ವರದಿ : ಎನ್.ಎಸ್.ರಾಕೇಶ್
ಬೆಂಗಳೂರು (ಮೇ.17): ‘ಪಿಎಂ ಕೇರ್ಸ್’ ನಿಧಿಯಿಂದ ರಾಜ್ಯಕ್ಕೆ 2,800ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಬಂದಿದ್ದರೂ ತಂತ್ರಜ್ಞರ ಕೊರತೆ ಮತ್ತು ಸರ್ಕಾರದ ಉದಾಸೀನ ಧೋರಣೆಯಿಂದ ಕೋವಿಡ್ ವಿಪತ್ತಿನ ಸಂದರ್ಭದಲ್ಲೂ ಬಹುತೇಕ ವೆಂಟಿಲೇಟರ್‌ಗಳು ಬಳಕೆ ಆಗುತ್ತಿಲ್ಲ. ವಿಪರ್ಯಾಸವೆಂದರೆ ಸರ್ಕಾರದ ಬಳಿಯೂ ಎಷ್ಟುವೆಂಟಿಲೇಟರ್‌ಗಳು ಬಳಕೆ ಆಗುತ್ತಿವೆ ಎಂಬ ಮಾಹಿತಿ ಇಲ್ಲ. ಇದೀಗ ಪ್ರಧಾನಿ ಅವರು ವೆಂಟಿಲೇಟರ್‌ಗಳ ಆಡಿಟ್ ಮಾಡುವಂತೆ ಸೂಚಿಸಿದ ಬಳಿಕ ವೆಂಟಿಲೇಟರ್‌ಗಳ ಸ್ಥಿತಿಗತಿಗಳ ಬಗ್ಗೆ ಆಡಿಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
undefined
ರಾಜ್ಯದಲ್ಲಿ ಕೋವಿಡ್‌ನ ಮೊದಲ ಅಲೆ ಇದ್ದ ಸಂದರ್ಭದಲ್ಲಿ 2,025 ವೆಂಟಿಲೇಟರ್‌ಗಳು ಕೇಂದ್ರ ಸರ್ಕಾರದಿಂದ ಬಂದಿದ್ದವು. ಆ ಬಳಿಕ ಮತ್ತೆ 800ಕ್ಕೂ ಹೆಚ್ಚು ವೆಂಟಿಲೇಟರ್ ರಾಜ್ಯದ ಕೈ ಸೇರಿದ್ದವು. ಒಟ್ಟಾರೆ ರಾಜ್ಯಕ್ಕೆ 2,800ಕ್ಕೂ ಹೆಚ್ಚು ವೆಂಟಿಲೇಟರ್ ಬಂದಿವೆ. ಕೋವಿಡ್‌ನ ಎರಡನೇ ಅಲೆ ಪರಾಕಾಷ್ಠೆ ತಲುಪಿದ್ದರೂ, ರಾಜ್ಯದಲ್ಲಿ ವೆಂಟಿಲೇಟರ್‌ಗೆ ಹಾಹಾಕಾರ ಸೃಷ್ಟಿಆಗಿದ್ದರೂ ಅವುಗಳ ಬಳಕೆ ಆಗಿಲ್ಲ.
ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್ ಬಳಕೆ, ಆಡಿಟ್‌ಗೆ ಆದೇಶ: ರಾಜ್ಯಗಳಿಗೆ ಢವಢವ! ..
ರಾಜ್ಯಕ್ಕೆ ಬಂದಿರುವ ಜೀವರಕ್ಷಕ ವೆಂಟಿಲೇಟರ್‌ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಟ್ಟಿದೆ. ಅಲ್ಲಿಂದ ಅದು ಜಿಲ್ಲಾಸ್ಪತ್ರೆಗಳಿಗೆ, ತಾಲೂಕು ಆಸ್ಪತ್ರೆಗಳಿಗೆ ತಲುಪಿದೆಯೇ ಇಲ್ಲವೇ, ಬಳಕೆ ಆಗುತ್ತಿದೆಯೇ, ಬಳಸಲು ಏನು ಸಮಸ್ಯೆ ಇದೆ ಎಂಬ ಬಗ್ಗೆ ಪರಿಶೀಲನೆ ಆಗಿರಲಿಲ್ಲ. ವಾರದ ಹಿಂದೆಯಷ್ಟೇ ಆರೋಗ್ಯ ಸಚಿವ ಡಾ
ಕೆ.ಸುಧಾಕರ್ ಅವರು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 6 ವೆಂಟಿಲೇಟರ್ ಇರಬೇಕು ಎಂದು ಸೂಚನೆ ನೀಡಿದ ಬಳಿಕ ಈ ವೆಂಟಿಲೇಟರ್‌ಗಳ ಧೂಳು ಕೊಡವುವ ಪ್ರಯತ್ನ ನಡೆದಿದೆ.
ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ವೆಂಟಿಲೇಟರ್‌ಗಳ ನಿರ್ವಹಣೆ, ಅಳವಡಿಕೆಗೆ ಸೂಕ್ತ ಸಿಬ್ಬಂದಿಗಳಿಲ್ಲ. ಅದೇ ರೀತಿ ಆಸ್ಪತ್ರೆಗಳಲ್ಲಿಯೂ ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಲ್ಲ. ಆದ್ದರಿಂದ ಆಸ್ಪತ್ರೆಗಳು ವೆಂಟಿಲೇಟರ್ ಅಳವಡಿಸಿಕೊಳ್ಳಲು ಹಿಂಜರಿಯುತ್ತಿವೆ.
ಕೇಂದ್ರದಿಂದ ಬಂದ ಶೇ.80ರಷ್ಟು ವೆಂಟಿಲೇಟರ್ ಧೂಳು ಹಿಡಿಯುತ್ತಿವೆ, ಕರ್ನಾಟಕವೇ ಟಾಪ್! ...
ವೆಂಟಿಲೇಟರ್‌ಗಳನ್ನು ಅಳವಡಿಸಲು ಮತ್ತು ನಿರ್ವಹಿಸಲು ನುರಿತ ತಂತ್ರಜ್ಞ ಇರಬೇಕು. ಇವರಿಗೆ ಇಂಟೆನ್ಸಿವಿಸ್ಟ್ ಎಂದು ಕರೆಯಲಾಗುತ್ತದೆ. ವಿವಿಧ ವೆಂಟಿಲೇಟರ್‌ಗಳ ತಂತ್ರಜ್ಞಾನ ಕೂಡ ಬೇರೆ ಇರುತ್ತದೆ. ಸಿಬ್ಬಂದಿಗೆ ಕಂಪನಿಗಳೇ ನಿರ್ವಹಣೆಯ ಬಗ್ಗೆ ತರಬೇತಿ ನೀಡುತ್ತವೆ. ಹಾಗೆಯೇ ರಾಜ್ಯ ಸರ್ಕಾರವೂ ಕಾರ್ಯಾಗಾರಗಳನ್ನು ರೂಪಿಸಿ ತರಬೇತಿ ನೀಡಬಹುದಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಉದಾಸೀನ ಧೋರಣೆ ತಾಳಿತು ಎಂಬ ದೂರುಗಳಿವೆ.
ಪಿಎಂ ಕೇರ್ಸ್ ಅಡಿಯಲ್ಲಿ ಹಾವೇರಿ ಜಿಲ್ಲೆಗೆ 20, ಬೆಳಗಾವಿಗೆ 54, ಬಳ್ಳಾರಿಗೆ 40, ಕೊಪ್ಪಳ 60, ವಿಜಯಪುರ 20, ಉಡುಪಿ 10, ಗದಗ 20, ಚಿತ್ರದುರ್ಗ 30, ಬಾಗಲಕೋಟೆ 30, ರಾಮನಗರ 30, ಚಿಕ್ಕಮಗಳೂರು 15, ರಾಯಚೂರು 40, ಬೀದರ್ 25, ಚಿತ್ರದುರ್ಗ 30, ದಾವಣಗೆರೆ 45, ಕೊಡಗು ಜಿಲ್ಲೆಗೆ 25 ವೆಂಟಿಲೇಟರ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
300ಕ್ಕೂ ಹೆಚ್ಚು ವೆಂಟಿಲೇಟರ್ಸ್ ನಿಷ್ಕ್ರೀಯ?
ಬೆಂಗಳೂರು: ಪಿಎಂ ಕೇರ್ಸ್ ಮಾತ್ರವಲ್ಲದೆ, ಬೇರೆ ಬೇರೆ ಸಂದರ್ಭಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಅನುದಾನಗಳಡಿಯಲ್ಲಿ ಪೂರೈಕೆ ಮಾಡಲಾಗಿರುವ ವೆಂಟಿಲೇಟರ್‌ಗಳೂ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಇವೆ. ಇವುಗಳಲ್ಲಿ ಒಟ್ಟಾರೆ 300ಕ್ಕೂ ಅಧಿಕ ವೆಂಟಿಲೇಟರ್‌ಗಳು ಬಳಕೆಯಾಗದೆ ಗೋದಾಮು ಸೇರಿವೆ. ದಾವಣಗೆರೆಯಲ್ಲಿ 43, ಚಿತ್ರದುರ್ಗ 25, ಕೊಪ್ಪಳ 18, ಬಾಗಲಕೋಟೆ 13, ತುಮಕೂರು 27, ಕಲಬುರಗಿ 25, ಚಿಕ್ಕಮಗಳೂರು 36, ಚಿಕ್ಕಬಳ್ಳಾಪುರ 30, ಬೀದರ್ 30, ಗದಗ 25, ಕಲಬುರಗಿ 25, ರಾಮನಗರ 10, ಹಾಸನದಲ್ಲಿ ಕನಿಷ್ಠ 7 ವೆಂಟಿಲೇಟರ್‌ಗಳು ಉಪಯೋಗಿಸದೆ ಇವೆ. ಉತ್ತರ ಕನ್ನಡದಲ್ಲಿ 60 ವೆಂಟಿಲೇಟರ್ ಅಳವಡಿಕೆಯಾಗಿದ್ದರೂ, ಹೆಚ್ಚಿನವು ತಜ್ಞರ ಕೊರತೆಯಿಂದಾಗಿ ಬಳಕೆಯಾಗುತ್ತಿಲ್ಲ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona