*ರಾಜ್ಯದಲ್ಲಿ ‘ಸೆಮಿ ಲಾಕ್’ ವಿಸ್ತರಣೆ ಪಕ್ಕಾ
* ಗ್ರಾಮಗಳಲ್ಲಿ ಸೋಂಕು ಹೆಚ್ಚಳ
* 1 ವಾರ ವಿಸ್ತರಣೆಗೆ ಒಲವು
ಬೆಂಗಳೂರು(ಮೇ.17): ಕೋವಿಡ್ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಮಿ ಲಾಕ್‌ಡೌನ್ ಅವಧಿಯನ್ನು ರಾಜ್ಯ ಸರ್ಕಾರ ಒಂದು ವಾರ ವಿಸ್ತರಣೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ.
ಹಾಲಿ ಜಾರಿಯಲ್ಲಿರುವ ಸೆಮಿ ಲಾಕ್‌ಡೌನ್ ಈ ತಿಂಗಳ 24ರ ಬೆಳಗ್ಗೆ ಮುಗಿಯಬೇಕಿದೆ. ಆದರೆ, ಅದೇ ದಿನದಿಂದ ಜಾರಿಗೆ ಬರುವಂತೆ ಮತ್ತೆ ಒಂದು ವಾರ ಅಂದರೆ ತಿಂಗಳಾಂತ್ಯದವರೆಗೆ ಸೆಮಿ ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಒಲವು ತೋರಿದೆ. ಆದರೆ, ವಿಸ್ತರಣೆಯಾಗುವ ಒಂದು ವಾರದ ಸೆಮಿ ಲಾಕ್‌ಡೌನ್‌ನ ನಿಯಮಗಳು ಈಗಿರುವಂತೆಯೇ ಇರಲಿವೆಯೇ ಅಥವಾ ಒಂದಿಷ್ಟು ಬದಲಾವಣೆಯಾಗಲಿವೆಯೇ ಎಂಬುದನ್ನು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
DRDO ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್!
ಜನತಾ ಕರ್ಫ್ಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರ ಈ ತಿಂಗಳ 10ರಿಂದ ಜಾರಿಗೆ ಬರುವಂತೆ ಸೆಮಿ ಲಾಕ್‌ಡೌನ್ ವಿಧಿಸಿತ್ತು. ಅದಕ್ಕೂ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಹಿತಿ ನೀಡಲು ಆಗಮಿಸಿದ್ದ ತಜ್ಞರು ಕೋವಿಡ್ ನಿಯಂತ್ರಣಕ್ಕಾಗಿ ಕನಿಷ್ಠ ಮೂರು ವಾರಗಳ ಲಾಕ್‌ಡೌನ್ ವಿಧಿಸುವಂತೆ ಸಲಹೆ ನೀಡಿದ್ದರು. ಇಲ್ಲದಿದ್ದರೆ ಕೋವಿಡ್ ಅನಾಹುತ ಸೃಷ್ಟಿಸಿ ಅರಾಜಕತೆ ಉಂಟು ಮಾಡಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.
ಆ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟ ಸಚಿವರು ಪೂರ್ಣ ಲಾಕ್‌ಡೌನ್ ಬದಲು ಸೆಮಿ ಲಾಕ್‌ಡೌನ್ ಜಾರಿಗೊಳಿಸುವ ನಿರ್ಧಾರಕ್ಕೆ ಬಂದರು. ಜತೆಗೆ ಆರಂಭದಲ್ಲೇ ಮೂರು ವಾರಗಳ ಸೆಮಿ ಲಾಕ್‌ಡೌನ್ ಘೋಷಣೆ ಮಾಡುವ ಬದಲು ಎರಡು ವಾರದ ಪರಿಸ್ಥಿತಿ ನೋಡಿ ಮತ್ತೆ ಒಂದು ವಾರ ವಿಸ್ತರಿಸುವ ಬಗ್ಗೆಯೂ ಆಗಲೇ ಸಮಾಲೋಚನೆ ನಡೆಸಿದ್ದರು.
ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಸಂಜೆ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಲಿದ್ದಾರೆ. ಬಳಿಕ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ 17 ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆಯಲಿದ್ದಾರೆ. ಈ ಎರಡೂ ಸಭೆಗಳ ಬಳಿಕ ಸಚಿವ ಸಂಪುಟ ಸಭೆ ಅಥವಾ ಸಚಿವರ ಸಭೆ ನಡೆಸಿ ಮುಖ್ಯಮಂತ್ರಿಗಳು ಮತ್ತೊಂದು ವಾರ ಸೆಮಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona