ರಾಜ್ಯದಲ್ಲಿ ಮುಂಗಾರು ಬಿರುಸು; 6 ಜಿಲ್ಲೆಗಳ ಶಾಲೆ ರಜೆ ಘೋಷಣೆ

By Kannadaprabha News  |  First Published Jul 16, 2024, 7:46 AM IST

ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ರಾತ್ರಿಯಿಂದೀಚೆಗೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 40ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.


ಬೆಂಗಳೂರು (ಜು.16) ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ರಾತ್ರಿಯಿಂದೀಚೆಗೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 40ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ 70ರಿಂದ 80ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ತುಂಗಾ, ಭದ್ರಾ, ಕುಮಾರಧಾರ, ಬಡಗಣಿ, ಬಾಸ್ಕೇರಿ, ಗುಂಡಬಾಳ, ಅಘನಾಶಿನಿ, ಚಂಡಿಕಾ ಸೇರಿ ಹಲವು ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಮತ್ತೊಂದು ಪ್ರವಾಹದ ಆತಂಕ ಶುರುವಾಗಿದೆ.

Tap to resize

Latest Videos

ಮಲೆನಾಡಿನಲ್ಲಿ ಮಳೆ ಬಿರುಸು: ರೀಲ್ಸ್ ಮಾಡಿದ ಹುಚ್ಚಿಗೆ ರಸ್ತೆ ಸಂಪೂರ್ಣ ಹಾಳು, ಐವರು ಪೊಲೀಸ್ ವಶಕ್ಕೆ!

ಉತ್ತರ ಕನ್ನಡ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಭಾರೀ ಮಳೆ ಮುಂದುವರಿದಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರವೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲಾದ್ಯಂತ ಹಾಗೂ ಹಾಸನದ 4 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

50ಕ್ಕೂ ಹೆಚ್ಚು ಮನೆ ಜಲಾವೃತ:

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ದಿನವಿಡೀ ಭರ್ಜರಿ ಮಳೆ ಸುರಿದಿದೆ.

ಉತ್ತರ ಕನ್ನಡದ ಕಾರವಾರ, ಕುಮಟಾ ಸೇರಿ ಹಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರವಾರ ತಾಲೂಕಿನ ಅರಗಾ, ತೋಡೂರು, ಚೆಂಡಿಯಾ ಮತ್ತಿತರ ಕಡೆಗಳಲ್ಲೂ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇಲ್ಲಿನ 40ಕ್ಕೂ ಹೆಚ್ಚು ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿದ್ದು, ಕಾಳಿ ನದಿ ತೀರದುದ್ದಕ್ಕೂ ಪ್ರವಾಹದ ಆತಂಕ ಮನೆಮಾಡಿದೆ.

ಭಾರೀ ಗಾಳಿಗೆ ಮರ ಬಿದ್ದು ಹಳ್ಳಿಗಳಲ್ಲಿ ಹಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಜಿಲ್ಲೆಯ ಬಡಗಣಿ, ಬಾಸ್ಕೇರಿ, ಗುಂಡಬಾಳ ನದಿಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದ್ದು, ಕೆಲವೆಡೆ ಹೊಲಗದ್ದೆಗಳು ಜಲಾವೃತವಾಗಿವೆ.

ಇನ್ನು ಕರಾವಳಿಯ ಉಳಿದೆರಡು ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಸೋಮವಾರ ಬೆಳಗ್ಗಿನಿಂದ ಬಿಡದೆ ಸುರಿಯುತ್ತಿರುವ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಕುಮಾರಧಾರ, ದರ್ಪಣತೀರ್ಥ, ಸುವರ್ಣಾ, ಸ್ವರ್ಣಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ನಿಧಾನವಾಗಿ ನೀರಿನಮಟ್ಟ ಏರಿಕೆಯಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ತುಂಗಾ, ಭದ್ರಾ ಮತ್ತು ಹೇಮಾವತಿ ನದಿ ನೀರಿನಮಟ್ಟ ಏರಿಕೆಯಾಗಿದೆ. ತುಂಗಾನದಿ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನಾ ಮಂಟಪಕ್ಕೆ ನೀರು ನುಗ್ಗಿ, ಕಪ್ಪೆಶಂಕರ ದೇಗುಲ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಪ್ರವಾಹಮಟ್ಟದಲ್ಲಿ ಹರಿಯುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಶಿವಮೊಗ್ಗದಲ್ಲಿ ಭಾರೀ ಗಾಳಿ-ಮಳೆಗೆ ಹೊಸನಗರದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಹಲವೆಡೆ ಭೂಕುಸಿತ:

ಪ್ರತಿ ಮಳೆಗಾಲದಂತೆ ಈ ಬಾರಿಯೂ ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹಲವೆಡೆ ಭೂಕುಸಿತದ ಆತಂಕ ಮುಂದುವರಿದಿದೆ. ಉತ್ತರ ಕನ್ನಡದ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಯಲಗುಪ್ಪ-ಖರ್ವಾ ಬಳಿ ಗುಡ್ಡ ಕುಸಿದು ಸಂಚಾರಕ್ಕೆ ಸುಮಾರು 2 ಗಂಟೆಗಳ ಕಾಲ ಸಮಸ್ಯೆಯಾಗಿದ್ದರೆ, ಚಿಕ್ಕಮಗಳೂರಿನ ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡಕುಸಿದು ಸಂಚಾರ ಬಂದ್‌ ಆಗುವ ಆತಂಕ ಶುರುವಾಗಿದೆ.

ಇನ್ನು ಹಾಸನದ ಸಕಲೇಶಪುರ ತಾಲೂಕಿನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಬದಿಯ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಅಗೆದಿರುವುದರಿಂದ ಮಣ್ಣು ಕುಸಿಯುತ್ತಿದೆ. ಇದರಿಂದ ಕೆಲ ಮನೆಗಳು ಅಪಾಯಕ್ಕೆ ಸಿಲುಕಿವೆ. ಕೊಡಗು ಮತ್ತು ಉತ್ತರ ಕನ್ನಡದಲ್ಲೂ ಹಲವೆಡೆ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ.

ಡ್ಯಾಂಗಳ ಒಳಹರಿವು ಹೆಚ್ಚಳ:

ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ, ಕೆಆರ್‌ಎಸ್‌, ಭದ್ರಾ, ಲಿಂಗನಮಕ್ಕಿ ಸೇರಿ ಹಲವು ಡ್ಯಾಂಗಳ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಭದ್ರಾ ಜಲಾಶಯಕ್ಕೆ16,041 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಲಿಂಗನಮಕ್ಕಿಗೆ 45,115 ಕ್ಯುಸೆಕ್‌, ಹಾರಂಗಿ ಜಲಾಶಯಕ್ಕೆ17 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹಾರಂಗಿಯಿಂದ 20,000 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ಕಬಿನಿ ಡ್ಯಾಂಗೆ 14,697 ಕ್ಯುಸೆಕ್ ಒಳಹರಿವಿದ್ದು, 20 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಮೈಸೂರು, ಮಂಡ್ಯ ಭಾಗದ ಜೀವನಾಡಿ ಕೆಆರ್‌ಎಸ್‌ ಡ್ಯಾಂ ನೀರಿನಮಟ್ಟ 106 ಅಡಿ ತಲುಪಿದ್ದು, 19, 202 ಕ್ಯುಸೆಕ್‌ ಹರಿದು ಬರುತ್ತಿದೆ. 2284 ಕ್ಯುಸೆಕ್‌ ನೀರು ನದಿಗೆ ಹೊರಬಿಡಲಾಗುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ

 ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸೋಮವಾರ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ನೀರಿನ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಗಿಳಿಯದಂತೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ದಡದಲ್ಲಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ಭಕ್ತರಿಗೆ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

 

ಮಳೆಗೆ ಪ್ರಾರ್ಥಿಸಿ ಗೋರಿಯ ಶವದ ಬಾಯಿಗೆ ನೀರು ಬಿಡ್ತಾರೆ: ವಿಜಯಪುರದಲ್ಲಿ ಮಳೆಗಾಗಿ ಭಯಾನಕ ಆಚರಣೆ!

ಕೊಂಕಣದ ಮಾರ್ಗದಲ್ಲಿ ರೈಲು ಸಂಚಾರ ರದ್ದು

ಮಂಗಳೂರು: ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮುಂದಿನ 14 ಗಂಟೆಗಳ ಕಾಲ ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿ ಹಲವು ಭಾಗಗಳಲ್ಲಿ ಮಣ್ಣು ಕುಸಿತವಾಗಿದ್ದು, ರೈಲು ಸಂಚಾರ ರದ್ದುಗೊಂಡಿದೆ. ಇತ್ತೀಚೆಗಷ್ಟೇ ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ಜುಲೈ 10 ರಂದು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿತ್ತು.

click me!