Nandini Milk Price Hike: ನಂದಿನಿ ಹಾಲಿನ ದರ 3 ರೂ. ಹೆಚ್ಚಳ, ಸದ್ಯಕ್ಕೆ ಕಾಫಿ , ಟೀ ಬೆಲೆ ಹೆಚ್ಚಳ ಇಲ್ಲ

By Sathish Kumar KH  |  First Published Nov 14, 2022, 3:07 PM IST

Nandini Milk Price Hiked: ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ಹಾಲು ಮತ್ತು ಮೊಸರಿನ ದರವನ್ನು 3 ರೂ. ಹೆಚ್ಚಳ ಮಾಡಲಾಗಿದೆ.


ಬೆಂಗಳೂರು (ನ.14): ರಾಜ್ಯದಲ್ಲಿ ನಾಳೆಯಿಂದ ಹಾಲು ಖರೀದಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಈಗಿರುವ ದರಕ್ಕಿಂತ ಪ್ರತಿ ಒಂದು ಲೀಟರ್‍‌ ಹಾಲಿನ ದರ 3 ರೂ. ಹೆಚ್ಚಳ ಮಾಡುವುದಾಗಿ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ಅಧಿಕೃತ ಮಾಹಿತಿಯನ್ನು ನೀಡಿದೆ. ಇದರೊಂದಿಗೆ ಮೊಸರಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ.

ದೇಶದ ಎಲ್ಲ ಹಾಲು ಉತ್ಪಾದನಾ ಒಕ್ಕೂಟ ಹೊಂದಿರುವ ರಾಜ್ಯಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ 40 ರೂ.ಗಳಿಂದ 50 ರೂ.ವರೆಗೆ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಹಾಲಿನ ದರ ಪ್ರತಿ ಲೀ. 37 ರೂ. ಇತ್ತು. ಕಳೆದೊಂದು ವರ್ಷದಿಂದ ಹಾಲಿನ ದರದ ಏರಿಕೆ (Milk Price Hike) ಮಾಡುವ ಕುರಿತು ಚರ್ಚೆ ಮಾಡುತ್ತಾ ಬಂದಿದ್ದ ಒಕ್ಕೂಟವು ಈಗ ಬೆಲೆಯುನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ಹಾಲಿನ ದರ ಪ್ರತಿ ಲೀ.ಗೆ 37 ರೂ. ಇದ್ದು, ಇದಕ್ಕೆ 3 ರೂ. ಹೆಚ್ಚಳದ ನಂತರ 40ರೂ.ಗೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಈ ಹಿಂದೆ 2020ರ ಫೆಬ್ರವರಿಯಲ್ಲಿ 2 ರೂ. ಹೆಚ್ಚಳ ಮಾಡಲಾಗಿತ್ತು. ಹಾಲಿನ ಜತೆಗೆ ಪ್ರತಿ ಲೀ. ಮೊಸರಿನ ದರವನ್ನೂ 3 ರೂ. ಹೆಚ್ಚಳ ಮಾಡಲಾಗುತ್ತಿದೆ. ಈ ಬೆಲೆ ಏರಿಕೆ ದರವು ನಾಳೆಯಿಂದಲೇ ಅನ್ವಯವಾಗಲಿದೆ.

Tap to resize

Latest Videos

ನಂದಿನಿ ಹಾಲಿನ ದರ ಶೀಘ್ರವೇ ಲೀ.ಗೆ ₹ 3 ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

ಇತರೆ ರಾಜ್ಯಗಳಲ್ಲಿ ಹಾಲಿ ದರ:
ಪ್ರತಿ ಲೀಟರ್‍‌ ಹಾಲಿನ ದರ ಕರ್ನಾಟಕದಲ್ಲಿ 37 ರೂ., ಆಂಧ್ರ ಪ್ರದೇಶ 55 ರೂ., ತಮಿಳುನಾಡು 40 ರೂ., ಕೇರಳ 46 ರೂ. ಮಹಾರಾಷ್ಟ್ರ 51 ರೂ., ದೆಹಲಿ 51ರೂ. ಹಾಗೂ ಗುಜರಾತ್ 50 ರೂ. ದರವಿದೆ. ಇನ್ನು ನಮ್ಮ ರಾಜ್ಯದಲ್ಲಿ ಹೊಸ ದರದ ಅನ್ವಯ ನೀಲಿ (Blue) ಪ್ಯಾಕೆಟ್ ಹಾಲು ದರ 37 ರಿಂದ 40 ರೂ. ಹಾಗೂ ಕೇಸರಿ (Orrange ) ಪ್ಯಾಕೆಟ್ ದರ 43 ಯಿಂದ 46 ರೂ.ಗೆ ಏರಿಕೆಯಾಗುತ್ತಿದೆ. ಹಸಿರು (Green) ಪ್ಯಾಕೆಟ್ ದರ 44 ರಿಂದ 47 ರೂ.ಗೆ ಏರಲಿದೆ. ಕೋವಿಡ್‌ ಸೋಂಕು ತಗ್ಗಿದ ಬೆನ್ನಲ್ಲೇ ವಿದ್ಯುತ್‌, ಗ್ಯಾಸ್‌ ಸೇರಿ ವಿವಿಧ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿತ್ತು. ಈ ವೇಳೆ ಹಾಲಿನ ಮಾರಾಟ ದರ ಹೆಚ್ಚಳ ಮಾಡುವ  ಉದ್ದೇಶವಿದ್ದರೂ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಚಿಂತನೆಯಿಂದ ದರ ಏರಿಕೆಯನ್ನು ತಡೆದಿತ್ತು.

ಹಾಲಿನ ದರ ನೇರ ರೈತರಿಗೆ ವರ್ಗ:
ರಾಜ್ಯದಲ್ಲಿ ಒಟ್ಟು 16 ಜಿಲ್ಲಾ ಹಾಲು ಒಕ್ಕೂಟ (Milk Federation)ಗಳಿದ್ದು, 20 ಸಾವಿರ ಕೋಟಿ ರೂ. ವ್ಯವಹಾರ (Buisiness) ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ. ಇದರ ಲಾಭಾಂಶವನ್ನು ರೈತರಿಗೆ ನೀಡಲು ನಾವು ಬದ್ಧರಿದ್ದೇವೆ ಎಂದು ಇತ್ತೀಚೆಗೆ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarakiholi)ತಿಳಿಸಿದ್ದರು. ಅದೇ ರೀತಿ ಈಗ ಹಾಲಿನ ದರ ಏರಿಕೆ ಮಾಡಿದ್ದರೂ ಅದರ ನೇರ ಲಾಭವನ್ನು ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಅಂದರೆ, ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಹೆಚ್ಚಳ ಮಾಡುವ ಬಗ್ಗೆಯೂ ಮುನ್ಸೂಚನೆ ಸಿಕ್ಕಂತಾಗಿದೆ.

ಹಾಲಿನ ದರ 3 ರು. ಹೆಚ್ಚಳ: ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ, ಸಚಿವ ಎಸ್‌ಟಿಎಸ್‌

ದರ ಏರಿಕೆಗೆ ಸಮ್ಮತಿಸದ ಸಿಎಂ ಬೊಮ್ಮಾಯಿ:
ಕಳೆದ ಎರಡು ತಿಂಗಳಿಂದ ಹಾಲಿನ ದವರನ್ನು ಹೆಚ್ಚಳ ಮಾಡುವ ಕುರಿತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‍‌ (Somashekhar) ಮತ್ತು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಈಗ ದರ ಹೆಚ್ಚಳ ಮಾಡುವ ಬಗ್ಗೆ ಅಂತಿಮ (Final) ತೀರ್ಮಾನ ಕೈಗೊಂಡಿದೆ. ಆದರೆ, ತೀರ್ಮಾನದ ಬಗ್ಗೆ ಕಲಬುರಗಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹಾಲು ದರ ಹೆಚ್ಚಳದ ಬಗ್ಗೆ 6 ತಿಂಗಳಿಂದ ಚರ್ಚೆ ಆಗಿದೆ. ನ.20ರ ನಂತರ ಹಾಲು ಒಕ್ಕೂಟದ ಮಹಾಮಂಡಳದ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಾಲಿನ ದರ ಏರಿಕೆ ವಾಪಸ್‌ ಪಡೆಯಲ್ಲ:
ಈಗ ಮಹಾಮಂಡಳದಿಂದ ನಿಗದಿಪಡಿಸಿರುವ ನೂತನ ಹಾಲಿನ ದರವನ್ನು ವಾಪಾಸ್ ಪಡೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿಯೇ ದರ ನಿಗದಿ ಮಾಡಲಾಗಿದೆ. ಈ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ಏನಿದೆ ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಸದ್ಯಕ್ಕೆ ದರ ಏರಿಕೆ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ರಘುನಂದನ್‌ ತಿಳಿಸಿದ್ದಾರೆ.

ನಂದಿನಿ ಉತ್ಪನ್ನದ ಇತರೆ ಹಾಲಿನ ದರಗಳು

  • ಟೋನ್ಡ್ ಹಾಲು 37 ರಿಂದ 40 ರೂ.
  • ಹೊಮೋಜಿನೈಸ್ಡ್‌ ಹಾಲು 38 ರಿಂದ 41 ರೂ.
  • ಹೊಮೊಜಿನೈಸ್ಡ್ ಹಸುವಿನ ಹಾಲು 42 ರಿಂದ 45 ರೂ.
  • ಸ್ಪೆಷಲ್ ಹಾಲು 43 ರಿಂದ 46 ರೂ.
  • ಶುಭಂ ಹಾಲು 43 ರಿಂದ 46 ರೂ.
  • ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರಿಂದ 47 ರೂ.
  • ಸಮೃದ್ಧಿ ಹಾಲು 48 ರಿಂದ 51 ರೂ.
  • ಸಂತೃಪ್ತಿ ಹಾಲು 50 ರಿಂದ 53 ರೂ. 
  • ಡಬಲ್ ಟೋನ್ಡ್ ಹಾಲು 36 ರಿಂದ 39 ರೂ.
  • ಮೊಸರು ಪ್ರತಿ ಕೆ.ಜಿ.ಗೆ 45 ರಿಂದ 48 ರೂ.

 

ಸದ್ಯ ಇರುವ ವಿವಿಧ ಕಂಪನಿ ಹಾಲುಗಳ ದರ:

  • ನಂದಿನಿ 37 ರೂ.
  • ದೊಡ್ಲ 44 ರೂ.
  • ಜೆರ್ಸಿ 44 ರೂ.
  • ಹೆರಿಟೇಜ್ 48 ರೂ.
  • ತಿರುಮಲ 48 ರೂ.
  • ಗೋವರ್ಧನ್ 46 ರೂ.
  • ಆರೋಗ್ಯ 50 ರೂ.
click me!