ಕೊಪ್ಪಳದಲ್ಲಿ ವಿಚಿತ್ರ ಕಾಯಿಲೆಗೆ 20ಕ್ಕೂ ಅಧಿಕ ರಾಸುಗಳ ಸಾವು: ರೈತರು ಕಂಗಾಲು

By Sathish Kumar KHFirst Published Nov 15, 2022, 4:45 PM IST
Highlights

ಕೊಪ್ಪಳದ ಕಾಮನೂರು, ದನಕದೊಡ್ಡಿ, ಕೆರಳ್ಳಿ ಭಾಗದಲ್ಲಿ ವಿಚಿತ್ರ ಕಾಯಿಲೆಯಿಂದ ಹಲವು ಜಾನುವಾರುಗಳು ಸಾವನ್ನಪ್ಪುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈಗ ರೋಗದಿಂದ ಸಾವನ್ನಪ್ಪಿದ ದೊಡ್ಡ ರಾಸುಗಳನ್ನು ಜಿಲ್ಲಾಡಳಿತ ಭವನದ ಮುಂದಿಟ್ಟು ಸೂಕ್ತ ಚಿಕಿತ್ಸೆ ಮತ್ತು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.

ವರದಿ :ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ನ.15): ಜಾನುವಾರುಗಳಿಗೆ ತಗುಲಿದ್ದ ಚರ್ಮಗಂಟು ರೋಗದಿಂದ ಕಂಗಾಲಾಗಿದ್ದ ಕೊಪ್ಪಳ ಜಿಲ್ಲೆಯ ರೈತರಿಗೆ ಈಗ ಮತ್ತೊಂದು ಆತಂಕ ಎದುರಿಸುವಂತಾಗಿದೆ.  ಇಲ್ಲಿನ ಕೆಲವು ಗ್ರಾಮಗಳಲ್ಲಿ ನಿಗೂಢ ಕಾಯಿಲೆಯಿಂದ ಕೆಲವೇ ಗಂಟೆಯಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ನಿಗೂಢ ರೋಗದಿಂದ ಸತ್ತ ಜಾನುವಾರಗಳನ್ನು ರೈತರು ಜಿಲ್ಲಾಡಳಿತ ಭವನದ ಮುಂದೆ ತಂದು ಹಾಕಿ ಕ್ರಮ ಕೈಗೊಳ್ಳದ ಅಧಿಕಾರಿಗಳ ಆಕ್ರೋಶ ವ್ಯಕ್ತಪಡಿಸಿದರು. 

ಕೊಪ್ಪಳ ಜಿಲ್ಲೆ ಈವರೆಗೆ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಜಿಲ್ಲೆಯ ಜನರು ಜೀವನೋಪಾಯಕ್ಕಾಗಿ ಹಲವಾರು ಉದ್ಯೋಗಗಳನ್ನು ಕೈಗೊಳ್ಳುತ್ತಾರೆ.‌ ಅದರಲ್ಲಿ ಪಶುಪಾಲನೆ (Animal husbandry)ಸಹ ಒಂದಾಗಿದೆ. ಆದರೆ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ (Cattle Farming) ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.‌ ಇದಕ್ಕೆ ಕಾರಣ ವಿಚಿತ್ರ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿರುವುದು. ಹಲವು ವರ್ಷಗಳಿಂದ ಮನೆಯ ಮಕ್ಕಳಂತೆಯೇ ಸಾಕಿದ ಎತ್ತುಗಳು, ಹೋರಿಗಳು, ಆಕಳು ಮತ್ತು ಕರುಗಳು ಸಾವನ್ನಪ್ಪುತ್ತಿದ್ದು, ಕೃಷಿ ಕಾರ್ಯ ಮತ್ತು ಹೈನುಗಾರಿಕೆಗೆ ಮಾಡುವವರು ಪರದಾಡುತ್ತಿದ್ದಾರೆ.

ಚರ್ಮ​ಗಂಟು ರೋಗಕ್ಕೆ ಜಾನು​ವಾ​ರು​ಗಳು ಬಲಿ..!

ಸತ್ತ ಜಾನುವಾರುಗಳನ್ನು ಡಿಸಿ ಕಚೇರಿಗೆ ತಂದು ಆಕ್ರೋಶ: ಈಗಾಗಲೇ ಚರ್ಮಗಂಟು (Lumpy Skin) ರೋಗದ ಕಾರಣದಿಂದ ನೂರಾರು ಜಾನುವಾರುಗಳು ಸಾವನ್ನಪ್ಪಿದ್ದು, ಪಶುಪಾಲಕರು ಮತ್ತು ರೈತರು ಕಂಗಾಲಾಗಿದ್ದಾರೆ. ಅದರ ನೋವು ಮಾಸುವ ಮುನ್ನವೇ ಕೊಪ್ಪಳ ತಾಲೂಕಿನ ಕಾಮನೂರು (Kamanuru), ದನಕದೊಡ್ಡಿ (Danakadoddi), ಕೆರಳ್ಳಿ (Keralli)ಭಾಗದಲ್ಲಿ ವಿಚಿತ್ರ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ. ಕಾಮನೂರು ಭಾಗದಲ್ಲಿ ಕಳೆದ 15 ದಿನಗಳಲ್ಲಿ ಈ ಕಾಯಿಲೆಯಿಂದ 20ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ. ಈ ಬಗ್ಗೆ ಪಶು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದರೂ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಾಲು ಸಾಲಾಗಿ ಜಾನುವಾರು ಸಾವನ್ನಪ್ಪುತ್ತಿದ್ದರೂ ಕನಿಷ್ಟ ರೋಗ ಪತ್ತೆಯನ್ನು ಮಾಡಿ ಸಂಬಂಧಿಸಿದ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಸಾವನ್ನಪ್ಪಿದ ಮೂರು ಹಸುಗಳ ಕಳೇಬರವನ್ನು ಗೂಡ್ಸ್ ಆಟೋಗಳಲ್ಲಿ ತಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದಿಟ್ಟು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ವಿಚಿತ್ರ ರೋಗದ ಲಕ್ಷಣಗಳು: ಈಗ ಸದ್ಯ ಸಾವನ್ನಪ್ಪುತ್ತಿರುವ ಜಾನುವಾರುಗಳಿಗೆ ದೀರ್ಘ ಕಾಲದ ಅನಾರೋಗ್ಯ (Illness) ಇರುವುದಿಲ್ಲ.‌ ಬದಲಾಗಿ ಚೆನ್ನಾಗಿರುವ ಜಾನುವಾರುಗಳು ಏಕಾಏಕಿ ತೀವ್ರ ಆಯಾಸಗೊಂಡು (Tiredness) ಬೀಳುತ್ತವೆ. ನಂತರ ಹೊಟ್ಟೆ ಉಬ್ಬಿ ಒಂದೆರಡು ಗಂಟೆಗಳಲ್ಲಿ ಜೀವ ಬಿಡುತ್ತಿವೆ ಎಂದು ರೈತರು ಹೇಳಿದ್ದಾರೆ. ಆದರೆ, ಇದು ಯಾವ ಕಾಯಿಲೆ (Disease) ಎಂಬುದು ರೈತರಿಗೆ ತಿಳಿಯುತ್ತಿಲ್ಲ. ಆದ್ದರಿಂದ ಸ್ಥಳೀಯವಾಗಿ ನಾಟಿ ಔಷಧ (Medicine)ಕೊಟ್ಟು ಜಾನುವಾರುಗಳನ್ನು ಬದುಕಿಸಲು ಆಗುತ್ತಿಲ್ಲ. ಹಸುಗಳು ಸಾಯುವುದನ್ನು ನೋಡುತ್ತಾ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದು ರೈತರು (Farmer) ಅಳಲು ತೋಡಿಕೊಂಡಿದ್ದಾರೆ. ನಮ್ಮ ರಾಸುಗಳು ಸಾವನ್ನಪ್ಪಲು ಸರ್ಕಾರದ ಅಧಿಕಾರಿಗಳೇ ನೇರ ಕಾರಣವಾಗಿದ್ದು, ಜಾನುವಾರು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ (compensation) ನೀಡುವವರೆಗೂ ಡಿಸಿ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Bidar: ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಸಚಿವ ಪ್ರಭು ಚವ್ಹಾಣ್ ಚಾಲನೆ

ಪಶು ವೈದ್ಯರ ವಿರುದ್ಧ ಆಕ್ರೋಶ: ಸತ್ತ ಜಾನುವಾರುಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶುಸಂಗೋಪನೆ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಜಾನುವಾರುಗಳಿಗೆ ಚಿಕಿತ್ಸೆ (Treatment) ನೀಡಲು ಎಲ್ಲದ್ದಕ್ಕೂ ಪಶು ಆಸ್ಪತ್ರೆಯಲ್ಲಿ ಹಣ (Amount) ಕೇಳುತ್ತಾರೆ. ಚಿಕಿತ್ಸೆ ನೀಡಿದ್ದರೆ ಜಾನುವಾರುಗಳು ಸಾಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾನುವಾರುಗಳು ಸಾವನ್ನಪ್ಪಲು ಕಾರಣವೇನು ಎಂಬುದು ಈಗ ಪ್ರಶ್ನೆಯಾಗಿದ್ದು ನಮಗೆ ಆತಂಕವಾಗಿದೆ. ಕೂಡಲೇ ರೋಗ ಪತ್ತೆಹಚ್ಚಿ ಚಿಕಿತ್ಸೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿಗಳು ಈಗ ಸತ್ತಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯ ವರದಿ (Postmortem report) ಬಂದಕ ಜಾನುವಾರುಗಳ ಈ ನಿಗೂಢ ಕಾಯಿಲೆ ಬಗ್ಗೆ ಗೊತ್ತಾಗಲಿದೆ ಎಂದು ಸಮಾಧಾನ ಮಾಡಿದರು. 

click me!