
ಬೆಂಗಳೂರು (ಫೆ.10): ರಾಜ್ಯದ ಸರ್ಕಾರಿ ಶಾಲೆಗಳನ್ನು (Government School) ಸಮರ್ಪಕವಾಗಿ ಅಭಿವೃದ್ಧಿಸುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ‘ನನ್ನ ಶಾಲೆ, ನನ್ನ ಕೊಡುಗೆ’ (My School My Contribution) ರೂಪಿಸಿದೆ. ಈ ಯೋಜನೆಗೆ ಹಳೆ ವಿದ್ಯಾರ್ಥಿಗಳು, ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು, ಶ್ರೀಮಂತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟಹೆಚ್ಚಿಸುವ ಸಂಬಂಧ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಖಾಸಗಿ ಸಂಸ್ಥೆಗಳೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಚಾಲನೆ ನೀಡಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರು ಮತ್ತು ಖಾಸಗಿಯವರ ಸಹಕಾರದೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಿಕ್ಷಣ ಇಲಾಖೆ ‘ನನ್ನ ಶಾಲೆ, ನನ್ನ ಕೊಡುಗೆ’ ಎಂಬ ಮಹತ್ವದ ವೆಬ್‌ಪೋರ್ಟಲ್ ಅಭಿವೃದ್ಧಿಪಡಿಸಿದೆ. ಈ ವೆಬ್‌ಪೋರ್ಟಲ್‌ನಲ್ಲಿ ಪ್ರತಿಯೊಂದು ಶಾಲೆಯ ಸಂಪೂರ್ಣ ಮಾಹಿತಿ ಹಾಗೂ ಆ ಶಾಲೆಗೆ ಅಗತ್ಯವಿರುವ ಪೀಠೋಪಕರಣ, ಕೊಠಡಿ, ಕಂಪ್ಯೂಟರ್, ಪುಸ್ತಕ, ಸಮವಸ್ತ್ರ, ಶೈಕ್ಷಣಿಕ ಉಪಕರಣಗಳು ಸೇರಿದಂತೆ ಎಲ್ಲ ರೀತಿಯ ಅಗತ್ಯತೆಗಳ ಮಾಹಿತಿಯನ್ನು ನೀಡಲಾಗಿರುತ್ತದೆ.
Karnataka Politics: ಹಿಜಾಬ್ ವಿವಾದಕ್ಕೆ ನಾಗೇಶ್, ಆರಗ ಕಾರಣ: ಸಿದ್ದು ವಾಗ್ದಾಳಿ
ಈ ವೆಬ್‌ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ ಪ್ರತಿಯೊಬ್ಬರೂ ತಮ್ಮ ಶಕ್ತಿ ಅನುಸಾರ ಶಾಲೆಯ ಅಭಿವೃದ್ಧಿಗೆ ನೆರವು ನೀಡಲು ಅವಕಾಶವಿರುತ್ತದೆ. ಇದಕ್ಕೆ ಹಳೆಯ ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳು, ಕೈಗಾರಿಕೆಗಳ ಮಾಲೀಕರು, ಕಾರ್ಪೊರೇಟ್ ಕಂಪನಿಗಳು, ಶ್ರೀಮಂತರು, ರಾಜಕಾರಣಿಗಳು, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಪ್ರತಿಯೊಂದು ವಲಯದ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಬೇಕು ಎಂದು ಕೋರಿದರು.
ಶೀಘ್ರ ಆ್ಯಪ್ ಬಿಡುಗಡೆ: ಈಗಾಗಲೇ ಅನೇಕ ವರ್ಷಗಳಿಂದ ಉಳ್ಳವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಅವರೆಲ್ಲರನ್ನೂ ಒಂದೇ ವೇದಿಕೆಗೆ ತರುವುದು, ಇನ್ನಷ್ಟುಜನರನ್ನು ಉತ್ತೇಜಿಸುವುದು ಹಾಗೂ ಅವರು ನೀಡುವ ಪ್ರತಿಯೊಂದು ಸಹಕಾರ, ಸೌಲಭ್ಯಗಳ ಸಮರ್ಪಕ ಉಪಯೋಗ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವುದು ‘ನನ್ನ ಶಾಲೆ, ನನ್ನ ಕೊಡುಗೆ’ ಯೋಜನೆ ಉದ್ದೇಶವಾಗಿದೆ. ಈ ಕುರಿತು ಆ್ಯಪ್ ಕೂಡ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಮುಖ್ಯಮಂತ್ರಿ ಅವರು ಫೆ.14ರಂದು ಉದ್ಘಾಟಿಸಲಿದ್ದಾರೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೂಡ ಸಾರ್ವಜನಿಕರು ಶಾಲೆಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ನೆರವಾಗಬಹುದು ಎಂದು ಸಚಿವರು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಮಾತನಾಡಿ, ರಾಜ್ಯದಲ್ಲಿ 48 ಸಾವರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ‘ನನ್ನ ಶಾಲೆ ನನ್ನ ಕೊಡುಗೆ’ ವೆಬ್ ಪೋರ್ಟಲ್ ಮತ್ತು ಮುಂದೆ ಚಾಲನೆಗೊಳ್ಳುವ ಆ್ಯಪ್‌ನಲ್ಲಿ ನೋಂದಣಿಯಾಗುವ ಮೂಲಕ ದೇಶದ ಒಳಗೆ ನೆಲೆಸಿರುವವರಾಗಲಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಲಿ ಅಥವಾ ಇನ್ಯಾರೇ ಆಗಲಿ ದೇಣಿಗೆ, ನೆರವು ನೀಡಬಹುದು. ತಾವು ನೆರವು ನೀಡಲಿಚ್ಚಿಸುವ ಶಾಲೆಗೆ ಸಂಬಂಧಿಸಿದ ಬಿಇಒ, ಡಿಡಿಪಿಗಳೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಬಹುದು ಎಂದು ತಿಳಿಸಿದರು.
Covid 3rd Wave: ಜ.31 ರಿಂದ ಶಾಲೆ ಪುನಾರಂಭ: ಸಚಿವ ನಾಗೇಶ್ ಹೇಳಿದ್ದಿಷ್ಟು
ಇಂದಿನ ಸಭೆಯಲ್ಲಿ ಭಾರತಿ, ಐಬಿಎ, ಟೊಯೊಟ, ಒನ್ ಸ್ಕೂಲ್ ಅಟ್ ಎ ಟೈಮ್, ಗೂಗಲ್, ಎಂಬಸಿ, ಮೈಕ್ರೋಸಾಫ್ಟ್ ಸೇರಿದಂತೆ 80ಕ್ಕೂ ಹೆಚ್ಚು ಖಾಸಗಿ ಕಂಪನಿಗಳು, ಎನ್‌ಜಿಒಗಳ ಪ್ರತಿನಿಧಿಗಳು ಭಾಗವಹಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸುವ ಭರವಸೆ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟಉತ್ತಮಗೊಳಿಸುವುದು, ಟಿಜಿಟಲ್ ಶಿಕ್ಷಣ ಒದಗಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಿ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ