ಹೆಚ್ಚಳ ಮಾಡುವ ಹಾಲಿನ ದರದ ಪೂರ್ಣ ಹಣವನ್ನು ರೈತರಿಗೆ ಕೊಡಲು ಒಪ್ಪದ ಹಾಲು ಒಕ್ಕೂಟಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಏರಿಕೆ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು (ಮಾ.25): ಹೆಚ್ಚಳ ಮಾಡುವ ಹಾಲಿನ ದರದ ಪೂರ್ಣ ಹಣವನ್ನು ರೈತರಿಗೆ ಕೊಡಲು ಒಪ್ಪದ ಹಾಲು ಒಕ್ಕೂಟಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಏರಿಕೆ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದಾರೆ. ಹಾಲು ಒಕ್ಕೂಟಗಳು ಲೀಟರ್‌ಗೆ 5 ರು. ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದವು. ಇದಕ್ಕೆ ಮುಖ್ಯಮಂತ್ರಿಯವರು 3ರು. ದರ ಹೆಚ್ಚಳಕ್ಕೆ ಒಪ್ಪಿ, ದರ ಹೆಚ್ಚಳದ ಸಂಪೂರ್ಣ ಮೊತ್ತವನ್ನು ರೈತರಿಗೆ ನೀಡಬೇಕು ಎಂದು ಷರತ್ತು ವಿಧಿಸಿದರು. ಆದರೆ, ಇದಕ್ಕೆ ಒಕ್ಕೂಟಗಳು ಒಪ್ಪದೆ ಕನಿಷ್ಟ 60 ಪೈಸೆಯಾದರೂ ಮಂಡಳಿಗೆ ನೀಡಬೇಕು ಎಂದು ಒತ್ತಾಯಿಸಿದ್ದು, ಇದಕ್ಕೆ ಒಪ್ಪದ ಸಿಎಂ ಸಂಪುಟದಲ್ಲಿ ಚರ್ಚಿಸುವುದಾಗಿ ಎನ್ನಲಾಗಿದೆ.
ಸೋಮವಾರ ಮುಖ್ಯ ಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ದರ ಏರಿಕೆ ಚರ್ಚೆ ನಡೆದಿದೆ. ಸಭೆ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ಸರ್ಕಾರದ ನಿಲುವು ಎಂದರು. ಇದಕ್ಕೆ ಒಪ್ಪದ ಹಾಲು ಒಕ್ಕೂಟಗಳು, ಹಾಲು ಉತ್ಪಾದಕರಿಂದ ಖರೀದಿಸಿದ ಸಂಪೂರ್ಣ ಹಾಲನ್ನು ಮಾರಾಟ ಮಾಡುವುದಿಲ್ಲ. ಬೇಡಿಕೆಗೆ ತಕ್ಕಂತೆ ಹಾಲು ಮಾರುಕಟ್ಟೆಗೆ ಸರಬರಾಜು ಮಾಡುತ್ತೇವೆ. ಬಾಕಿ ಉಳಿದ ಲಕ್ಷಾಂತರ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸುತ್ತೇವೆ.
ಇದರಿಂದ ಒಕ್ಕೂಟಗಳಿಗೆ ತಿಂಗಳಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡವು. ಜೊತೆಗೆ ಪ್ರತಿ ಲೀಟರ್ ಹಾಲಿನ ಹೆಚ್ಚಳವಾದ ದರದಲ್ಲಿ ಶೇ.25 ಹಣ ಒಕ್ಕೂಟಗಳ ನಿರ್ವಹಣೆಗೆ ಬೇಕಾಗುತ್ತದೆ. ಸಂಪೂರ್ಣ ಹಣವನ್ನು ರೈತರಿಗೆ ಕೊಡುವುದರಿಂದ ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಒಕ್ಕೂಟಗಳ ನಿರ್ದೇಶಕರು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಲಿನ ದರ ಹೆಚ್ಚಳದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲು ಒಪ್ಪದ ಒಕ್ಕೂಟಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಹಾಲಿನ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಿದರು.
ಪಾಪ.. ಕೆ.ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ಇದೇ ವೇಳೆ ಹಾಲು ಒಕ್ಕೂಟಗಳು ಖರ್ಚು, ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಕೆಲ ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕಮಾಡಬಾರದು. ಇದರಿಂದಾಗಿಯೇ ವೆಚ್ಚ ಜಾಸ್ತಿಯಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ. ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇ.2ಕ್ಕಿಂತ ಹೆಚ್ಚಾಗಬಾರದು. ಮುಂದಿನ ಆರು ತಿಂಗಳ ಒಳಗಾಗಿ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಶೇ.2ಕಿಂತ ಕೆಳಗೆ ಇಳಿಸಲೇಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಸೇರಿದಂತೆ ಇತರರು ಅಧ್ಯಕ್ಷ ಭೀಮಾನಾಯ್ಕ ಭಾಗವಹಿಸಿದ್ದರು.