* ಕೋವಿಡ್ ಹೆಚ್ಚಳ ತಡೆಯಲು ಸರ್ಕಾರ ಕಠಿಣ ನಿರ್ಧಾರ
* ನಗರದಲ್ಲಿ ಗಣೇಶೋತ್ಸವ ನಿರ್ಬಂಧ ಸಡಿಲಿಕೆ ಇಲ್ಲ!
* ಪ್ರತಿ ವಾರ್ಡ್‌ಗೆ ಒಂದೇ ಗಣಪ, ಮೂರೇ ದಿನ ಉತ್ಸವ
ಬೆಂಗಳೂರು(ಸೆ.10): ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಗುರುವಾರ ದಿನವಿಡೀ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿಲ್ಲ.
ಕೊರೋನಾ ನಿಯಂತ್ರಣದ ಸಲುವಾಗಿ ನಿರ್ಬಂಧಗಳ ಸಡಿಲಿಕೆಗೆ ರಾಜಿಯಾಗಲು ಸರ್ಕಾರ ಹಾಗೂ ಬಿಬಿಎಂಪಿ ಹಿಂದೇಟು ಹಾಕಿವೆ. ಪರಿಣಾಮ ವಾರ್ಡ್‌ಗೆ ಒಂದೇ ಗಣೇಶಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ಮೂರ್ತಿ ಪ್ರತಿಷ್ಠಾನೆ ಕುರಿತು ವಿಧಿಸಿರುವ ನಿರ್ಬಂಧಗಳು ಯಥಾಪ್ರಕಾರ ಮುಂದುವರೆಯಲಿವೆ.
ಗುರುವಾರ ಬೆಳಗ್ಗೆಯಿಂದಲೇ ಗಣೇಶಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮುತ್ತಿಗೆ ಹಾಕಿ ನಿರ್ಬಂಧಗಳನ್ನು ಹಿಂಪಡೆಯುವಂತೆ ಒತ್ತಾಯ ಮಾಡಿದರು. ಕೇವಲ 3 ದಿನಗಳಿಗೆ ಸೀಮಿತಗೊಳಿಸಿರುವ ಉತ್ಸವವನ್ನು ಕನಿಷ್ಠ 10 ದಿನಕ್ಕೆ ವಿಸ್ತರಣೆ ಮಾಡಬೇಕು. ಗಾತ್ರಕ್ಕೆ ನಿರ್ಬಂಧ ಹೇರಬಾರದು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ಹೋರಾಟ ಮಾಡಿದರು.
ಪರಿಣಾಮ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದ ಬಿಬಿಎಂಪಿ ಅಧಿಕಾರಿಗಳ ತಂಡ ತರಾತುರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಿತು. ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆ ವೇಳೆಯೂ 3ನೇ ಅಲೆ ಆತಂಕದ ನಡುವೆ ನಿರ್ಬಂಧಗಳನ್ನು ಸಡಿಲಿಸುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ದಿನಪೂರ್ತಿ ನಡೆದ ಹೈಡ್ರಾಮದ ಬಳಿಕವೂ ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ವಾರ್ಡ್‌ಗೆ ಒಂದೇ ಗಣಪ, 3 ದಿನ ಮಾತ್ರ ಆಚರಣೆ:
ಬೆಂಗಳೂರು ನಗರದಲ್ಲಿ ಮೂರು ದಿನ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಮನೆಗಳಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿಗಿಂತ ಹೆಚ್ಚು ಗಾತ್ರದ ಗಣೇಶ ಕೂರಿಸುವಂತಿಲ್ಲ. ವಾರ್ಡ್‌ಗೆ ಒಂದು ಗಣೇಶ ಮಾತ್ರ ಪ್ರತಿಷ್ಠಾಪಿಸಬೇಕು. ಪ್ರತಿ ವಾರ್ಡ್‌ನಲ್ಲಿರುವ ಎಲ್ಲಾ ಸ್ಥಳೀಯ ಗಣೇಶೋತ್ಸವ ಸಮಿತಿಗಳು ಸೇರಿ ಒಮ್ಮತದ ನಿರ್ಧಾರಕ್ಕೆ ಬಂದು ಒಂದು ಸ್ಥಳದಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡಬೇಕು. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಸೂಚಿಸಿದ ಸ್ಥಳ ಹೊರತುಪಡಿಸಿ ಬೇರೆಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸುವಂತಿಲ್ಲ ಎಂದು ಬಿಬಿಎಂಪಿ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.
ಕೇವಲ 20 ಜನರಿಗೆ ಮಾತ್ರ ಅವಕಾಶ:
ಗಣೇಶಮೂರ್ತಿ ದರ್ಶನಕ್ಕೆ ಒಂದು ಬಾರಿಗೆ 20 ಜನರಿಗೆ ಮಾತ್ರ ಅವಕಾಶ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಉತ್ಸವ ಸಮಿತಿಯವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಲಸಿಕೆ ಪಡೆದಿರಬೇಕು. ಜೊತೆಗೆ ಆಯೋಜಕರೇ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆಯಾ ವಾರ್ಡ್‌ಗಳಲ್ಲಿ ಇರಿಸಲಾಗುವ ಮೊಬೈಲ್ ಟ್ಯಾಂಕ್‌ನಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಅನುಮತಿ ಕಡ್ಡಾಯ:
ಸಾರ್ವಜನಿಕ ಗಣೇಶೋತ್ಸವಕ್ಕೆ ಆಯಾ ವಾರ್ಡ್‌ನ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಾರ್ಡ್‌ಗೆ ಒಂದು ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದ್ದು, ದೇವಸ್ಥಾನಗಳು ಮತ್ತು ಮನೆಗಳಲ್ಲಿ ಗಣೇಶ ಪೂಜೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ತಿಳಿಸಲಾಗಿದೆ.