1.72 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು, 107 ಕೋಟಿ ರು. ಉಳಿತಾಯ

By Kannadaprabha News  |  First Published Sep 10, 2021, 8:11 AM IST
  • ತೆರಿಗೆ ಪಾವತಿದಾರರಾಗಿದ್ದರೂ ಸುಳ್ಳು ದಾಖಲೆ ಸಲ್ಲಿಸಿ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿ 
  • 1.72 ಲಕ್ಷ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ರದ್ದುಪಡಿಸಿ, 7.40 ಲಕ್ಷ ಫಲಾನುಭವಿಗಳನ್ನು ಅನ್ನಭಾಗ್ಯ ಯೋಜನೆಯಿಂದ ಕೈಬಿಟ್ಟಿದೆ.

ವರದಿ :  ಸಂಪತ್‌ ತರೀಕೆರೆ

 ಬೆಂಗಳೂರು (ಸೆ.10):  ತೆರಿಗೆ ಪಾವತಿದಾರರಾಗಿದ್ದರೂ ಸುಳ್ಳು ದಾಖಲೆ ಸಲ್ಲಿಸಿ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿ ಪಡೆದಿದ್ದ 1.72 ಲಕ್ಷ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ರದ್ದುಪಡಿಸಿ, 7.40 ಲಕ್ಷ ಫಲಾನುಭವಿಗಳನ್ನು ಅನ್ನಭಾಗ್ಯ ಯೋಜನೆಯಿಂದ ಕೈಬಿಟ್ಟಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 107 ಕೋಟಿ ರು. ಉಳಿತಾಯವಾಗಲಿದೆ.

Tap to resize

Latest Videos

ಆಹಾರ ಇಲಾಖೆ ಮಾಹಿತಿಯಂತೆ, 2021ರ ಜ.1ರಿಂದ ಸೆ.1ರವರೆಗೆ 3080 ಅಂತ್ಯೋದಯ ಅನ್ನ ಪಡಿತರ ಚೀಟಿ ಮತ್ತು 1,69,400 ಬಿಪಿಎಲ್‌ ಕಾರ್ಡುಗಳು ಸೇರಿದಂತೆ ಒಟ್ಟು 1,72,480 ಪಡಿತರ ಚೀಟಿ ರದ್ದು ಮಾಡಲಾಗಿದೆ. ಇದರಿಂದ ಇದುವರೆಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದ 7,40,374 ಮಂದಿಯನ್ನು ಈ ಯೋಜನೆಯಿಂದ ಕೈಬಿಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್‌ ಅವರು  ಮಾಹಿತಿ ನೀಡಿದ್ದಾರೆ.

ಫ್ರಿಡ್ಜ್ ಇದ್ರೆ ರದ್ದಾಗುತ್ತಾ BPL ಕಾರ್ಡ್?ವಾಹನಕ್ಕೆ ತಬಲಾ, ಪಿಟೀಲು ಹಾರ್ನ್;ಸೆ.4ರ ಟಾಪ್ 10 ಸುದ್ದಿ!

200 ಕೋಟಿ ರು. ಹೊರೆ:  ಕೇಂದ್ರ ಸರ್ಕಾರ ಯೂನಿಟ್‌ ಆಧಾರದಲ್ಲಿ ಆಹಾರ ಧಾನ್ಯಗಳನ್ನು 4.04 ಕೋಟಿ ಜನರಿಗೆ ಮಾತ್ರ ಕೊಡುತ್ತಿದೆ. ಆದರೆ ರಾಜ್ಯ ಸರ್ಕಾರ ಬಿಪಿಎಲ್‌, ಅಂತ್ಯೋದಯ ಫಲಾನುಭವಿಗಳಾದ 4.18 ಕೋಟಿ ಜನಸಂಖ್ಯೆಗೆ ಆಹಾರ ಧಾನ್ಯ ಹಂಚಿಕೆ ಮಾಡುತ್ತಿದೆ. ಅಂದರೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದಕ್ಕಿಂತ 14 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಸ್ವಂತ ಖರ್ಚಿನಲ್ಲಿ ಪಡಿತರ ವಿತರಣೆ ಮಾಡುತ್ತಿದೆ. ಅದು ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದ್ದು ಹೆಚ್ಚುವರಿಯಾಗಿ ಸುಳ್ಳು ಮಾಹಿತಿ ನೀಡಿ ಪಡೆದಿರುವ 14 ಲಕ್ಷ ಜನರನ್ನು ಕಡಿಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಹೆಚ್ಚುವರಿ ಫಲಾನುಭವಿಗಳಿಗೆ ಪಡಿತರ ಆಹಾರ ಧಾನ್ಯ ಖರೀದಿ ಮಾಡಿ ವಿತರಿಸಲು ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 200 ಕೋಟಿ ರು.ಗಳಿಗೂ ಅಧಿಕ ಹೊರೆ ಬೀಳುತ್ತಿದೆ.

ಉಳಿತಾಯ ಹೇಗೆ?

ಬಿಪಿಎಲ್‌ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ತಿಂಗಳಿಗೆ 5 ಕೆ.ಜಿ.ಯಂತೆ ವರ್ಷಕ್ಕೆ 60 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿಯ ವಾಸ್ತವ ಬೆಲೆ 24 ರು.ಗಳಿದ್ದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಪ್ರತಿ ಕೆಜಿ ಅಕ್ಕಿಯನ್ನು 3 ರು.ನಂತೆ ಖರೀದಿ ಮಾಡುತ್ತಿದೆ. ಪ್ರಸ್ತುತ ಆಹಾರ ಇಲಾಖೆ 7,40,374 ಫಲಾನುಭವಿಗಳನ್ನು ಕಡಿತ ಮಾಡಿದೆ. ಇದರಿಂದ ತಿಂಗಳಿಗೆ 37,018.70 ಕ್ವಿಂಟಾಲ್‌ನಂತೆ ವರ್ಷಕ್ಕೆ 4,44,224.40 ಟನ್‌ ಅಕ್ಕಿ ಉಳಿತಾಯವಾಗಲಿದೆ. ಪ್ರತಿ ಕೆ.ಜಿ.ಗೆ 3 ರು.ನಂತೆ ತಿಂಗಳಿಗೆ 1.12 ಕೋಟಿ ರು. ಹಾಗೂ ವರ್ಷಕ್ಕೆ 13.33 ಕೋಟಿ ರು. ರಾಜ್ಯ ಸರ್ಕಾರಕ್ಕೆ ಉಳಿಯಲಿದೆ. ಅಂತೆಯೇ ಪ್ರತಿ ಕೆಜಿಗೆ 24 ರು.ನಂತಾದರೆ ತಿಂಗಳಿಗೆ 8.89 ಕೋಟಿ ರು.ನಂತೆ ವರ್ಷಕ್ಕೆ 107 ಕೋಟಿ ರು. ಉಳಿತಾಯವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತಷ್ಟುಅನರ್ಹರ ಚೀಟಿ ರದ್ದು

ಪಡಿತರ ಚೀಟಿ ರದ್ದತಿ ಕುರಿತು ಯಾವುದೇ ತಕರಾರು ಇದ್ದರೆ ಇಲಾಖೆಗೆ ಮನವಿ ಸಲ್ಲಿಸಬಹುದು. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದಂತೆ ಆರ್‌ಟಿಓ ಇಲಾಖೆಯಿಂದಲೂ ಶೀಘ್ರವೇ ಮಾಹಿತಿ ಪಡೆದು ಅನರ್ಹರ ಪಡಿತರ ರದ್ದು ಮಾಡಲಾಗುವುದು.

- ಶಾಮ್ಲಾ ಇಕ್ಬಾಲ್‌, ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

click me!