ರತ್ನ’ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ. ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ, ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಹೊರಗಿನ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಬೆಳೆಸುವ ಚಿಂತನೆ 25 ವರ್ಷಗಳ ಹಿಂದೆ ನನ್ನಲ್ಲಿ ಮೂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನವೋದಯ ಸ್ವಸಹಾಯ ಗುಂಪಿನ ಉಗಮವಾಯಿತು. 2000ರಲ್ಲಿ ಕಾರ್ಕಳದಲ್ಲಿ ಅಂದಿನ ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಮೊದಲ ದಿನವೇ 9,500ರಷ್ಟು ಮಹಿಳೆಯರು ಭಾಗವಹಿಸಿ ಸ್ವಸಹಾಯ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ಇಂದು ಆ ಸಂಖ್ಯೆ 5 ಲಕ್ಷ ತಲುಪಿದೆ ಎಂದು ಸಾಗಿ ಬಂದ ಹಾದಿಯನ್ನು ಡಾ.ರಾಜೇಂದ್ರ ಕುಮಾರ್‌ ಸ್ಮರಿಸಿದರು.

Latest Videos

ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್‌

ರಜತ ಸಂಭ್ರಮದಂದು ದಾಖಲೆ ನಿರ್ಮಾಣ: ಇಂದು ರಾಜ್ಯದ 8 ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಇದರ 25ನೇ ವರ್ಷದ ರಜತ ಸಂಭ್ರಮವನ್ನು ದೇಶ, ರಾಜ್ಯಕ್ಕೇ ಮಾದರಿಯಾಗುವಂತೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 1.5 ಲಕ್ಷಕ್ಕೂ ಅಧಿಕ ಸಮವಸ್ತ್ರ ಧರಿಸಿದ ಮಹಿಳೆಯರು ಒಂದೆಡೆ ಒಟ್ಟುಗೂಡುವ ದಾಖಲೆ ಈ ಮೂಲಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ ಇಲ್ಲ: ಈಗ ಎಲ್ಲೆಡೆ ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ, ಆತ್ಮಹತ್ಯೆ ಎನ್ನುವ ಸುದ್ದಿಗಳೇ ಹೆಚ್ಚುತ್ತಿವೆ. ಆತ್ಮಹತ್ಯೆ ನಡೆಯುತ್ತಿರುವುದು ಮೈಕ್ರೋ ಫೈನಾನ್ಸ್‌ನಿಂದ ಅಲ್ಲ ಎಂದು ಒತ್ತಿ ಹೇಳಿದ ಡಾ.ರಾಜೇಂದ್ರ ಕುಮಾರ್‌, ಚಕ್ರಬಡ್ಡಿ ದಂಧೆ ನಡೆಸುವವರಿಂದ ಈ ರೀತಿ ಆಗುತ್ತಿದೆ. ನಾವು ಯಾವುದೇ ಒಬ್ಬ ವ್ಯಕ್ತಿಗೆ ಸಾಲ ಕೊಡುವುದಲ್ಲ, ಬದಲಾಗಿ ಒಂದು ಗುಂಪಿಗೆ ನೀಡುತ್ತೇವೆ. ಸಾಲ ವಸೂಲಾತಿ ಎನ್ನುವ ಕಲ್ಪನೆಯೇ ನಮ್ಮಲ್ಲಿಲ್ಲ, ಆದರೆ ಶೇ.99ರಷ್ಟು ಮರುಪಾವತಿ ಆಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಅಭ್ಯುದಯ: ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಡಾ.ರಾಜೇಂದ್ರ ಕುಮಾರ್‌ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಗ್ರಮಾನ್ಯ ಬ್ಯಾಂಕ್‌ಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಇದರ ಜತೆ ಜತೆಗೆ ನವೋದಯ ಸ್ವಸಹಾಯ ಗುಂಪುಗಳನ್ನು ಕಟ್ಟಿದ್ದು, ಮಾದರಿಯಾಗಿ ಮಹಿಳೆಯರ ಅಭ್ಯದಯಕ್ಕೆ ಕಾರಣವಾಗುತ್ತಿದೆ. ಕೊರೋನಾ ಆಪತ್ಕಾಲ ಸೇರಿದಂತೆ ನಿರಂತರವಾಗಿ ಸಮಾಜಕ್ಕೆ ಅನನ್ಯ ಕೊಡುಗೆ ನೀಡುತ್ತಾ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ಡಾ.ರಾಜೇಂದ್ರ ಕುಮಾರ್‌ ಅವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ಡಾ.ರಾಜೇಂದ್ರ ಕುಮಾರ್‌ ಅವರು ಯಾವ ಕ್ಷೇತ್ರದಲ್ಲಿ ಕೈಯಾಡಿಸಿದರೂ ಅನನ್ಯವಾದ ಛಾಪು ಇರುತ್ತದೆ ಎನ್ನುವುದಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌, ನವೋದಯ ಸ್ವಸಹಾಯ ಗುಂಪುಗಳ ಬೆಳವಣಿಗೆಯೇ ಸಾಕ್ಷಿ ಎಂದು ಹೇಳಿದರು. ಡಾ.ರಾಜೇಂದ್ರ ಕುಮಾರ್‌ ಅವರ ಆದರ್ಶವಾದ ಸಹಕಾರಿ ತತ್ವ ಮಾದರಿಯಾಗಿದೆ ಎಂದು ಐವನ್‌ ಡಿಸೋಜ ಶ್ಲಾಘಿಸಿದರು. ಅದಾನಿ ಫೌಂಡೇಶನ್‌ ಅಧ್ಯಕ್ಷ ಕಿಶೋರ್‌ ಆಳ್ವ ಮಾತನಾಡಿ, ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಆರಂಭಿಸಿರುವ ಡಾ.ರಾಜೇಂದ್ರ ಕುಮಾರ್‌ ಈ ಎಂಟು ಜಿಲ್ಲೆಗಳಲ್ಲಿ ಹೊಸ ಕ್ರಾಂತಿಗೆ ಕಾರಣಕರ್ತರಾಗಿದ್ದಾರೆ. ತಮ್ಮ ಬೆಳವಣಿಗೆಯೊಂದಿಗೆ ಶೇ.100ರಷ್ಟು ಸಾಲ ಮರುಪಾವತಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳ ಮಹಿಳೆಯರು ಈ ವ್ಯವಸ್ಥೆಯನ್ನು ಬಲಗೊಳಿಸುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜರಾಮ್ ಭಟ್, ಭಾಸ್ಕರ್‌ ಎಸ್‌. ಕೋಟ್ಯಾನ್‌, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್‌ ರೈ ಬಿ., ಎಸ್‌.ಬಿ. ಜಯರಾಮ ರೈ, ಎಂ.ಮಹೇಶ್ ಹೆಗ್ಡೆ, ಜೈರಾಜ್‌ ಬಿ. ರೈ, ಕುಶಲಪ್ಪ ಗೌಡ, ಎಸ್.ಎನ್. ಮನ್ಮಥ, ರಾಜೇಶ್ ರಾವ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಟ್ರಸ್ಟಿಗಳಾದ ಮೇಘರಾಜ್ ಜೈನ್, ಸುನಿಲ್ ಕುಮಾರ್ ಬಜಗೋಳಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಇದ್ದರು.

ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಜಿಲ್ಲಾಡಳಿತ ನೆರವು ಭರವಸೆ: ಸ್ವಸಹಾಯ ಸಂಘಗಳಿಗೆ ಜಿಲ್ಲಾಡಳಿತದಿಂದ ನೆರವು ಬೇಕಿದ್ದಲ್ಲಿ ನೀಡಲು ಸಿದ್ಧ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಹೇಳಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣವು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಪೂರಕ. ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. 5 ಲಕ್ಷ ಮಂದಿ ಮಹಿಳೆಯರಿಗೆ ಸಮವಸ್ತ್ರ ವಿತರಿಸುತ್ತಿರುವುದು ಸಮ ಸಮಾಜ ನಿರ್ಮಾಣದ ಕಾರ್ಯವಾಗಿದೆ ಎಂದರು. ನವೋದಯ ಸ್ವಸಹಾಯ ಸಂಘಗಳಿಗೆ 10 ಲಕ್ಷ ರು.ವರೆಗೆ ಸಾಲ ನೀಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ನಿಜ ಅರ್ಥ ತಂದುಕೊಟ್ಟಿದೆ. ಸಾಲ ವಸೂಲಾತಿ ಬದಲಿಗೆ ಮರುಪಾವತಿ ಎಂಬ ಪರಿಕಲ್ಪನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದ ಜಿಲ್ಲಾಧಿಕಾರಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಹಾಗೂ ನವೋದಯ ಸ್ವಸಹಾಯ ಸಂಘಗಳು ದೇಶಕ್ಕೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.

vuukle one pixel image
click me!