ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆ ಪ್ರವೇಶಿಸಿದ ಗಜಪಡೆ: ಅದ್ಧೂರಿ ಸಂಭ್ರಮ

Published : Aug 11, 2025, 08:10 AM IST
Mysuru Dasara

ಸಾರಾಂಶ

ದಸರಾ ಆನೆಗಳನ್ನು ಸಾಮಾನ್ಯವಾಗಿ ಬೆಳಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ಅರಮನೆಗೆ ಸ್ವಾಗತಿಸುವುದು ವಾಡಿಕೆ ಆಗಿದೆ. ಆದರೆ, ಇದೇ ಮೊದಲ ಬಾರಿಗೆ ದಸರಾ ಆನೆಗಳನ್ನು ಸಂಜೆ ಹೊತ್ತಿನಲ್ಲಿ, ಅದುವೂ ಸೂರ್ಯಾಸ್ತಮ ಆದ ಬಳಿಕ ಸ್ವಾಗತಿಸಲಾಯಿತು.

ಮೈಸೂರು (ಆ.11): ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಮೈಸೂರು ಅರಮನೆಯಲ್ಲಿ ಭಾನುವಾರ ಸಂಜೆ 6.45ಕ್ಕೆ ಶುಭ ಮಕರ ಗೋಧೂಳಿ ಲಗ್ನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತುಂತುರು ಮಳೆಯಲ್ಲೇ ಅಶೋಕಪುರಂನಲ್ಲಿರುವ ಅರಣ್ಯ ಭವನದಿಂದ ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ನಡಿಗೆಯಲ್ಲಿ ಆಗಮಿಸಿದ ಅಂಬಾರಿ ಆನೆ ಅಭಿಮನ್ಯು, ಪ್ರಶಾಂತ, ಭೀಮ, ಧನಂಜಯ, ಮಹೇಂದ್ರ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು.

ಮಂಗಳವಾದ್ಯದೊಂದಿಗೆ ಆನೆಗಳ ಪಾದಕ್ಕೆ ಕುಂಕುಮ, ಅರಿಶಿಣ, ಗಂಧ, ಬಸ್ಮ, ವಿಭೂತಿ, ಅಕ್ಷತೆ, ವಿವಿಧ ಬಗೆಯ ಹೂಗಳು, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ದಸರಾ ಆನೆಗಳನ್ನು ಸಾಮಾನ್ಯವಾಗಿ ಬೆಳಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ಅರಮನೆಗೆ ಸ್ವಾಗತಿಸುವುದು ವಾಡಿಕೆ ಆಗಿದೆ. ಆದರೆ, ಇದೇ ಮೊದಲ ಬಾರಿಗೆ ದಸರಾ ಆನೆಗಳನ್ನು ಸಂಜೆ ಹೊತ್ತಿನಲ್ಲಿ, ಅದುವೂ ಸೂರ್ಯಾಸ್ತಮ ಆದ ಬಳಿಕ ಸ್ವಾಗತಿಸಲಾಯಿತು. ಆ ಮೂಲಕ ಹೊಸ ಸಂಪ್ರದಾಯಕ್ಕೆ ಈ ಬಾರಿ ನಾಂದಿ ಹಾಡಲಾಯಿತು.

ಬಳಿಕ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶೋಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆ ಆವರಣಕ್ಕೆ ಆನೆಗಳನ್ನು ಬರ ಮಾಡಿಕೊಂಡರು. ದಸರಾ ಆನೆಗಳು ಅರಮನೆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಸಿಎಆರ್ ಪೊಲೀಸರು ಗೌರವ ರಕ್ಷೆ ಸಲ್ಲಿಸಿದರು. ನಂತರ ಮಂಗಳವಾದ್ಯ, ಕಂಸಾಳೆ, ಡೊಳ್ಳು, ಚಂಡೆ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳು, ಪೂರ್ಣಕುಂಭದೊಂದಿಗೆ ಆನೆಗಳು ಅರಮನೆಯ ಮುಂಭಾಗದ ಆನೆ ಬಾಗಿಲಿಗೆ ಪ್ರವೇಶಿಸಿದವು. ಬಳಿಕ ಆನೆಗಳನ್ನು ಪೂರ್ವ ದಿಕ್ಕಿಗೆ ಸಾಲಾಗಿ ನಿಲ್ಲಿಸಿ, ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಲಾಯಿತು.

ಅದ್ಧೂರಿ ಆಚರಣೆ: ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಅದ್ಧೂರಿಯಾಗಿ ದಸರಾ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ದಸರಾ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಅರಮನೆ ಆವರಣದಲ್ಲಿ ಭಾನುವಾರ ಸಂಜೆ ದಸರಾ ಆನೆಗಳನ್ನು ಸ್ವಾಗತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವ ಆಚರಣೆ ಸಂಬಂಧ ಅಧಿಕಾರಿಗಳ ಸಭೆ ಮಾಡಿ, ದಸರಾ ಯಶಸ್ವಿಯಾಗಿ ನಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಈ ಬಾರಿಯೂ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರುತ್ತದೆ.

3- 4 ವಾರಗಳ ಮುಂಚಿತವಾಗಿಯೇ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇವೆ. ಡ್ರೋನ್ ಶೋ ಟಿಕೆಟ್ 3 ಸಾವಿರ ನಿಗದಿ ಮಾಡಲಾಗಿದೆ. ಈ ಬಾರಿ ದಸರಾ ಏರ್ ಶೋ ಇರುತ್ತದೆ ಎಂದು ಅವರು ಹೇಳಿದರು. ಗಾಂಧಿ ಜಯಂತಿ ದಿನವೇ ಜಂಬೂಸವಾರಿ ಮೆರವಣಿಗೆ ‌ನಡೆಯಲಿದೆ. ಹೀಗಾಗಿ, ಗಾಂಧಿಜಿಯವರ ಸಂದೇಶ ಸಾರುವಂತಹ ದಸರಾ ಆಗಲಿದೆ ಎಂದರು. ದಸರಾ ಉದ್ಘಾಟಕರ ಆಯ್ಕೆಯನ್ನು ಮುಖ್ಯಮಂತ್ರಿಗೆ ಬಿಟ್ಟಿದ್ದೇವೆ. ಅಂತಿಮವಾಗಿ ಸಿಎಂ ಅವರೇ ದಸರಾ ಉದ್ಘಾಟಕರನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು. ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಇನ್ನೂ ಮೂರು ದಸರಾಗಳನ್ನು ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡುತ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!