
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಿಂದಿನ ಆಯುಕ್ತ ಡಿ.ಬಿ.ನಟೇಶ್ ಅವರಿಗೆ ಮುಂಬಡ್ತಿ ನೀಡಲು ಕೋಟ್ಯಂತರ ರುಪಾಯಿ ಪಡೆದಿರುವ ಆರೋಪಕ್ಕೆ ಪೂರಕವಾಗಿ ಮೈಸೂರಿನ ಸ್ನೇಹಮಹಿ ಕೃಷ್ಣ ಅವರು ಯಾವುದೇ ದಾಖಲೆ ಸಲ್ಲಿಸಿಲ್ಲ. ಆಧಾರವಿಲ್ಲದ ಸುಳ್ಳು ಮತ್ತು ಕ್ಷುಲ್ಲಕ ಆರೋಪ ಮಾಡುವ ಮೂಲಕ ಅಧಿಕಾರಿಗಳ ಮಾನ ಹಾನಿ ಮಾಡಿದ್ದು, ಈ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉತ್ತರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ನಿಯಮ ಉಲ್ಲಂಘಿಸಿ 14 ನಿವೇಶನ ನೀಡಿಕೆಯಲ್ಲಿ ಅಕ್ರಮ ಲಾಭ ಮಾಡಿಕೊಟ್ಟ ಆರೋಪದ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಡಿ.ಬಿ. ನಟೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಮುಂಬಡ್ತಿ ನೀಡಿರುವುದಕ್ಕೆ ಆಕ್ಷೇಪಿಸಿ, ಸ್ಪಷ್ಟೀಕರಣ ಹಾಗೂ ದೃಢೀಕೃತ ದಾಖಲೆ ನೀಡುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಪರಿಶೀಲಿಸಿ ಮುಖ್ಯಕಾರ್ಯದರ್ಶಿಗಳು ಸುದೀರ್ಘ ಉತ್ತರ ನೀಡಿದ್ದಾರೆ.
ಪ್ರಮುಖವಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 1957ರ ನಿಯಮ 10 ಅಡಿ ಪ್ರಸ್ತಾಪಿಸಿರುವ ಯಾವುದೇ ಕಾರಣಗಳು ಕಂಡು ಬಾರದ ಕಾರಣ ಡಿ.ಬಿ.ನಟೇಶ್ ಅವರನ್ನು ಅಮಾನತುಗೊಳಿಸಿಲ್ಲ. ನಿಯಮಾವಳಿ ಪ್ರಕಾರ ಅವರಿಗೆ ಮುಂಬಡ್ತಿ ನೀಡಲಾಗಿದೆ. ಅಲ್ಲದೆ, ನಟೇಶ್ ಅವರ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಪೂರ್ವಾನುಮತಿ ನೀಡಿ ಆದೇಶಿಸಲಾಗಿದೆ. ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗುತ್ತಿದೆ ಎಂದು ಶಾಲಿನಿ ರಜನೀಶ್ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿ.ಬಿ.ನಟೇಶ್ ಅವರಿಂದ ಕೋಟ್ಯಂತರ ರು. ಪಡೆದು ಸರ್ಕಾರ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಿದ್ದೀರಿ ಎಂಬ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಧಾರ ಒದಗಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಿನಿ ರಜನೀಶ್ ಉತ್ತರದಲ್ಲಿ ವಿವರಿಸಿದ್ದಾರೆ.
ಬೆಂಗಳೂರು: ಮುಡಾ ಹಗರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ‘ಬಿ’ ರಿಪೋರ್ಟ್ ಸಲ್ಲಿಸಲು ಲೋಕಾಯುಕ್ತ ತನಿಖಾಧಿಕಾರಿಗಳು ಲಂಚ ಪಡೆದ ಗಂಭೀರ ಆರೋಪ ಕೇಳಿ ಬಂದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಈ ಆರೋಪ ಮಾಡಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪರ ವಿಶೇಷ ಅಭಿಯೋಜಕರು ಸಮಯ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ದೂರುದಾರ ಸ್ನೇಹಮಯಿ ಕೃಷ್ಣ ಅವರು, ದೂರು ಅರ್ಜಿ ಜೊತೆಗೆ ತನಿಖಾಧಿಕಾರಿಗಳು ಲಂಚ ಪಡೆದಿರುವ ಬಗ್ಗೆ ಕೆಲ ದಾಖಲೆಗಳು ಹಾಗೂ ಸಿ.ಡಿ.ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದೇ ವೇಳೆ ಮುಡಾ ಹಗರಣ ಸಂಬಂಧ ಅಂತಿಮ ತನಿಖಾ ವರದಿಯನ್ನು ಜ.20 ಅಥವಾ ಅದಕ್ಕೂ ಮೊದಲು ಸಲ್ಲಿಸುವಂತೆ ನ್ಯಾಯಾಯಲವು ಲೋಕಾಯುಕ್ತ ತನಿಖಾಧಿಕಾರಿಗೆ ಸೂಚಿಸಿತು.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರಿಂದ 4.35 ಕೋಟಿ ರು. ಲಂಚ ಪಡೆದು ನಾಲ್ವರು ಆರೋಪಿಗಳ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ನಟೇಶ್ ಅವರ ವಿರುದ್ಧ ಲೋಕಾಯುಕ್ತ ತನಿಖಾಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸದೆ ಆತನ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ಮೈಸೂರಿನ ಸ್ಪೋರ್ಟ್ಸ್ ಕ್ಲಬ್‌ವೊಂದರಲ್ಲಿ ನಟೇಶ್ ಅವರು ಲೋಕಾಯುಕ್ತ ಅಧಿಕಾರಿಗೆ ಲಂಚ ನೀಡಿರುವ ಮಾಹಿತಿ ಇದೆ. 4.35 ಕೋಟಿ ರು. ಲಂಚ ನೀಡಿರುವ ಬಗ್ಗೆ ನಟೇಶ್ ಅವರ ಕೈ ಬರಹದಲ್ಲಿ ಬರೆದಿರುವ ದಾಖಲೆ ಸಿಕ್ಕಿದೆ. ಈ ದಾಖಲೆ ಹಾಗೂ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಈ ಸಂಬಂಧ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಜ.20ಕ್ಕೆ ವಿಚಾರಣೆ ಮುಂದೂಡಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ