
ವರದಿ- ರಮೇಶ್, ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.07): ವಿಧಾನಸೌಧದಲ್ಲಿ ಬಜೆಟ್ ಮಂಡನೆ ವೇಳೆ ಅಪರಿಚಿತ ವ್ಯಕ್ತಿ ವಿಧಾನಸಭೆ ಎಂಟ್ರಿ ಕೊಟ್ಟ ಹಿನ್ನಲೆಯಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮೊಳಕಾಲ್ಮೂರು ಮೂಲದ ವಕೀಲ ತಿಪ್ಪೇರುದ್ರಪ್ಪ @ಕರಿಯಪ್ಪ ಎಂದು ಗುರುತಿಸಲಾಗಿದೆ.
ಆರೋಪಿ ತಿಪ್ಪೇರುದ್ರಪ್ಪ ಬಜೆಟ್ ದಿನ ಎಲ್ಲರನ್ನು ಬಜೆಟ್ ಅಧಿವೇಶನ ನೋಡಲು ಒಳಗೆ ಬಿಡುತ್ತಾರೆ ಎಂಬ ಮಾಹಿತಿ ಗೊತ್ತಿತ್ತು. ಹೀಗಾಗಿ ವಿಧಾನಸೌಧ ಬಳಿ ಬಂದು ಆಡಿಯೆನ್ಸ್ ಗ್ಯಾಲರಿ ಪಾಸ್ ಪಡೆದುಕೊಂಡಿದ್ದಾನೆ. ಬಳಿಕ ಪೂರ್ವ ಗೇಟ್ ನಿಂದ ವಿಧಾನಸೌಧ ಒಳಗೆ ಹೋಗಿದ್ದಾನೆ. ಇಂದು ಮಧ್ಯಾಹ್ನ ಸದನಕ್ಕೆ ಹೋಗುವ ಮುನ್ನ ಮಾರ್ಷಲ್ ಗಳ ಜೊತೆ ಗಲಾಟೆ ಮಾಡಿದ್ದಾನೆ. ನಾನು ಚಿತ್ರದುರ್ಗ ಶಾಸಕ ಬಿಡಯ್ಯ ಎಂದು ಜಗಳ ಮಾಡಿ ವಿಧಾನಸಭೆ ಒಳಗೆ ಹೋಗಿದ್ದ ತಿಪ್ಪೇರುದ್ರಪ್ಪ ಶಾಸಕರ ಜಾಗದಲ್ಲಿ ಕುಳಿತಿದ್ದಾನೆ.
ವಿಧಾನಸೌಧ ಬಜೆಟ್ ಅಧಿವೇಶನದಲ್ಲಿ ಕುಳಿತ ಅನಾಮಿಕ ವ್ಯಕ್ತಿ: 15 ನಿಮಿಷವಾದರೂ ಗೊತ್ತಾಗಿಲ್ಲ
ಶಾಸಕಿ ಸ್ಥಾನದಲ್ಲಿ ಕುಳಿತು ಸಿಕ್ಕಿಕೊಂಡರು: ಕೂಡಲೇ ಎಮ್ ಎಲ್ ಎಗಳ ಲಿಸ್ಟ್ ನೋಡಿದ ಮಾರ್ಷಲ್ ಗಳಿಗೆ ಅನುಮಾನ ಬಂದಿದೆ. ಸೀಟ್ ನಲ್ಲಿ ನೋಡಿದಾಗ ಮಹಿಳಾ ಶಾಸಕಿ ಸ್ಥಾನದಲ್ಲಿ ಕುಳಿತಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಆರೋಪಿ ತಿಪ್ಪೇರುದ್ರಪ್ಪನನ್ನು ವಿಧಾನಸಭೆಯಿಂದ ಹೊರಗೆ ಕರೆದುಕೊಂಡು ಬಂದ ಮಾರ್ಷಲ್ ಗಳು ಅವರನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್‌ಠಾಣೆಗೆ ಕರೆತಂದಿದ್ದಾರೆ. ಬಳಿಕ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಖುದ್ದಾಗಿ ವಿಧಾನಸೌಧ ಠಾಣೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಯಾವ ಉದ್ದೇಶಕ್ಕೆ ವಿಧಾನ ಸಭೆ ಒಳಗೆ ಹೋಗಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಊರಿನಲ್ಲಿಯೂ ಶಾಸಕರೆಂದು ಹೇಳಿಕೊಂಡು ಸುತ್ತಾಟ: ಇನ್ನು ಆರೋಪಿ ತಿಪ್ಪೇರುದ್ರಪ್ಪ ತನ್ನ ಊರಿನಲ್ಲಿ ಕೂಡಾ ಹೀಗೇ ನಾನು ಶಾಸಕ ಎಂದು ಹೇಳಿಕೊಂಡು ತಿರುಗಾಡ್ತಿದ್ದ ಎನ್ನಲಾಗಿದೆ. ಪೋಲೀಸರು ಆತನ ಕುಟುಂಬಸ್ಥರಿಗೆ ಕರೆ ಮಾಡಿ ವಿವರ ಪಡೆದಿದ್ದಾರೆ. ಇನ್ನು ವಿಧಾನಸೌಧ ಸ್ಟೇಷನ್ ಗೆ ಬಂದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಕೂಡ ವಿಚಾರಣೆ ಮಾಡಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಮಾರ್ಷಲ್ಸ್ ತಂಡದ ಮುಖ್ಯಸ್ಥರನ್ನ ಕರೆಸಿಕೊಂಡಿದ್ದಾರೆ. ಮಾರ್ಷಲ್ ಗಳ ಜೊತೆ ಡಿಸಿಪಿ ಚನ್ನಬಸಪ್ಪ ಕೂಡ ಆಗಮಿಸಿದ್ರು. ಭದ್ರತಾ ವೈಪಲ್ಯದ ವಿಚಾರವಾಗಿ ಮಾರ್ಷಲ್ಸ್ ಮುಖ್ಯಸ್ಥರಿಗೆ ಜಂಟಿ ಆಯುಕ್ತ ಶರಣಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Karnataka Budget 2023: ಬೆಂಗಳೂರಲ್ಲಿ ಹೊಸ ಟೆಕ್ನಾಲಜಿ- ಏರೋಸ್ಪೇಸ್ ಪಾರ್ಕ್, ಕೈಗಾರಿಕಾ ಟೌನ್‌ಷಿಪ್ ಸ್ಥಾಪನೆ
ಮೊದಲ ಬಾರಿಗೆ ವಿಧಾನಸೌಧ ಭದ್ರತಾ ವೈಫಲ್ಯ: ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯ ಆಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವರದಿ ಕೇಳಿದ್ದಾರೆ. ಕೂಡಲೇ ಸಂಪೂರ್ಣ ರಿಪೋರ್ಟ್ ಕೊಡುವಂತೆ ಸೂಚನೆ ನೀಡಿದ್ದಾರೆ. ಇನ್ನು ತಿಪ್ಪೇರುದ್ರಪ್ಪ ವಿರುದ್ಧ ಟ್ರೆಸ್ ಪಾಸ್ ಹಾಗೂ ಇಂಪರ್ಸನೇಷಲ್ ಅಪರಾಧದ ಅಡಿ ಕೇಸ್ ದಾಖಲಾಗಿದೆ. ಬಜೆಟ್ ಮಂಡನೆ ನೋಡಲು ವಿಧಾನಸೌಧ ಪಾಸ್ ಪಡೆದು ತಿಪ್ಪೆರುದ್ರಪ್ಪ ಬಂದಿದ್ದರು. ಇನ್ನು ತಿಪ್ಪೇರುದ್ರಪ್ಪ ವಕೀಲ ವೃತ್ತಿ ಮಾಡಿಕೊಂಡಿದ್ದಾರೆ. ಮಾರ್ಷನಲ್ಸ್ ಕೊಟ್ಟ ದೂರಿನ ಅನ್ವಯ ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿವಿಧ ಪ್ರಕರಣದಡಿ ಕೇಸ್ ದಾಖಲು: ನಾನು ಎಮ್‌ಎಲ್‌ಎ ಎಂಬ ಪದ ಬಳಸಿ ವಿಧಾನಸೌಧದ ಒಳಗೆ ಹೋಗಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ, ತನ್ನ ಐಡೆಂಟಿಟಿ ಮರೆಮಾಚುವ ಉದ್ದೇಶದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ