
ಬೀದರ್(ಡಿ.13): ರಾಜ್ಯದಲ್ಲಿ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಅಕ್ರಮಗಳ ಸರಣಿ ಮುಂದುವರೆದಿದ್ದು, ಇದೀಗ ನವೋದಯ ಶಾಲೆಗೆ 6ನೇ ತರಗತಿ ಪ್ರವೇಶಕ್ಕಾಗಿ ನಡೆದ ಅರ್ಹತಾ ಪರೀಕ್ಷೆಯಲ್ಲಿಯೂ ಅಕ್ರಮಗಳು ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು, ಪರೀಕ್ಷಾ ಕೇಂದ್ರದ ಮುಂದೆಯೇ ಬಸವಕಲ್ಯಾಣದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಸಿದ್ದವೀರಯ್ಯ ರುದ್ನೂರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಖೂಬಾ ಕಾಲೇಜ್ ಪರೀಕ್ಷಾ ಕೇಂದ್ರದ ಎದುರು ಈ ಹೈಡ್ರಾಮಾ ನಡೆದಿದೆ. ಪರೀಕ್ಷೆಯ ವ್ಯವಸ್ಥೆಯಲ್ಲಿ ಲೋಪ ಕಂಡುಬಂದಿದ್ದು, ಕೆಲ ಶಿಕ್ಷಕರು ವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕಾರ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೆಲವು ಶಿಕ್ಷಕರು ಸಹಾಯ ಮಾಡುತ್ತಿದ್ದಾರೆ. ಕೋಚಿಂಗ್ ನಡೆಸುವ ಶಿಕ್ಷಕರನ್ನು ಪರೀಕ್ಷಾ ಕೇಂದ್ರದೊಳಗೆ ಏಕೆ ಬಿಡಲಾಗಿದೆ ಎಂದು ಪೋಷಕರು ಬಿಇಓ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಕೋಚಿಂಗ್ ಪಡೆದ ವಿದ್ಯಾರ್ಥಿಗಳಿಗೆ ಈ ರೀತಿ ಸಹಕಾರ ನೀಡುವುದರಿಂದ ಸಾಮಾನ್ಯ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ತೀವ್ರ ವಿರೋಧ, ಆರೋಪಗಳ ನಡುವೆಯೂ ಬಿಇಓ ಸಿದ್ದವೀರಯ್ಯ ರುದ್ನೂರ ಅವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆದರೆ, ಈ ಘಟನೆಯು ಪರೀಕ್ಷಾ ಪಾರದರ್ಶಕತೆ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ