
ಬೆಂಗಳೂರು (ನ.16): ಆಧುನಿಕ ಬದುಕಿನಲ್ಲಿ ಫಿಜ್ಜಾ, ಬರ್ಗರ್ ನಂತಹ ಜಂಕ್ ಫುಡ್ ಟ್ರೆಂಡ್ ನಡುವೆ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ತನ್ನ ಹವಾ ಉಳಿಸಿಕೊಂಡಿದೆ. ಹೌದು ಹಳ್ಳಿಗಾಡಿನ ಜನರ ಪೇವರಿಟ್ ಫುಡ್ ಕಾಂಬಿನೇಷನ್ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾಂಬಾರ್ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಇಂದು ಘಮಘಮಿಸಿದೆ. ಅಷ್ಟಕ್ಕೂ ಎಚ್ಎಸ್ಆರ್ ಲೇಔಟ್‌ಗೂ ನಾಟಿ ಕೋಳಿ ಸಾಂಬಾರ್ ಮತ್ತು ರಾಗಿ ಮುದ್ದೆಗೂ ಸಂಬಂಧ ಏನು ಅಂತೀರಾ? ಈ ಸ್ಟೋರಿ ಓದಿ.
ಹೌದು ಘಮಘಮಿಸುತ್ತಿರುವ ನಾಟಿ ಕೋಳಿ ಸಾರಿನಲ್ಲಿ ಬಿಸಿ ಬಿಸಿ ರಾಗಿ ಮುದ್ದೆಯನ್ನು ತಾಮುಂದು ನಾಮುಂದು ಎಂದು ಗುಳುಂ ಗುಳುಂ ನುಂಗುತ್ತಿರುವ ಸ್ಪರ್ಧಿಗಳು. ಸ್ಪರ್ಧಿಗಳನ್ನು ಉತ್ತೇಜಿಸುತ್ತಿರುವ ನೂರಾರು ಮಂದಿ ಸಾರ್ವಜನಿಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ. ಎಚ್ಎಸ್ಆರ್ ಬಡಾವಣೆ ವಕೀಲರ ಒಕ್ಕೂಟ ನಾಡಗೀತೆಗೆ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಗ್ರಾಮೀಣ ಸೊಗಡಿನ ನಾಟಿ ಕೋಳಿ ಸಾರು ಮುದ್ದೆ ಸವಿಯುವ ಸ್ಪರ್ಧೆ ಆಯೋಜಿಸಿದ್ದರು. ಪುರುಷ ವಿಭಾಗದಲ್ಲಿ 68 ಮಂದಿ ಮಹಿಳಾ ವಿಭಾಗದಲ್ಲಿ 25 ಮಂದಿ ಭಾಗವಹಿಸಿದ್ದರು. 45 ನಿಮಿಷದಲ್ಲಿ ಅತಿ ಹೆಚ್ಚು ರಾಗಿ ಮುದ್ದೆ ಸೇವಿಸಿದವರಿಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಎರಡು ವಿಭಾಗದಲ್ಲಿ ವೈಲ್ಡ್ ಫೀಲ್ಡ್ ನಲ್ಲೂರಹಳ್ಳಿ ನಿವಾಸಿಗಳಾದ ಅಜಯ್ ಕುಮಾರ್ ಮತ್ತು ಸೌಮ್ಯ ವಿಜೇತರಾಗಿದ್ದಾರೆ.
ಇನ್ನು ವಿಕೇಂಡ್ ನಲ್ಲಿ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಸ್ಪರ್ಧೆ ಆಯೋಜನೆ ಹಿನ್ನೆಲೆ ನಾಟಿ ಕೋಳಿ ಸಾರು ಜೊತೆ ಮುದ್ದೆ ತಿಂದು ಎಂಜಾಯ್ ಮಾಡಲು ಮಂಡ್ಯ, ಹಾಸನ, ಕನಕಪುರ, ಚಿತ್ರದುರ್ಗ,ಮೈಸೂರು, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಆನೇಕಲ್ ಸೇರಿದಂತೆ ನಾನಾ ಭಾಗಗಳಿಂದ 100ಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷ ವಿಭಾಗದಲ್ಲಿ 12 ರಾಗಿ ಮುದ್ದೆ ತಿಂದು ಅಜಯ್ ಕುಮಾರ್ ಟಗರು ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ 10 ಮುಂದೆ ತಿಂದು 32 ಇಂಚಿನ ಟಿವಿ, ಐದು ಸಾವಿರ ನಗದು ಆಕರ್ಷಕ ಸೀರೆ ಪಡೆದು ಸಂತಸಗೊಂಡಿದ್ದಾರೆ.
ಕಳೆದ ವರ್ಷ ನನ್ನ ಸಂಬಂಧಿ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಬಗ್ಗೆ ತಿಳಿಸಿದ್ರು. ಕಳೆದ ಬಾರಿ 9 ಮುದ್ದೆ ತಿಂದು ಪ್ರಥಮ ಬಹುಮಾನ ಪಡೆದಿದ್ದೆ. ಈ ಬಾರಿ ಕೂಡ ನನ್ನ ಸಂಬಂಧಿ ಸ್ಪರ್ಧೆ ಬಗ್ಗೆ ತಿಳಿಸಿದ್ರು. ಗೆಲ್ಲುವ ಛಲದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಮನೆಯಲ್ಲಿ ಅರ್ಧ ಮುದ್ದೆ ತಿನ್ನುವುದು ಕಷ್ಟ. ಆದ್ರೆ ಇಲ್ಲಿ ಪವಾಡದ ರೀತಿ ನಾನು ಮತ್ತು ನನ್ನ ತಮ್ಮ ಪ್ರಥಮ ಬಹುಮಾನ ಪಡೆದಿದ್ದೆವೆ. ರಾಗಿ ಮುದ್ದೆ ತಿನ್ನುವ ಬಗ್ಗೆ ಕೆಲವರು ತಾತ್ಸಾರ ಮಾಡ್ತಾರೆ. ಆದ್ರೆ ರಾಗಿ ಮುದ್ದೆ ತಿನ್ನುವುದು ಅಷ್ಟು ಸುಲಭವಲ್ಲ. ಆಯೋಜಕರು ಸಹ ಚೆನ್ನಾಗಿ ಸ್ಪರ್ಧೆ ಆಯೋಜನೆ ಮಾಡಿದ್ದರು ಎಂದು ವಿಜೇತ ಮಹಿಳೆ ಸೌಮ್ಯ ತಿಳಿಸಿದ್ದಾರೆ.
ಒಟ್ನಲ್ಲಿ ಜಂಕ್ ಫುಡ್ ಆರೋಗ್ಯಕ್ಕೆ ಸೂಕ್ತ ಅಲ್ಲ. ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನಾಟಿ ಕೋಳಿ ಸಾರಿನ ಮಹತ್ವ ತಿಳಿಸಲು ಇಂದು ಆಯೋಜಿಸಿದ್ದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸ್ಪರ್ಧಿಗಳ ಜೊತೆ ಸಾಕಷ್ಟು ಮಂದಿ ಭರ್ಜರಿಯಾಗಿ ನಾಟಿ ಕೋಳಿ ಸಾರು ರಾಗಿ ಮುದ್ದೆ ತಿಂದು ಎಂಜಾಯ್ ಮಾಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ