ಅಮುಲ್‌ VS ನಂದಿನಿ ಫೈಟ್‌: ಗುಜರಾತ್‌ ಕಂಪನಿ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ

By Kannadaprabha News  |  First Published Apr 9, 2023, 5:42 AM IST

ಗುಜರಾತ್‌ನ ‘ಅಮುಲ್‌’ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ#BanAmul #SaveNandini ಅಭಿಯಾನ ವೇಗ ಪಡೆದುಕೊಂಡಿದೆ. 


ಬೆಂಗಳೂರು (ಏ.09): ಗುಜರಾತ್‌ನ ‘ಅಮುಲ್‌’ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ#BanAmul #SaveNandini ಅಭಿಯಾನ ವೇಗ ಪಡೆದುಕೊಂಡಿದೆ. ನಾಡಿನ ಅಸ್ಮಿತೆಯಾಗಿರುವ ಕೆಎಂಎಫ್‌ ಉಳಿಸಿಕೊಳ್ಳುವ ಹೋರಾಟದ ಕಿಚ್ಚಿಗೆ ಕರ್ನಾಟಕ ರಕ್ಷಣಾ ವೇದಿಕೆ, ಹೊಟೇಲ್‌ ಅಸೋಸಿಯೇಷನ್‌ನಂತಹ ಪ್ರಮುಖ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಅಮುಲ್‌ ಉತ್ಪನ್ನಗಳ ಮಾರಾಟಕ್ಕೆ ತಡೆ ಒಡ್ಡದಿದ್ದರೆ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

‘ಅಮುಲ್‌ನೊಂದಿಗೆ ನಂದಿನಿ ವಿಲೀನಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಕೆಲ ದಿನಗಳ ಹಿಂದೆ ವ್ಯಕ್ತವಾಗಿದ್ದ ಬೆನ್ನಲ್ಲೇ ಇದೀಗ ಕ್ವಿಕ್‌ ಕಾಮರ್ಸ್‌ ಫ್ಲಾಟ್‌ಫಾಮ್‌ರ್‍ ಮೂಲಕ ಮನೆ ಬಾಗಿಲಿಗೇ ಅಮುಲ್‌ ಹಾಲು, ಮೊಸರು ಸರಬರಾಜು ಆಗುತ್ತಿರುವುದು ಕಾಕತಾಳೀಯವಲ್ಲ. ಇದರ ಹಿಂದೆ ದೊಡ್ಡ ಪಿತೂರಿಯೇ ಕೆಲಸ ಮಾಡುತ್ತಿದೆ’ ಎಂಬ ಗುಮಾನಿಯನ್ನು ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದು, ನಂದಿನಿ ಉಳಿಸಿಕೊಳ್ಳುವ ಶಪಥ ಮಾಡೋಣ ಎಂದು ಕರೆ ನೀಡಿದ್ದಾರೆ. ಇದರ ಜತೆಗೆ ಪ್ರತಿಪಕ್ಷಗಳ ನಾಯಕರಾದ ಡಿ.ಕೆ.ಶಿವಕುಮಾರ್‌, ಎಚ್‌.ಡಿ.ಕುಮಾರಸ್ವಾಮಿ ಸೇರಿ ಅನೇಕರು ಕೂಡ ಅಮುಲ್‌ ವಿರುದ್ಧ ಗುಡುಗಿದ್ದಾರೆ.

Tap to resize

Latest Videos

8ನೇ ಬಾರಿ ಪ್ರಧಾನಿ ಮೋದಿ ಮೈಸೂರಿಗೆ: ಬಂಡೀಪುರದಲ್ಲಿಂದು ಟೈಗರ್ ಸಫಾರಿ

‘ಬ್ಯಾನ್‌ ಅಮುಲ್‌ ಸೇವ್‌ ನಂದಿನಿ’ ಅಭಿಯಾನ: ಕನ್ನಡಿಗರಿಂದ ಟ್ವೀಟರ್‌ನಲ್ಲಿ ‘ಬ್ಯಾನ್‌ ಅಮುಲ್‌ ಸೇವ್‌ ನಂದಿನಿ’ ಹ್ಯಾಷಟ್ಯಾಗ್‌ನಡಿ ಅಭಿಯಾನ ಸಹ ಆರಂಭಗೊಂಡಿದ್ದು, ಅಮುಲ್‌ ವಿರುದ್ಧ ಕಿಡಿಕಾರಿ ನಮ್ಮ ಹೆಮ್ಮೆಯ ನಂದಿನಿ ಉಳಿಸೋಣ ಎಂದು ಕರೆ ನೀಡಿದ್ದಾರೆ. ಇತ್ತೀಚೆಗೆ ನಂದಿನಿ ಹಾಲಿಗೆ ಹಲವೆಡೆ ಅಭಾವ ಉಂಟಾಗಿತ್ತು. ಇದು ಅಮುಲ್‌ಗೆ ಬೆಂಬಲ ನೀಡುವ ಷಡ್ಯಂತ್ರವೇ ಆಗಿರಬೇಕು. ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ ಅಮುಲ್‌ಗೆ ರತ್ನಗಂಬಳಿ ಹಾಕುವ ಹುನ್ನಾರ ಇದರ ಹಿದಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಮೊದಲು ಐಸ್‌ ಕ್ರೀಂ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಮುಲ್‌ ಇದೀಗ ಮನೆ ಬಾಗಿಲಿಗೇ ಹಾಲು, ಮೊಸರು ತಲುಪಿಸಲು ಮುಂದಾಗಿದೆ. 

ಆದ್ದರಿಂದ ನಮ್ಮ ನಂದಿನಿಯನ್ನು ನಾವೇ ರಕ್ಷಿಸಿಕೊಳ್ಳೋಣ. ಅಮುಲ್‌ ಉತ್ಪನ್ನಗಳನ್ನು ತಿರಸ್ಕರಿಸೋಣ’ ಎಂಬ ಆಕ್ರೋಶ ಟ್ವೀಟರ್‌ನಲ್ಲಿ ವ್ಯಕ್ತವಾಗಿದೆ. ‘ರಾಜ್ಯದ ಹೆಮ್ಮೆಯ ‘ನಂದಿನಿ’ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯದಂತಹ ಪರಿಸ್ಥಿತಿ ನಿರ್ಮಿಸಿ ಅಮುಲ್‌ ಉತ್ಪನ್ನಗಳನ್ನು ಬಳಸುವಂತೆ ಮಾಡಲಾಗುತ್ತಿದೆ. ನಾವು ಇದಕ್ಕೆ ಸೊಪ್ಪು ಹಾಕದೇ ಎಲ್ಲ ಕನ್ನಡಿಗರೂ ಒಂದಾಗಬೇಕು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ಉಳಿಸಲು ಪಣ ತೊಡಬೇಕು. ನಮ್ಮ ನಂದಿನಿ ನಮ್ಮ ಹೆಮ್ಮೆ ಎಂಬ ಅಭಿಮಾನ ವ್ಯಕ್ತಪಡಿಸಬೇಕು’ ಎಂದು ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ನಂದಿನಿ ಉತ್ಪನ್ನ ಖರೀದಿಸಿ ಉತ್ತರ ನೀಡಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, ‘ಕನ್ನಡ ನಾಡು-ನುಡಿ ಮೇಲೆ ಪರಭಾಷಿಕರು ಒಂದಿಲ್ಲೊಂದು ರೀತಿ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ. ನಾಡಿನ ಹೆಮ್ಮೆಯಾದ ಕೆಎಂಎಫ್‌ ಉಳಿಸಲು ಎಲ್ಲ ಕನ್ನಡಿಗರು ಒಂದಾಗಬೇಕು. ನಮ್ಮ ಅಭಿಮಾನದ ನಂದಿನಿ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ಇದಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಈ ಬಗ್ಗೆ ಹೇಳಿಕೆ ನೀಡಿ, ‘ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ಅಮುಲ್‌ನೊಂದಿಗೆ ನಂದಿನಿ ವಿಲೀನಗೊಳಿಸುವ ಪ್ರಸ್ತಾಪ ಮಾಡಿದ್ದರು.

 ಇದಕ್ಕೆ ನಾವು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಹುನ್ನಾರದಿಂದ ಹಿಂದೆ ಸರಿದರು. ನಂತರ ಹಿಂದಿ ಹೇರಲು ಹೊರಟು ಆಕ್ರೋಶ ವ್ಯಕ್ತವಾದಾಗ ಸುಮ್ಮನಾದರು. ಇದೀಗ ಅಮುಲ್‌ ಮೂಲಕ ಕನ್ನಡಿಗರೇ ಕಟ್ಟಿರುವ ಕೆಎಂಎಫ್‌ ಮುಗಿಸಲು ಕೇಂದ್ರ ಸರ್ಕಾರ ಹೊರಟಿದೆ. ಕನ್ನಡಿಗರು ಅಮುಲ್‌ ಪ್ರೋತ್ಸಾಹಿಸಬಾರದು. ಅಮುಲ್‌ ರಾಜ್ಯ ಪ್ರವೇಶಿಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿಬಣದ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿಮಾತನಾಡಿ, ‘ಗುಜರಾತ್‌ ಕಂಪನಿಗಾಗಿ ರಾಜ್ಯ ಸರ್ಕಾರ ನಂದಿನಿಯನ್ನು ಮುಳುಗಿಸಲು ಹೊರಟಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಲಿದ್ದು ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನನ್ನು ಸಿಎಂ ಮಾಡಲು ಅಧಿಕ ಮತದಿಂದ ಗೆಲ್ಲಿಸಿ: ಸಚಿವ ಮುರುಗೇಶ್‌ ನಿರಾಣಿ

ಹೋರಾಟಕ್ಕೆ ಹೋಟೆಲ್‌ಗಳ ಬೆಂಬಲ: ‘ನಮ್ಮ ರೈತರ ಪರವಾಗಿ ನಾವಿದ್ದೇವೆ. ರಾಜ್ಯದ ಕೆಎಂಎಫ್‌ಗೆ ನಮ್ಮ ಬೆಂಬಲವಿದೆ. ಪ್ರತಿ ಹೋಟೆಲ್‌ ಮಾಲೀಕರೂ ನಂದಿನಿ ಉತ್ಪನ್ನಗಳನ್ನೇ ಬಳಕೆ ಮಾಡುತ್ತಾರೆ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಸ್ಪಷ್ಟಪಡಿಸಿದ್ದಾರೆ. ನಗರದ ಹೋಟೆಲ್‌ಗಳಲ್ಲಿ ರುಚಿಯಾದ ಊಟ, ತಿಂಡಿ, ಕಾಫಿ-ಟೀ ಸಿಗಲು ಕೆಎಂಎಫ್‌ ಬೆನ್ನೆಲುಬಾಗಿ ನಿಂತಿದೆ. ಬೇರೆ ರಾಜ್ಯದ ಹಾಲು ಇಲ್ಲಿ ಸರಬರಾಜಾಗುವುದಕ್ಕೆ ನಮ್ಮ ವಿರೋಧವಿದೆ. ಹೋಟೆಲ್‌ಗಳು ನಂದಿನಿ ಉತ್ಪನ್ನಗಳನ್ನೇ ಬಳಸಲಿವೆ ಎಂದು ಭರವಸೆ ನೀಡಿದ್ದಾರೆ.

click me!