ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ

By Govindaraj S  |  First Published Aug 14, 2023, 9:03 PM IST

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರಾವನ್ನ ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಇಂದು ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯ್ತು. 


ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಮೈಸೂರು (ಆ.14): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರಾವನ್ನ ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಇಂದು ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯ್ತು. ದಸರಾ ಸಭೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಇವೆಲ್ಲವೂ ಇಂದು ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರತಿಧ್ವನಿಸಿದ ಮಹತ್ವದ ಅಭಿಪ್ರಾಯಗಳು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಒಳಗೊಂಡ ದಸರಾ ಕಾರ್ಯಕಾರಿಣಿ ಸಭೆ ನಡೆಯಿತು. 

Tap to resize

Latest Videos

ಹಿಂದಿನ ವರ್ಷಗಳು ನಡೆದ ದಸರಾದಲ್ಲಿ ಬಹಳಷ್ಟು ಏರಿಳಿತಗಳು ಇದ್ವು. ಆದ್ರೆ ಈ ಬಾರಿ ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದಾರೆ ಹೀಗಾಗಿ ಹೆಚ್ಚಿನ ಅನುದಾನ ಇರಲಿ, ಅದ್ಧೂರಿ ದಸರಾ ನಡೆಯಲಿ ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು. ಇದಕ್ಕೆ ಪೂರಕವಾದಂತೆ ಉಸ್ತುವಾರಿ ಸಚಿವರು ಅದ್ಧೂರಿ ದಸರಾ ಆಚರಿಸೋಣ, ಮುಖ್ಯಮಂತ್ರಿಗಳಿಗೆ ನಿಮ್ಮ ಸಲಹೆಗಳನ್ನ ತಿಳಿಸುತ್ತೇನೆ ಎಂದಿದ್ದಾರೆ.  ಇವತ್ತಿನ ದಸರಾ ಸಭೆಯಲ್ಲಿ ಹೆಚ್ಚಿನ ಗಮನ ಸೆಳೆದಿದ್ದು ಎಂಎಲ್ಸಿ ಎಚ್ ವಿಶ್ವನಾಥ್ ಸಲಹೆಗಳು. ದಸರಾ ಪ್ರಮುಖ ಆಕರ್ಷಣೆಯಾದ ಗಜಪಯಣಕ್ಕೆ ಸಂಬಂಧಿಸಿದಂತೆ ಗಜಪಡೆಯನ್ನು ಲಾರಿಗಳ ಮೂಲಕ ಮೈಸೂರಿಗೆ ಕರೆ ತರುವುದು ಬೇಡ, ಕಾಲ್ನಡಿಗೆ ಮೂಲಕ ಮೈಸೂರಿಗೆ ಕರೆ ತರಬೇಕು ಎಂಬ ಸಲಹೆ ನೀಡಿದರು. 

ಸಿದ್ದರಾಮಯ್ಯ ಸರ್ಕಾರ ಮೋಸಗಾರರ ಸರ್ಕಾರ: ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ

ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ. ಈ ಹಿಂದೆ ಮೈಸೂರು ಮಹಾರಾಜರು ಆನೆಗಳಿಗೆ ಫಲ ತಾಂಬೂಲ ನೀಡಿ ಕಾಲ್ನಡಿಗೆಯಲ್ಲಿ ಕರೆ ತರುತ್ತಿದ್ದರು. ಆನೆಗಳನ್ನು ಕಾಲ್ನಡಿಗೆಯಲ್ಲಿಯೇ ಕರೆ ತಂದರೆ ಒಳ್ಳೆಯದು ಅಂತ ಎಂಎಲ್ ಸಿ ವಿಶ್ವನಾಥ್ ಸಲಹೆ ನೀಡಿದ್ರು. ಆದರೆ ಅದು ನಿಯಮಾನುಸಾರ ಸಾಧ್ಯವಿಲ್ಲ ಎಂಬ ಅಭಿಪ್ರಯಾವನ್ನ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ ತಿಳಿಸಿದರು. ಸೆಪ್ಟೆಂಬರ್ 1 ಕ್ಕೆ ಗಜಪಯಣದ ಮೂಲಕ ಹುಣಸೂರಿನ ವೀರನ ಹೊಸಹಳ್ಳಿಯಿಂದ ಆನೆಗಳನ್ನ ಮೈಸೂರಿಗೆ ಕರೆತರಲಾಗುತ್ತಿದ್ದು, ಆನೆಗಳನ್ನ ನಡೆಸಿಕೊಂಡು ಬರುವ ಬಗ್ಗೆ ಅವಕಾಶ ಇದ್ಯಾ ಎಂಬುದು ಮುಖ್ಯ. 

ಗೈಡ್ ಲೈನ್ಸ್ ಪ್ರಕಾರ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆ ತರಲು ಸಾಧ್ಯವಿಲ್ಲ ಅಂತಾ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ತಿಳಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಕೂಡ ಸಹಮತ ನೀಡಿದ್ರು. ಇದಕ್ಕೆ ಜಿಲ್ಲಾ ಮಂತ್ರಿಗಳು ಸಿಎಂ ಜೊತೆ ಮಾತನಾಡುವೆ ಎನ್ನುವ ಮೂಲಕ ಚರ್ಚೆಗೆ ಬ್ರೇಕ್‌ ಹಾಕಿದ್ರು. ಇನ್ನೂ ಈ ಬಾರಿಯ ದಸರಾಗೆ ಒಟ್ಟು14 ಆನೆಗಳ ಪಟ್ಟಿ ಸಿದ್ದ ಪಡಿಸಲಾಗಿದ್ದು, ಅದರಲ್ಲಿ 10 ಗಂಡು ಆನೆಗಳಿದ್ದು, 4 ಹೆಣ್ಣಾನೆಗಳಿವೆ. ಸೆಪ್ಟೆಂಬರ್ 1 ಕ್ಕೆ ಗಜಪಯಣ ಕಾರ್ಯಕ್ರಮ ನಿಗದಿಯಾಗಿದ್ದು, ಅಂದು 9 ಆನೆಗಳು ಮೈಸೂರಿನತ್ತ ಬರುತ್ತಿವೆ. ಎರಡು ಹಂತದಲ್ಲಿ ಆನೆಗಳನ್ನ ಕರೆ ತರಲು ಸಿದ್ಧತೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ರು. 

ಈ ಬಾರಿಯ ದಸರಾದ ಮೊದಲ  ಸಭೆ ಹೆಚ್ಚಿನ ಚರ್ಚೆಯಾಗಿದ್ದು, ಪಾಸ್ ನೀಡುವ ವಿಚಾರ. ಪಾಸ್‌ಗಳ ವ್ಯವಸ್ಥೆ ಇದ್ದರೆ ಕೇವಲ ರಾಜಕಾರಣಿಗಳು, ಅಧಿಕಾರಿಗಳಿಗೆ ಮಾತ್ರ ಉಪಯೋಗ ಆಗುತ್ತೆ. ಜನಸಾಮಾನ್ಯರು ದಸರಾ ನೋಡಲು ಸಾಧ್ಯವಾಗಲ್ಲ. ಹೀಗಾಗಿ ಈ ಬಾರಿ ದಸರಾ ಪಾಸ್ ರದ್ದು ಮಾಡಿ, ಜನಸಾಮಾನ್ಯರು ಸಹ ವಿಜೃಂಭಣೆಯ ದಸರಾ ನೋಡಲು ಅವಕಾಶ ಮಾಡಿ ಅಂತಾ ಒತ್ತಾಯಗಳು ಕೇಳಿ ಬಂದ್ದವು. ಇದೆಲ್ಲಕ್ಕೂ ಮಿಗಿಲಾಗಿ ಈ ಬಾರಿ ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಮಾದರಿಯಲ್ಲಿ ಬ್ರಾಂಡ್ ಮೈಸೂರು ಕಲ್ಪನೆ ಹೊರ ತರಲಾಗಿದೆ. ದಸರಾ ಹೊಸ್ತಿಲಲ್ಲಿ ಬ್ರಾಂಡ್ ಮೈಸೂರು ಚಿಂತನೆ ನಡೆದಿದ್ದು ಇದಕ್ಕಾಗಿ ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಸ್ಪರ್ಧೆ ಆಯೋಜನೆ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಲೋಗೋ, ಶುಭ ಸಂದೇಶ ನೀಡುವ ಸರ್ಪರ್ಧೆಯನ್ನು ಜನರಿಗೆ ನೀಡಲಾಗಿದೆ. 

ಎಚ್‌ಎಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಚಿವ ಪರಮೇಶ್ವರ್‌

ಸಭೆಯಲ್ಲಿ ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೈಸೂರಿನ ನೆಚ್ಚಿನ ತಾಣದ ಬಗ್ಗೆ ಲೋಗೋ, ಟ್ಯಾಗ್‌ಲೈನ್ ನೀಡುವಂತೆ ಜನರಿಗೆ ಮನವಿ ಮಾಡಿದ್ರು. ಇದಕ್ಕಾಗಿ ವಿಜೇತರಿಗೆ ಬಹುಮಾನ ನೀಡಲಿದ್ದು, ಮೊದಲ ಬಹುಮಾನ 30 ಸಾವಿರ ರೂ., ನಗದು ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನಿಗದಿ ಮಾಡಲಾಗಿದೆ. ನೋಂದಾಣಿಗೆ ಕೊನೆ ದಿನಾಂಕ 31/08/2023 ಆಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/09/2023ರನ್ನು ನಿಗಧಿ ಮಾಡಲಾಗಿದೆ. ಟ್ಟಾರೆ ಈ ಬಾರಿಯ ದಸರಾ ವಿಜೃಂಭಣೆಯಿಂದ ಆಗಲಿ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಅದ್ಧೂರಿ ದಸರಾವನ್ಮ ಕಣ್ತುಂಬಿಕೊಳ್ಳಲಿ. ನಾಡ ದೇವತೆ ಚಾಮುಂಡೇಶ್ವರಿ ಕೃಪೆಯಿಂದ ನಾಡು ಸಮೃದ್ಧವಾಗಲಿ ಎಂಬುದೇ ಎಲ್ಲರ ಹಾರೈಕೆ.

click me!