ಮೈಸೂರು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಮಾಡದ್ದು ನಮ್ಮ ಲೋಪ : ಡಾ. ಜಿ.ಪರಮೇಶ್ವರ್

Kannadaprabha News   | Kannada Prabha
Published : Jul 29, 2025, 03:38 AM IST
Parameshwar

ಸಾರಾಂಶ

ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್‌ ತಯಾರಿಕಾ ಘಟಕ ಪತ್ತೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರ ಕಾರ್ಯವೈಖರಿ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್‌ ತಯಾರಿಕಾ ಘಟಕ ಪತ್ತೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರ ಕಾರ್ಯವೈಖರಿ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲೇ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ವಿಚಾರ ಸ್ಥಳೀಯ ಪೊಲೀಸರಿಗೇ ಗೊತ್ತಾಗಿಲ್ಲ. ಮುಂಬೈ ಪೊಲೀಸರು ಬಂದು ದಾಳಿ ಮಾಡುತ್ತಾರೆಂದರೆ ನಮ್ಮದೇ ಲೋಪ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ವಿಚಾರ ಸ್ಥಳೀಯ ಪೊಲೀಸರಿಗೇ ಮಾಹಿತಿ ಇರಲಿಲ್ಲ. ಇದರ ಸಂಪೂರ್ಣ ಮಾಹಿತಿ ಇನ್ನೂ ಬರಬೇಕಿದೆ. ರಾಜಾರೋಷವಾಗಿ ಇಲ್ಲಿ ಡ್ರಗ್ಸ್‌ ತಯಾರಿಸುತ್ತಿದ್ದರು ಅನ್ನೋದು ಆತಂಕದ ವಿಚಾರ ಎಂದರು.

ಡ್ರಗ್ಸ್‌ ತಯಾರಿಕೆ ಮತ್ತು ಮಾರಾಟ ಜಾಲದ ಕುರಿತು ಎಸ್ಪಿಗಳಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದ ಪೊಲೀಸರೊಂದಿಗೆ ನಮ್ಮ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಮಾದಕ ದ್ರವ್ಯ ಮಾರಾಟಗಾರನೊಬ್ಬನನ್ನು ಬಂಧಿಸಿದ ಮಹಾರಾಷ್ಟ್ರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮೈಸೂರು ಹೊರ ವಲಯದ ರಿಂಗ್‌ ರಸ್ತೆ ಬಳಿ ಭಾನುವಾರ ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಭಾರೀ ಪ್ರಮಾಣದಲ್ಲಿ 100 ಕೋಟಿ ರು. ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿತ್ತು.

ಮೈಸೂರು ಫ್ಯಾಕ್ಟರಿ ಕೇಸಲ್ಲಿ ₹390 ಕೋಟಿಯ ಡ್ರಗ್ಸ್ ವಶ

ಮುಂಬೈಭಾನುವಾರ ಮೈಸೂರಿನ ಹೊರವಲಯದಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ವಶ ಪ್ರಕರಣದ ಸಂಪೂರ್ಣ ಚಿತ್ರಣವನ್ನು ದಾಳಿ ನಡೆಸಿದ್ದ ಮುಂಬೈ ಪೊಲೀಸರು ಸೋಮವಾರ ನೀಡಿದ್ದು ‘ಒಟ್ಟು 390 ಕೋಟಿ ರು. ಮೌಲ್ಯದ 192 ಕೆ.ಜೆ. ಮೆಫೆಡ್ರೋನ್‌ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. 8 ಜನರನ್ನು ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉಪ ಪೊಲೀಸ್ ಆಯುಕ್ತರ ದತ್ತಾ ನಲವಾಡೆ, ‘ಮೈಸೂರು ದಾಳಿಗೂ ಮುಂಚೆ 8 ಕೋಟಿ ರು. ಮೌಲ್ಯದ 5 ಕೇಜಿ ಮಫೆಡ್ರೋನ್‌ ಡ್ರಗ್ಸ್‌ ಸಿಕ್ಕಿತ್ತು. ಮೈಸೂರು ದಾಳಿ ನಂತರ 187 ಕೇಜಿ ಮೆಥೆಡ್ರೋನ್‌ ಡ್ರಗ್ಸ್‌ ಸಿಕ್ಕಿದ್ದು, ಅದರ ಮೌಲ್ಯ 382 ಕೋಟಿ ರುಪಾಯಿ. ಒಟ್ಟಾರೆ 390 ಕೋಟಿ ರು. ಮೌಲ್ಯದ 192 ಕೇಜಿ ಡ್ರಗ್ಸ್‌ ಇಡೀ ಪ್ರಕರಣದಲ್ಲಿ ಈವರೆಗೆ ಸಿಕ್ಕಿದೆ’ ಎಂದಿದ್ದಾರೆ.‘ಈ ವರ್ಷದ ಏಪ್ರಿಲ್‌ನಲ್ಲಿ ಪಶ್ಚಿಮ ಮುಂಬೈನ ಸಾಕಿನಾಕಾದಲ್ಲಿ 52 ಗ್ರಾಂ ಮೆಫೆಡ್ರೋನ್‌ನೊಂದಿಗೆ ವ್ಯಕ್ತಿಯನ್ನು ಬಂಧಿಸಿದ ನಂತರ ಪ್ರಕರಣದ ತನಿಖೆ ಪ್ರಾರಂಭವಾಯಿತು ಮತ್ತು ಆತನ ವಿಚಾರಣೆಯ ಸಮಯದಲ್ಲಿ ಪೊಲೀಸರು ಇನ್ನೂ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಿದರು. ಅವರಿಂದ 8 ಕೋಟಿ ರು. ಮೌಲ್ಯದ 4.53 ಕಿಲೋಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!