ಚಂಡಮಾರುತದಿಂದ ಕರ್ನಾಟಕ ಪಾರು: ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ!

By Kannadaprabha NewsFirst Published May 17, 2021, 7:29 AM IST
Highlights

* ದ.ಕ. ಉಡುಪಿಯಲ್ಲಿ ಮಳೆ ಇಳಿಕೆ

* ಉ.ಕ.ದಲ್ಲಷ್ಟೇ ನಿರಂತರ ಮಳೆ 

* ಕರಾವಳಿಯಲ್ಲಿ ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ ಚಂಡಮಾರುತ

ಬೆಂಗಳೂರು(ಮೇ.17): ರಾಜ್ಯದ ಕರಾವಳಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಪ್ರಬಲವಾಗಿದ್ದ ತೌಕ್ಟೆಚಂಡಮಾರುತದ ಪ್ರಭಾವ ಭಾನುವಾರ ಕಡಿಮೆಯಾಗಿ ಗೋವಾದ ಕಡೆಗೆ ಮುಖ ಮಾಡುವುದರೊಂದಿಗೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಕ್ಕೆ ಎದುರಾಗಿದ್ದ ಬಹುದೊಡ್ಡ ಆತಂಕ ದೂರವಾಗಿದೆ. ಆದರೂ ಮಳೆ ಸಂಬಂಧಿ ಘಟನೆಗಳಲ್ಲಿ ಮೂವರು ಬಲಿಯಾಗಿದ್ದಾರೆ.

ಶನಿವಾರ ಇಡೀ ದಿನ ಕರಾವಳಿಯಲ್ಲಿ ಸುರಿದ ಮಳೆ ಭಾನುವಾರ ವೇಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಳಿಮುಖವಾಗಿದ್ದು ಉತ್ತರ ಕನ್ನಡದಲ್ಲಿ ಮಾತ್ರ ಮುಂದುವರಿದಿರುವುದರಿಂದ ನೂರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿರುವುದರಿಂದ ತೀರ ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು 150ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ.

ತೌಕ್ಟೆ ಚಂಡಮಾರುತ ಹಿನ್ನೆಲೆ ಮುಂಬೈನಲ್ಲಿ ಆರೆಂಜ್ ಅಲರ್ಟ್, ಲಸಿಕೆ ಅಭಿಯಾನಕ್ಕೆ ಬ್ರೇಕ್!

ನಾಲ್ವರು ಸಾವು:

ಕರಾವಳಿಯಲ್ಲಿ ಮಳೆ ಉಗ್ರರೂಪ ತೋರಿದ ಹಿನ್ನೆಲೆಯಲ್ಲಿ 3 ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಶನಿವಾರ ಸುರಿದ ಸತತ ಮಳೆಯಿಂದಾಗಿ ಖಾನಾಪುರ ತಾಲೂಕಿನಲ್ಲಿ ಗೋಡೆ ಕುಸಿದು ರದೊಡ್ಡವ್ವ ರುದ್ರಪ್ಪ ಪಟ್ಟೇದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೇದ (3) ಮೃತಪಟ್ಟವರು. ಇಲ್ಲಿ ರೈತರು ಮಾರಾಟಕ್ಕೆ ತಂದಿದ್ದ ಸಾಕಷ್ಟುತರಕಾರಿ ಕೂಡ ಮಳೆ ನೀರಿಗೆ ನಾಶವಾಗಿದ್ದು ಹಲವಾರು ಕಡೆ ವಿದ್ಯುತ್‌ ಕಂಬಗಳು, ಶಾಲೆ ಚಾವಣಿ, ಮರಗಳು ಧರೆಗೆ ಉರುಳಿಬಿದ್ದಿವೆ.

ಇದೇ ವೇಳೆ, ಶನಿವಾರ ನವಮಂಗಳೂರು ಬಂದರಿಂದ 16 ನಾಟಿಕಲ್‌ ಮೈಲಿ ದೂರದಲ್ಲಿ ಮುಳುಗಿದ್ದ ಟಗ್‌ನಿಂದ ನಾಪತ್ತೆಯಾಗಿದ್ದವರಲ್ಲಿ ಭಾನುವಾರವೂ 1 ಮೃತದೇಹ ಪತ್ತೆಯಾಗಿದೆ.

ಇನ್ನುಳಿದಂತೆ ಚಂಡಮಾರುತದ ಪ್ರಭಾವದಿಂದ ಕೊಡಗು, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾವೇರಿ, ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಭಾರೀ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ, ಈ ಜಿಲ್ಲೆಗಳಲ್ಲಿ ಅಲರ್ಟ್

ಕತ್ತಲಲ್ಲಿ ಉತ್ತರ ಕನ್ನಡ:

ತೌಕ್ಟೆಚಂಡಮಾರುತದ ದಾಳಿಯಿಂದ ಉತ್ತರ ಕನ್ನಡದ ಕರಾವಳಿ ಭಾಗ ತಲ್ಲಣಗೊಂಡಿದ್ದು ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಮಟಾದ 40 ಜನರನ್ನು ಶಾಲೆಯೊಂದರ ಪರಿಹಾರ ಕೇಂದ್ರಕ್ಕೆ ಹಾಗೂ ಹೊನ್ನಾವರದ ಪಾವಿನಕುರ್ವೆಯ 60 ಜನರನ್ನು ಪಾವಿನಕುರ್ವೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಮಟಾದಲ್ಲಿ ಅಘನಾಶಿನಿ ನದಿಯ ಕೋಡಿ ಒಡೆದು ವನ್ನಳ್ಳಿಯ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಕೆಲವೆಡೆ ಭಾರಿ ಸಮುದ್ರ ಕೊರೆತ ಉಂಟಾಗಿರುವುದರಿಂದ ಮರ ಗಿಡಗಳು, ರೆಂಬೆಕೊಂಬೆಗಳು ಎಲ್ಲೆಂದರಲ್ಲಿ ಮುರಿದು ಬಿದ್ದಿದೆ. ಕೆಲವೆಡೆ ರಸ್ತೆ ಸಂಪರ್ಕವೂ ಕಡಿತಗೊಂಡಿದ್ದು ವಿದ್ಯುತ್‌ ಕಂಬಗಳು, ಟಿಸಿಗಳು ಸಹ ಬುಡಮೇಲಾಗಿವೆ. ಇದರಿಂದ ಜಿಲ್ಲೆಯ ಬಹುತೇಕ ಉತ್ತರ ಕನ್ನಡ ಕರಾವಳಿ ಶನಿವಾರದಿಂದ ಕತ್ತಲೆಯಲ್ಲಿದೆ. ಬಿರುಗಾಳಿ, ಮಳೆಯಿಂದ ಕಂಬಗಳನ್ನು ಬದಲಾಯಿಸಲೂ ಸಾಧ್ಯವಾಗುತ್ತಿಲ್ಲ.

ರಸ್ತೆ ಸಂಪರ್ಕ ಕಟ್‌, ಹಾನಿ:

ಕರಾವಳಿಯ ಉಳಿದೆರೆಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ಶನಿವಾರ ರಭಸವಾಗಿದ್ದ ಗಾಳಿ ಮಳೆ ಭಾನುವಾರದಂದು ಸಂಪೂರ್ಣ ಮಾಯವಾಗಿದ್ದರಿಂದ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಶನಿವಾರದ ಚಂಡಮಾರುತದ ಅವತಾರಕ್ಕೆ ಸಮುದ್ರದ ನೀರು ಉಕ್ಕೇರಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಉಳ್ಳಾಲ, ಪಣಂಬೂರು, ಸುರತ್ಕಲ್‌, ಸಸಿಹಿತ್ಲುಗಳಲ್ಲಿ ಬೀಚ್‌ಗಳ ಸಂಪರ್ಕ ರಸ್ತೆ ಕಡಿದುಕೊಂಡಿದೆ. ಸುರತ್ಕಲ್‌ ಬೀಚ್‌ ಸಮೀಪದ ಕಾರ್ಮಿಕ ಕಾಲನಿಗೆ ನೀರು ನುಗ್ಗಿದ್ದು, ಪ್ರವಾಹ ಅವರ ಜೀವನ ಹೊಸಕಿಹಾಕಿದೆ. ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ ಸುಮಾರು 200 ಮೀನುಗಾರಿಕಾ ಬೋಟ್‌ಗಳಿಗೆ ಪ್ರವಾಹದಿಂದ ಹಾನಿ ಉಂಟಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 2 ಮನೆಗಳು ಸಂಪೂರ್ಣ ಕುಸಿದಿದ್ದು 31ಕ್ಕೂ ಅಧಿಕ ಮನೆಗಳಿಗೆ ಹಾನಿಗಳಾಗಿವೆ. 14 ಮನೆ ಸಂಪೂರ್ಣ ಹಾನಿಯಾಗಿದೆ. 108 ಮನೆ ಭಾಗಶಃ ಹಾನಿಗೆ ಒಳಗಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!