ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!

By Kannadaprabha News  |  First Published Jul 17, 2023, 4:28 AM IST

ಮುಂಗಾರುಪೂರ್ವ ಮಳೆಯ ಕೊರತೆ, ಮಳೆ ಮಾರುತಗಳ ಆಗಮನ ವಿಳಂಬ ಹಾಗೂ ತಡವಾಗಿ ಪ್ರವೇಶಿಸಿದರೂ ಮಳೆ ಕೊರತೆಯುಂಟಾಗಿರುವುದರಿಂದ ರಾಜ್ಯದ ರೈತ ಸಮುದಾಯದಲ್ಲಿ ಬರಗಾಲದ ಆತಂಕ ಮೂಡಿರುವಂತಿದೆ. ಇದಕ್ಕೆ ಇಂಬು ನೀಡುವಂತೆ, ಕಳೆದ 2 ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.


ವಿಶೇಷ ವರದಿ

ಬೆಂಗಳೂರು (ಜು.17) :  ಮುಂಗಾರುಪೂರ್ವ ಮಳೆಯ ಕೊರತೆ, ಮಳೆ ಮಾರುತಗಳ ಆಗಮನ ವಿಳಂಬ ಹಾಗೂ ತಡವಾಗಿ ಪ್ರವೇಶಿಸಿದರೂ ಮಳೆ ಕೊರತೆಯುಂಟಾಗಿರುವುದರಿಂದ ರಾಜ್ಯದ ರೈತ ಸಮುದಾಯದಲ್ಲಿ ಬರಗಾಲದ ಆತಂಕ ಮೂಡಿರುವಂತಿದೆ. ಇದಕ್ಕೆ ಇಂಬು ನೀಡುವಂತೆ, ಕಳೆದ 2 ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

Tap to resize

Latest Videos

ಸಾಮಾನ್ಯವಾಗಿ ಜೂನ್‌ ಮೊದಲ ವಾರವೇ ಆಗಮಿಸುತ್ತಿದ್ದ ಮುಂಗಾರು ಈ ಬಾರಿ ತೀರಾ ತಡವಾಗಿ ಪ್ರವೇಶಿಸಿತು. ಆದರೆ ಅದು ಹೆಚ್ಚು ಮಳೆಯನ್ನೇನೂ ತರಲಿಲ್ಲ. ಜುಲೈ ತಿಂಗಳು ಅರ್ಧ ಕಳೆದಿದ್ದರೂ ರಾಜ್ಯದ ಬಹುತೇಕ ಕಡೆ ಮಳೆ ಕೊರತೆಯಾಗಿದ್ದು, ಕೃಷಿ ಚಟುವಟಿಕೆ ಕುಂಠಿತವಾಗಿದೆ. ಹಲವೆಡೆ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ಇದರಿಂದ ಹತಾಶೆಗೆ ಒಳಗಾಗಿರುವ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವಂತಿದೆ.

 

ವಿಜಯನಗರ: ಸಾಲಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು

2 ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಹಾವೇರಿ ಜಿಲ್ಲೆಯಲ್ಲಿ. ಅಲ್ಲಿನ 18 ರೈತರು ಸಾವಿಗೆ ಶರಣಾಗಿರುವ ಬಗ್ಗೆ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿವೆ. ಉಳಿದಂತೆ, ಧಾರವಾಡ ಜಿಲ್ಲೆಯಲ್ಲಿ 6 ಮಂದಿ, ಮೈಸೂರು, ಶಿವಮೊಗ್ಗ, ಬೀದರ್‌ ಜಿಲ್ಲೆಯಲ್ಲಿ ಮೂವರು, ವಿಜಯನಗರ ಜಿಲ್ಲೆಯಲ್ಲಿ ಓರ್ವ ರೈತ ಮಹಿಳೆ ಸೇರಿ ಮೂವರು, ಬಳ್ಳಾರಿಯಲ್ಲಿ ಇಬ್ಬರು, ಯಾದಗಿರಿ, ಚಿಕ್ಕಬಳ್ಳಾಪುರ, ಕೊಪ್ಪಳ ಹಾಗೂ ಗದಗ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿನ್ನೆ ಇಬ್ಬರ ಆತ್ಮಹತ್ಯೆ:

ಈ ಮಧ್ಯೆ, ಭಾನುವಾರವೇ ರಾಜ್ಯದಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶಿಗೇನಹಳ್ಳಿಯಲ್ಲಿ ರೈತ ಮಹಿಳೆ ಕೆ.ಅನ್ನಕ್ಕ (60) ಎಂಬುವರು ಸಾಲಬಾಧೆ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಂಬ್ರಹಳ್ಳಿಯ ಎಸ್‌ಬಿಐನಲ್ಲಿ .4 ಲಕ್ಷ ಸಾಲ, ಜತೆಗೆ ಖಾಸಗಿಯಾಗಿ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ತಮ್ಮ ನಾಲ್ಕು ಎಕರೆ ಕೃಷಿಭೂಮಿಯಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ಬೆಳೆ ಕೈಕೊಟ್ಟಿತ್ತು. ಈ ವರ್ಷವೂ ಮಳೆ ಕೈಕೊಟ್ಟಿದ್ದರಿಂದ ಬೆಳೆನಷ್ಟದ ಭೀತಿಯಿಂದ ವಿಷ ಕುಡಿದು ಸಾವಿಗೀಡಾಗಿದ್ದಾರೆ.

ಇದೇ ವೇಳೆ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಹುಲ್ಲೂರು ಗ್ರಾಮದ ರೈತ, ಮಲ್ಲಿಕಾರ್ಜುನ ಅಂಗಡಿ (36) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ .16 ಲಕ್ಷ ಸಾಲ ಮಾಡಿ 2 ಟ್ರ್ಯಾಕ್ಟರ್‌ ಖರೀದಿ ಮಾಡಿದ್ದರು. ಮಳೆ ಕೊರತೆ ಹಿನ್ನೆಲೆಯಲ್ಲಿ ಸಾಲ ತೀರಿಸುವ ದಾರಿ ತಿಳಿಯದೆ ಗ್ರಾಮದ ಸಮೀಪದ ಹಳ್ಳದ ದಂಡೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿಮಧ್ಯೆ ಕೊನೆಯುಸಿರೆಳೆದರು.

ಕುತ್ತು ತರುತ್ತಿರುವ ಸಾಲ ಬಾಧೆ:

ಸಣ್ಣ, ಅತಿಸಣ್ಣ ರೈತರಲ್ಲಿ ಬಹುತೇಕರು ಸಾಲ-ಸೋಲ ಮಾಡಿಯೇ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡುವವರಿದ್ದಾರೆ. ರಾಜ್ಯದ ಬಹುತೇಕ ಕಡೆ ಈ ಸಲ ಬೇಸಿಗೆಯಲ್ಲಿ ಜಲಮೂಲಗಳೆಲ್ಲ ಬತ್ತಿ ಸಮಸ್ಯೆಯಾಗಿದ್ದರೆ, ಮುಂಗಾರು ಹಂಗಾಮು ಕೂಡ ಸಮರ್ಪಕವಾಗಿಲ್ಲ. ಇದರಿಂದ ಸಾಲ ಮಾಡಿದ ರೈತರು ಕಂಗಾಲಾಗಿದ್ದಾರೆ. ಕೆಲವು ಕಡೆ ಎರಡು ಸಲ ಬಿತ್ತನೆ ವಿಫಲವಾಗಿದ್ದು, ಅದಕ್ಕಾಗಿ ಹತ್ತಾರು ಸಾವಿರ ರುಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಬಿತ್ತನೆ ವಿಫಲವಾದದ್ದಕ್ಕೆ ಪರಿಹಾರವಾಗಲಿ, ಮತ್ತೊಮ್ಮೆ ರಿಯಾಯಿತಿ ದರದಲ್ಲಿ ಬೀಜವಾಗಲಿ ಸಿಗದಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನ ಲಕ್ಷಾಂತರ ಎಕರೆ ಪ್ರದೇಶದಲ್ಲಿನ ಬೆಳೆ ಹಾಳಾಗಿತ್ತು. ಈ ಸಲ ಮಳೆಯೇ ಇಲ್ಲದೇ ಬರಗಾಲದ ಛಾಯೆ ಆವರಿಸಿರುವುದು ರಾಜ್ಯದ ರೈತರನ್ನು ಕಂಗೆಡಿಸಿದೆ. ಇದರಿಂದ ಮನನೊಂದು, ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ರೈತ ನಾಯಕರೇ ಹೇಳುತ್ತಿದ್ದಾರೆ.

 

ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಫಸ್ಟ್‌, ಕರ್ನಾಟಕದ ಸ್ಥಾನವೆಷ್ಟು ಗೊತ್ತಾ?

ಕಾರಣ ಏನು?

- ಸಾವಿಗೀಡಾಗುತ್ತಿರುವವರಲ್ಲಿ ಬಹುತೇಕರು ಸಣ್ಣ, ಅತಿಸಣ್ಣ ರೈತರು

- ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು

- ಮುಂಗಾರು ಪೂರ್ವ, ಮುಂಗಾರು ಮಳೆ ಸರಿಯಾಗಿ ಆಗಲಿಲ್ಲ

- ಕೆಲವು ಕಡೆ 2 ಸಲ ಬಿತ್ತನೆ ವಿಫಲ. ಹೀಗಾಗಿ ರೈತರು ಕಂಗಾಲು

- ಬಿತ್ತನೆಗೆ ಮಾಡಿದ್ದ ಖರ್ಚು ಕೂಡ ಸಿಗದೆ ಆರ್ಥಿಕ ಸಂಕಷ್ಟ

- ಕಳೆದ ವರ್ಷ ಅತಿವೃಷ್ಟಿಯಿಂದ ಹಲವೆಡೆ ಬೆಳೆ ನಾಶವಾಗಿತ್ತು

- ಈ ಬರಿ ಬರಗಾಲದ ಛಾಯೆ ಆವರಿಸಿರುವುದರಿಂದ ರೈತ ಹತಾಶ

- ಸಾಲ ತೀರಿಸಲು ಆಗಲ್ಲ ಎಂದು ಸಾವಿಗೆ ಶರಣು: ರೈತರ ಅಳಲು

ಎಲ್ಲಿ ಎಷ್ಟುಸಾವು?

18: ಹಾವೇರಿ

6: ಧಾರವಾಡ

3: ಮೈಸೂರು, ಶಿವಮೊಗ್ಗ, ಬೀದರ್‌, ವಿಜಯನಗರ (ತಲಾ)

2: ಬಳ್ಳಾರಿ

1: ಯಾದಗಿರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಗದಗ (ತಲಾ)

ವಿಷ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶಿಗೇನಹಳ್ಳಿಯಲ್ಲಿ ರೈತ ಮಹಿಳೆ ಕೆ.ಅನ್ನಕ್ಕ (60) ಎಂಬುವರು ಸಾಲಬಾಧೆ ತಾಳಲಾರದೆ ಭಾನುವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಂಬ್ರಹಳ್ಳಿಯ ಎಸ್‌ಬಿಐನಲ್ಲಿ .4 ಲಕ್ಷ ಸಾಲ, ಜತೆಗೆ ಖಾಸಗಿಯಾಗಿ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ತಮ್ಮ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ಬೆಳೆ ಕೈಕೊಟ್ಟಿತ್ತು. ಈ ವರ್ಷವೂ ಮಳೆ ಕೈಕೊಟ್ಟಿದ್ದರಿಂದ ಬೆಳೆನಷ್ಟದ ಭೀತಿಯಿಂದ ವಿಷ ಕುಡಿದು ಸಾವಿಗೀಡಾಗಿದ್ದಾರೆ.

ಸರ್ಕಾರ ನೆರವಿಗೆ ಬರಲಿ

ಮಳೆ ಕೈಕೊಟ್ಟಿರುವುದರಿಂದ ಎರಡೆರಡು ಸಲ ಬಿತ್ತನೆಗಾಗಿ ರೈತರು ಹತ್ತಾರು ಸಾವಿರ ರು.ಸಾಲ ಮಾಡಿಕೊಂಡಿದ್ದಾರೆ. ಈಗ ಮರು ಬಿತ್ತನೆ ಮಾಡಿದ ಬೆಳೆಗಳಿಗೂ ನೀರಿಲ್ಲದಂತಾಗಿದೆ. ಇದರಿಂದ ರೈತರ ಆತ್ಮಹತ್ಯೆ ಸರಣಿ ಜಿಲ್ಲೆಯಲ್ಲಿ ಶುರುವಾಗಿದೆ. ಇದನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರೈತನ ನೆರವಿಗೆ ಸರ್ಕಾರ ಬರಬೇಕು.

- ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ, ಹಾವೇರಿ

click me!