
ದಾವಣಗೆರೆ (ಜುಲೈ.27): ಮೈಸೂರಿನಲ್ಲಿ ಭಾರೀ ಪ್ರಮಾಣದ MDMA ಡ್ರಗ್ಸ್ ತಯಾರಿಕಾ ಘಟಕವೊಂದು ಪತ್ತೆಯಾಗಿರುವ ಬಗ್ಗೆ ಗೃಹ ಸಚಿವ ಪರಮೇಶ್ವರ್ ದಾವಣಗೆರೆಯಲ್ಲಿ ಪ್ರತಿಕ್ರಿಸಿದ್ದು, ಈ ಘಟನೆ ನಮ್ಮ ರಾಜ್ಯದಲ್ಲೇ ನಡೆದಿರೋದು ನಿಜವಾಗಿಯೂ ಆತಂಕಕಾರಿ ಎಂದು ವಿಷಾದವ್ಯಕ್ತಪಡಿಸಿದರು.
ಮುಂಬೈ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ ಸಂದರ್ಭದಲ್ಲಿ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಮೈಸೂರಿನ ರಿಂಗ್ ರಸ್ತೆಯ ಬಳಿಯ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಬಗ್ಗೆ ಕರ್ನಾಟಕ ಪೊಲೀಸರು ಸಹ ತನಿಖೆ ನಡೆಸಲಿದ್ದಾರೆ ಎಂದರು.
ಈ ಘಟಕ ಕಳೆದ 20 ದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ, ಇದಕ್ಕೂ ಮೊದಲಿನಿಂದಲೂ ಇದು ನಡೆಯುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ. ಡ್ರಗ್ಸ್‌ನ ಸರಬರಾಜು ಎಲ್ಲೆಲ್ಲಿ ನಡೆದಿದೆ, ಇದರ ಹಿಂದಿನ ಜಾಲವನ್ನು ಭೇದಿಸಲು ಕರ್ನಾಟಕ ಪೊಲೀಸರು ಸಂಪೂರ್ಣ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆ ಸಿಇಎನ್ ಪೊಲೀಸರ ಭರ್ಜರಿ ಬೇಟೆ; ಹೈವೆ ಬಳಿ ನಿಂತು ಡ್ರಗ್ಸ್ ಮಾರುತ್ತಿದ್ದ ಐವರು ಪೆಡ್ಲರ್‌ಗಳ ಬಂಧನ
ಇದೇ ವೇಳೆ ಕರ್ನಾಟಕದಲ್ಲಿ ದಲಿತ ಸಿಎಂ ಕುರಿತು ಶಾಸಕ ದೇವೇಂದ್ರಪ್ಪನವರ ಹೇಳಿಕೆ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ ಎಂದು ಅಲ್ಲಿಂದ ತೆರಳಿದರು.
ಕರ್ನಾಟಕದಲ್ಲಿ ಮಾದಕ ವಸ್ತುಗಳ ದಂಧೆಯ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ. ಮುಂದಿನ ತನಿಖೆಯಿಂದ ಈ ಪ್ರಕರಣದ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ