
ಮೈಸೂರು (ಜೂ.21): ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಪೊಲೀಸ್ ಠಾಣೆ ಮತ್ತು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಸೃಜಿಸಲು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯು ಅನುಮತಿ ನೀಡಿ ಆದೇಶಿಸಿದೆ.
ಇದರಿಂದ ಹಲವು ವರ್ಷಗಳಿಂದ ಎನ್.ಆರ್. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಅವರು ನಡೆಸುತ್ತಿದ್ದ ಪ್ರಯತ್ನವು ಸಫಲಗೊಂಡಿದೆ. ಹಾಗೆಯೇ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸಂಬಂಧ 18 ಪೊಲೀಸ್ ಠಾಣೆಗಳಿದ್ದು, ಈಗ ಇದರ ಸಂಖ್ಯೆ 19ಕ್ಕೆ ಏರಿಕೆ ಆಗಲಿದೆ.
ಕೋಮು ಸೂಕ್ಷ್ಮ ಪ್ರದೇಶವಾಗಿರುವ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ನಡೆಯುತ್ತಿರುವ ಅಪರಾಧ ಕೃತ್ಯ, ಕೋಮುಗಲಭೆ, ಜಾತಿ- ಧರ್ಮಗಳ ನಡುವಿನ ವೈವಿಧ್ಯಮಯ ವಿವಾದ, ಕೊಲೆ, ಕೊಲೆ ಯತ್ನ ಪ್ರಕರಣಗಳು ಮತ್ತು ಬದಲಾಗುತ್ತಿರುವ ಚುನಾವಣಾ ವ್ಯವಸ್ಥೆಯಿಂದಾಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಕಾರ್ಯದೋತ್ತಡ ಹೆಚ್ಚಾಗಿತ್ತು.
ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಹೆಚ್ಚಾಗಿದ್ದು, 78 ಮಸೀದಿಗಳು, 59 ದೇವಸ್ಥಾನಗಳು ಮತ್ತು 9 ಚರ್ಚ್ ಗಳಿವೆ. ಹೀಗಾಗಿ, ಎನ್.ಆರ್. ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಉದಯಗಿರಿ ಠಾಣೆಯನ್ನು ಪ್ರತ್ಯೇಕಗೊಳಿಸಿ ಎರಡು ಠಾಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಹೊಸದೊಂದು ಠಾಣೆ ಸ್ಥಾಪಿಸಲು ಅನುಮತಿ ನೀಡಿದೆ.
ಹಾಲಿ ಇರುವ ಉದಯಗಿರಿ ಠಾಣೆಯ ಕಟ್ಟಡವನ್ನು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಮಾರ್ಪಾಡು ಮಾಡಿ, ದೇವನೂರು 1ನೇ ಹಂತದಲ್ಲಿನ ಸಿಎ ನಿವೇಶನದಲ್ಲಿ ಉದಯಗಿರಿ ಉತ್ತರ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ