ಮಣ್ಣಲ್ಲಿ ಮಣ್ಣಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Published : Nov 16, 2025, 07:19 AM IST
Saalumarada Thimmakka

ಸಾರಾಂಶ

ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಅವರ ಅಂತ್ಯಕ್ರಿಯೆಯನ್ನು ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಬೆಂಗಳೂರು (ನ.16): ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಅವರ ಅಂತ್ಯಕ್ರಿಯೆಯನ್ನು ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್‌ ಅವರು ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನೆರವೇರಿಸಿದರು.

ಬಳಿಕ ಮೂರು ಸುತ್ತು ಕುಶಾಲುತೋಪು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಿಮ್ಮಕ್ಕ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು. ಕವಿ ಡಾ.ಸಿದ್ದಲಿಂಗಯ್ಯ ಅವರ ಸಮಾಧಿ ಸಮೀಪದಲ್ಲೇ ತಿಮ್ಮಕ್ಕ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಅಂತ್ಯಕ್ರಿಯೆ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಜಗದೀಶ್‌, ತಿಮ್ಮಕ್ಕ ಅವರ ತಮ್ಮ ಕೆಂಪಯ್ಯ (88), ತಂಗಿ ಲಕ್ಷ್ಮಮ್ಮ (85) ಮತ್ತಿತರರು ಪಾಲ್ಗೊಂಡಿದ್ದರು.

ಪಾರ್ಥಿವ ಶರೀರ ಅಂತಿಮ ದರ್ಶನ
ಇದಕ್ಕೂ ಮುನ್ನ ತಿಮ್ಮಕ್ಕ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 8.30ರಿಂದ ಮ.12.30ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಡಾ.ಜಿ.ಪರಮೇಶ್ವರ್, ಈಶ್ವರ ಖಂಡ್ರೆ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ತಿಮ್ಮಕ್ಕ ಅವರ ಸಂಬಂಧಿಕರು, ಗ್ರಾಮಸ್ಥರು, ಕಲಾವಿದರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ತಿಮ್ಮಕ್ಕಗೆ ಗೀತ ನಮನ
ತಿಮ್ಮಕ್ಕನವರ ಕುರಿತು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ರಚಿಸಿರುವ, ‘ಸೂರ ಗುಡಿಸಲೊಳಗೆ ಊರ ಬೆಳಗಿದ ದೀಪ, ದಾರವಾದಳು ಹೂಗಳ ಹಾರ, ಇವಳ ಹೆಸರು ಸಾಲು ಮರದ ತಿಮ್ಮಕ್ಕ’ ಎಂಬ ಗೀತೆ ಹಾಡಿನ ಮೂಲಕ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಗದಗದ ಶಂಕರಣ್ಣ ಸಂಕಣ್ಣನವರ್ ಅವರ ತಂಡದಿಂದ ಗೀತ ನಮನ ಸಲ್ಲಿಸಲಾಯಿತು.

ತಿಮ್ಮಕ್ಕ ಗೌರವಾರ್ಥ 13000 ಗಿಡ: ಖಂಡ್ರೆ
ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿ ನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ. 114 ವರ್ಷಗಳ ಕಾಲ ಜೀವಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ ತಲಾ 114 ಸಸಿಗಳಂತೆ ಒಟ್ಟು 13 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುವುದ ಎಂದರು.

ತಿಮ್ಮಕ್ಕ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನೂ ಸ್ಥಾಪಿಸಲಾಗುವುದು. ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ರವೀಂದ್ರ ಕಲಾಕ್ಷೇತ್ರದಿಂದ ಮಧ್ಯಾಹ್ನ 12.45ರ ಸುಮಾರಿಗೆ ಹೂವಿನಿಂದ ಅಲಂಕೃತಗೊಂಡ ಶಾಂತಿ ವಾಹನದಲ್ಲಿ ಮೆರವಣಿಗೆ ಮೂಲಕ ತಿಮ್ಮಕ್ಕ ಅವರ ಪಾರ್ಥಿವ ಶರೀರವನ್ನು ಕಲಾ ಗ್ರಾಮದತ್ತ ಕೊಂಡೊಯ್ಯಲಾಯಿತು. ಆಗ ರಸ್ತೆಯುದ್ದಕ್ಕೂ ನಿಂತಿದ್ದ ಜನ ವೃಕ್ಷಮಾತೆ ತಿಮ್ಮಕ್ಕ ಅವರ ಪಾರ್ಥಿವ ಶರೀರಕ್ಕೆ ಕೈಮುಗಿದು ಅಂತಿಮ ನಮನ ಸಲ್ಲಿಸಿದರು.

ತಿಮ್ಮಕ್ಕ ಗೌರವಾರ್ಥ 13 ಸಾವಿರ ಗಿಡ: ಖಂಡ್ರೆ
ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿ ನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ. 114 ವರ್ಷಗಳ ಕಾಲ ಜೀವಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ ತಲಾ 114 ಸಸಿಗಳಂತೆ ಒಟ್ಟು 13 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ತಿಮ್ಮಕ್ಕ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನೂ ಸ್ಥಾಪಿಸಲಾಗುವುದು. ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸಕಲ ಗೌರವ ಸಲ್ಲಿಸಲಿದೆ ಸರ್ಕಾರ: ಪರಂ
ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯಿಂದ ನೋವಾಗಿದೆ. ಅವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಹಾಗಾಗಿ, ವೈಯಕ್ತಿಕವಾಗಿ ನನಗೆ ಅಪಾರ ನಷ್ಟವಾಗಿದೆ. ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಅವರು, ಪರಿಸರ ಸಂರಕ್ಷಣೆಯನ್ನು ಮಾಡಿ ತೋರಿಸಿದ್ದಾರೆ. ಅವರಿಗೆ ಸರ್ಕಾರ ಎಲ್ಲ ರೀತಿಯ ಗೌರವಗಳನ್ನು ಸಮರ್ಪಣೆ ಮಾಡಲಿದೆ.

ವಿಶೇಷ ಪ್ರಕರಣವೆಂದು ಪರಿಗಣಿಸಿ ಅವಕಾಶ

ಕಲಾಗ್ರಾಮದಲ್ಲಿ ಕಲೆಗೆ ಸಂಬಂಧಿಸಿದ ನಿರಂತರ ಚಟುವಟಿಕೆಗಳು ನಡೆಯುವುದರಿಂದ ಯಾವುದೇ ಅಂತ್ಯಕ್ರಿಯೆಗಳನ್ನು ನಡೆಸದಂತೆ ನಿರ್ಬಂಧಿಸಿ ರಾಜ್ಯ ಸರ್ಕಾರ 2021ರಲ್ಲಿ ಆದೇಶಿತ್ತು. ಈಗ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಲು ಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಡಾ.ಜಿ.ಎಸ್‌.ಶಿವರುದ್ರಪ್ಪ, ಡಾ.ಯು.ಆರ್‌.ಅನಂತಮೂರ್ತಿ ಹಾಗೂ ಡಾ.ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಸಾಲುಮರದ ತಿಮ್ಮಕ್ಕ ವೃಕ್ಷ ದೇವತೆಯಾಗಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅವರ ಹೆಸರಿನಲ್ಲಿ ಪರಿಸರ ಸಾಧಕರಿಗೆ ಪ್ರಶಸ್ತಿ ನೀಡಲು ತೀರ್ಮಾನ ಮಾಡಿದ್ದು, ಸರ್ಕಾರದ ಪರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 1 ಕೋಟಿ ರು.ದತ್ತಿ ಇಟ್ಟು ಪ್ರತಿ ವರ್ಷ ನಡೆಯುವ ಪರಿಸರ ದಿನಾಚರಣೆಯಂದು ಪರಿಸರ ಸಾಧಕರಿಗೆ ಪ್ರಶಸ್ತಿ ನೀಡುತ್ತೇವೆ.
-ನರೇಂದ್ರಸ್ವಾಮಿ, ಶಾಸಕ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!