ಶ್ರೀರಂಗಂನಿಂದ ಶೇಷವಸ್ತ್ರ ಆಗಮನ; ಮಂತ್ರಾಲಯದಲ್ಲಿ ಗುರುರಾಯರ ಪೂರ್ವಾರಾಧನೆ

Published : Aug 11, 2025, 07:50 AM IST
Mantralaya Raghavendra Swamy

ಸಾರಾಂಶ

ಪ್ರತಿವರ್ಷದಂತೆ ಗುರುರಾಯರ ಪೂರ್ವಾರಾಧನೆ ಅಂಗವಾಗಿ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಗಳು ಸ್ವಾಗತಿಸಿದರು.

ರಾಯಚೂರು (ಆ.11): ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮ, ಸಡಗರದಿಂದ ನಡೆದವು. ಸಪ್ತರಾತ್ರೋತ್ಸವದ ಮೂರನೇ ದಿನವಾದ ಭಾನುವಾರ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕವನ್ನು ನಡೆಸಲಾಯಿತು. ಬೆಳಗ್ಗೆ ವೇದ-ಮಂತ್ರಗಳ ಪಾರಾಯಣ, ಬಳಿಕ ಬೆಂಗಳೂರಿನ ವಿದ್ವಾನ್ ಮದನೂರ ಪವಮನಾಚಾರ್ಯ ಅವರಿಂದ ಪ್ರವಚನಗಳು ನಡೆದವು.

ಶ್ರೀರಂಗಂನಿಂದ ಬಂದ ಶೇಷವಸ್ತ್ರ: ಪ್ರತಿವರ್ಷದಂತೆ ಗುರುರಾಯರ ಪೂರ್ವಾರಾಧನೆ ಅಂಗವಾಗಿ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಗಳು ಸ್ವಾಗತಿಸಿದರು. ಶೇಷವಸ್ತ್ರ ಪ್ರಸಾದವನ್ನು ಮೆರವಣಿಗೆಯಲ್ಲಿ ತಂದು, ಮೂಲಬೃಂದಾವನದ ಮುಂದಿರಿಸಿ, ಮಂಗಳಾರತಿ ಮಾಡಿ, ರಾಯರಿಗೆ ಸಮರ್ಪಿಸಿದರು. ನಂತರ, ಪ್ರಾಧಿಕಾರದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.

ಪ್ರತಿ ವರ್ಷ ರಾಯರ ಆರಾಧನಾ ಸಮಯದಲ್ಲಿ ಟಿಟಿಡಿ, ಶ್ರೀರಂಗ, ಅಹೋಬಿಲಂ ಹಾಗೂ ಕಾಂಚಿಪುರಂ ಕ್ಷೇತ್ರಗಳಿಂದ ಮಠಕ್ಕೆ ಬರುವ ವಸ್ತ್ರಪ್ರಸಾದವನ್ನು ಗುರುರಾಯರಿಗೆ ಸಮರ್ಪಿಸುವ ಸಂಪ್ರದಾಯ ಹಾಕಿಕೊಳ್ಳಲಾಗಿದೆ. ಈ ಮುಖಾಂತರ ಗುರುಗಳ ಹಾಗೂ ಭಗವಂತನ ಅನುಗ್ರಹ ಎಲ್ಲ ಭಕ್ತರಿಗೂ ದೊರೆಯಲಿ ಎಂದು ಶುಭಕೋರಿದರು. ಈ ವೇಳೆ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ್ದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ ಪಂಡಿತರು, ಅಧಿಕಾರಿ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಶ್ರೀಗಳಿಂದ ಸಂಸ್ಥಾನ ಪೂಜೆ: ನಂತರ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಶ್ರೀಮೂಲ ರಘುಪತಿ ವೇದವ್ಯಾಸದೇವರಿಗೆ ಸಂಸ್ಥಾನ ಪೂಜೆ, ಅಲಂಕಾರ ಸಮರ್ಪಣ ಹಾಗೂ ಹಸ್ತೋದಕ, ಮಹಾಮಂಗಳಾರತಿ ನೆರವೇರಿಸಿದರು. ಪೂರ್ವಾರಾಧನೆ ನಿಮಿತ್ತ ವಿಶೇಷವಾಗಿ ಅಲಂಕಾರಗೊಂಡಿದ್ದ ರಾಯರ ಮೂಲಬೃಂದಾವನಕ್ಕೆ ಮಹಾಮಂಗಳಾರತಿ ಸೇವೆಗೈದರು. ಸಂಜೆ ಹಗಲು ದೀವಟಿಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಾಚನ ಮತ್ತು ಪ್ರಾಕಾರದಲ್ಲಿ ರಜತಸಿಂಹ ವಾಹನೋತ್ಸವಗಳು ಅದ್ದೂರಿಯಾಗಿ ಜರುಗಿದವು. ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದಾಚಾರ್, ರಾಜ್ಯ ಸರ್ಕಾರದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌