
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧ ಸಾರಿದೆ. ಇದರ ಭಾಗವಾಗಿ ಭಾರತದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳು ಆದಷ್ಟು ಬೇಗ ಭಾರತ ತೊರೆಯಬೇಕೆಂದು ಹೇಳಿತ್ತು. ಇದೀಗ ಮೈಸೂರಿನ ಮುಸ್ಲಿಂ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ನೆಲೆಸಿರುವ ವ್ಯಕ್ತಿಯನ್ನು ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿದ್ದು, ಗಂಡನ ಮನೆಗೆ ತೆರಳಲು ಭಾರತದ ಗಡಿ ತಲುಪಿದಾಗ ಸಂಕಷ್ಟ ಎದುರಾಗಿದೆ. ಗಂಡನ ಬಳಿಗೆ ಮಕ್ಕಳನ್ನು ಸೇರಿಸಲಾಗದೆ ಕಂಗಾಲಾದ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ರಕ್ಷಣಾ ಸಿಬ್ಬಂದಿ ಮುಂದೆ ಮಹಿಳೆ ಗೋಳಾಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಮೈಸೂರಿನ ಉದಯಗಿರಿಯ ಮಹಿಳೆ ಪಾಕಿಸ್ತಾನದ ಪುರುಷನ ಜೊತೆ ಮದುವೆ ಆಗಿತ್ತು. ದಂಪತಿಗೆ ಮೂರು ಮಕ್ಕಳಿದ್ದು, ಪಾಕಿಸ್ತಾನದ ಪೌರತ್ವ ಹೊಂದಿದ್ದ ಮಕ್ಕಳು ಮೈಸೂರಿನಲ್ಲಿ ವಾಸ ಇದ್ದರು. ವಿಸಿಟರ್ ವೀಸಾ ಅಡಿ ಬಂದು ವಾಸವಿದ್ದರು. ಪತ್ನಿ ಲಾಂಗ್ ಟರ್ಮ್ ವೀಸಾ ಹೊಂದಿದ್ದಾಳೆ. ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ ಹಿನ್ನೆಲೆ ಮಕ್ಕಳನ್ನು ಪಾಕಿಸ್ತಾನಕ್ಕೆ ಸೇರಿಸಲು ಮಹಿಳೆ ಗಡಿ ತಲುಪಿದ್ದಳು. ಅತ್ತ ಗಂಡ ಪೋನ್ ಸಂಪರ್ಕಕ್ಕೆ ಬಾರದ ಹಿನ್ನೆಲೆ ಗಡಿಯಲ್ಲೇ ಸೈನಿಕರೊಂದಿಗೆ ಮಹಿಳೆ ಸಂಕಷ್ಟ ಹೇಳಿಕೊಂಡಿದ್ದಾಳೆ.
ನಾನು ಮೈಸೂರಿನಿಂದ ಬಂದಿದ್ದೇನೆ. ಗಂಡ ಪಾಕಿಸ್ತಾನದಲ್ಲಿ ಇದ್ದಾರೆ. ನನಗೆ ಮೂರು ಮಕ್ಕಳು. ನನ್ನ ಪಾಸ್‌ಪೋರ್ಟ್ ರಿನಿವಲ್‌ಗೆ ನೀಡಿದ್ದೇನೆ. ಮಕ್ಕಳನ್ನು ಗಡಿ ದಾಟಿಸಬೇಕು. ಆದರೆ ಗಂಡ ಪೋನ್ ತೆಗೆಯುತ್ತಿಲ್ಲ. ಈಗ ನಾನು ಏನು ಮಾಡಲಿ ಎಂದು ಮಹಿಳೆ ಅಟ್ಟಾರಿ ಗಡಿಯಲ್ಲಿ ಗೋಳಾಡಿದ್ದಾಳೆ. ಪಾಕಿಸ್ತಾನಿ ಪೌರತ್ವ ಹೊಂದಿರುವ ತನ್ನ ಮೂವರು ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಸಹಾಯ ಮಾಡಿ ಎಂದು ಯೋಧರ ಬಳಿ ಅಳುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಗಂಡ ಕರೆ ಸ್ವೀಕರಿಸುತ್ತಿಲ್ಲ ಮಕ್ಕಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಯಾರೂ ಇಲ್ಲ. ಅಧಿಕಾರಿಗಳನ್ನು ತಮ್ಮ ಮಕ್ಕಳನ್ನು ಭಾರತದಲ್ಲಿಯೇ ಇರಲು ಬಿಡುವಂತೆ ವಿನಂತಿಸಿಕೊಂಡರು. ಮಹಿಳೆ ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾದ 8 ವರ್ಷಗಳ ನಂತರ 45 ದಿನಗಳ ವೀಸಾದ ಮೇಲೆ 2025ರ ಜನವರಿಯಲ್ಲಿ ತನ್ನ 1 ಹೆಣ್ಣು ಮಗು ಮತ್ತು ಇಬ್ಬರು ಗಂಡು ಮಕ್ಕಳ ಜೊತೆಗೆ ಭಾರತಕ್ಕೆ ಬಂದಿದ್ದರು. ವೀಸಾ ವಿಸ್ತರಣೆಯೊಂದಿಗೆ ಅವರು ತಮ್ಮ ಪಾಕಿಸ್ತಾನಿ ಮೂಲದ ಮಕ್ಕಳನ್ನು ಭಾರತದಲ್ಲಿ ತಮ್ಮೊಂದಿಗೆ ಇಟ್ಟುಕೊಳ್ಳುವುದನ್ನು ಮುಂದುವರೆಸಿದರು. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಪಾಕಿಸ್ತಾನಿ ಪ್ರಜೆಗಳಾಗಿರುವ ಮೂವರು ಮಕ್ಕಳನ್ನು ವಾಪಸ್ ಅಲ್ಲಿಗೆ ಕಳುಹಿಸಬೇಕು. ಆದರೆ ಈಗ ಮಕ್ಕಳ ತಂದೆ ಕರೆ ಸ್ವೀಕರಿಸುತ್ತಿಲ್ಲ. ಆದಾಗ್ಯೂ, ಮಹಿಳೆ ಭಾರತೀಯ ಪೌರತ್ವವನ್ನು ಹೊಂದಿರುವುದರಿಂದ ಸ್ವತಃ ಅವರೊಂದಿಗೆ ಹೋಗಲು ಸಾಧ್ಯವಿಲ್ಲ. ಮಕ್ಕಳ ಪರಿಸ್ಥಿತಿ ಹೇಳಿ ಸುಖವಿಲ್ಲ. ಮೈಸೂರಿನ ಪೊಲೀಸರು ಈಗ ಈ ಸಂಬಂಧ ವಿಚಾರಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದ ರಾಜತಾಂತ್ರಿಕ ಆದೇಶದ ಹಿನ್ನೆಲೆಯಲ್ಲಿ ಇಂತಹ ಅದೆಷ್ಟೋ ಸನ್ನಿವೇಶಗಳು ಈಗ ಗಡಿಯಲ್ಲಿ ಕಂಡಬಂದಿದೆ. ಭಾರತದ ಮಹಿಳೆಯರು ಅನೇಕರು ಪಾಕ್ ಪ್ರಜೆಗಳನ್ನು ಮದುವೆಯಾಗಿದ್ದಾರೆ. ಅಂತೆಯೇ ಪಾಕ್ ಮಹಿಳೆಯರು ಕೂಡ ಭಾರತದಲ್ಲಿರುವ ವಿಚಾರಗಳು ಬಹಿರಂಗವಾಗಿದೆ. ಲಕ್ಷಗಟ್ಟಲೆ ಮಂದಿ ಭಾರತದಲ್ಲಿದ್ದಾರೆ. ವರದಿಯಂತೆ ಪಂಜಾಬ್ ರಾಜ್ಯ ಒಂದರಲ್ಲೇ 83,000 ಮುಸ್ಲಿಂ ಮಹಿಳೆಯರು ಪಾಕಿಸ್ತಾನದಲ್ಲಿ ವಿವಾಹವಾಗಿದ್ದಾರೆ. ಕೇವಲ ಪಂಜಾಬ್ ಒಂದರಲ್ಲಿ ಮಾತ್ರವಲ್ಲ ಕರ್ನಾಟಕದ ಮೈಸೂರು, ಭಟ್ಕಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಪಾಕ್ ಸೊಸೆಯಂದಿರು ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ