ಪ್ರಧಾನಿ ಮೋದಿ ಒಬ್ಬ ಮಹಾನ್ ನಾಯಕ: ಸುಧಾಮೂರ್ತಿ ಶ್ಲಾಘನೆ

By Govindaraj SFirst Published Jun 27, 2022, 11:21 PM IST
Highlights

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಬರೋಬ್ಬರಿ 20 ವರ್ಷ ಸಂದಿದೆ. ಗುಜರಾತ್ ಮುಖ್ಯಮಂತ್ರಿ ಆಗಿ 12 ವರ್ಷ ಕೆಲಸ ಮಾಡಿರುವ ಅವರು ಪ್ರಧಾನಿ ಆಗಿ 8 ವರ್ಷ ಪೂರ್ಣ ಮಾಡಿದ್ದಾರೆ. 

ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜೂ.27): ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಬರೋಬ್ಬರಿ 20 ವರ್ಷ ಸಂದಿದೆ. ಗುಜರಾತ್ ಮುಖ್ಯಮಂತ್ರಿ ಆಗಿ 12 ವರ್ಷ ಕೆಲಸ ಮಾಡಿರುವ ಅವರು ಪ್ರಧಾನಿ ಆಗಿ 8 ವರ್ಷ ಪೂರ್ಣ ಮಾಡಿದ್ದಾರೆ. ಒಟ್ಟಾರೆ ಸಿಎಂ ಮತ್ತು ಪ್ರಧಾನಿ ಆಗಿ ನಿರಂತರ ಇಪ್ಪತ್ತು ವರ್ಷ ಅಧಿಕಾರ ನಡೆಸಿರುವ ಪ್ರಧಾನಿ‌ ಮೋದಿ ಸದ್ಯದ ಮಟ್ಟಿಗೆ ಓಡುತ್ತಿರುವ ಕುದುರೆ. ಚುನಾವಣೆ ರಾಜಕೀಯ, ಅಭಿವೃದ್ಧಿ, ಪಕ್ಷ ಸಂಘಟನೆ ಈ ಮೂರು ಪ್ರಮುಖ ಕಾರ್ಯಕ್ಕೂ ಬಹುತೇಕ ಸಮಾನ ಅವಕಾಶ ನೀಡುವ ಪ್ರಧಾನಿ ಮೋದಿ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆ ಎದುರಾದರು ಪಕ್ಷ ಗೆಲ್ಲಿಸುವ ಸಲುವಾಗಿ ನಿರಂತರ ಕ್ಯಾಂಪೇನ್ ಮಾಡ್ತಾರೆ.  

ಸದ್ಯದ ಮಟ್ಟಿಗೆ ಬಿಜೆಪಿ ಅಂದರೆ ಮೋದಿ, ಮೋದಿ ಅಂದರೆ ಬಿಜೆಪಿ ಎನ್ನುವಂತಿದೆ. ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾಗಿ, ಪಕ್ಷದ ಸಂಘಟನೆಯ ಜವಬ್ದಾರಿ ನಿರ್ವಹಿಸಿ ಅಚಾನಕ್ ಆಗಿ ಗುಜರಾತ್ ಸಿಎಂ ಆದ್ರು. ಬರೋಬ್ಬರಿ ಮೂರು ಬಾರಿ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಿರುವಾಗಲೇ 2014 ರಲ್ಲಿ ಪ್ರಧಾನಿ ಅಭ್ಯರ್ಥಿ ಆದರು.‌ ಪ್ರಚಂಡ ಗೆಲುವಿನೊಂದಿಗೆ ಪ್ರಧಾನಿ ಹುದ್ದೆ ಏರಿದ್ರು. 2019 ರಲ್ಲಿ ಮತ್ತೆ ಗೆಲುವು ಸಾಧಿಸಿ ಪ್ರಧಾನಿ ಆಗಿ ಈಗ ಎಂಟು ವರ್ಷ ಪೂರೈಸಿದ್ದಾರೆ. 

ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ

ಹೀಗಾಗಿ ಅವರ ಇಪ್ಪತ್ತು ವರ್ಷದ ಅಧಿಕಾರ ಪೂರೈಸಿದ ಸಲುವಾಗಿ ರೂಪಾ ಪಬ್ಲಿಕೇಶನ್ ಹೊರತಂದಿರುವ 'ಮೋದಿ @20' ಪುಸ್ತಕವನ್ನು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ  ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ನ ಮುಖ್ಯಸ್ಥೆ ಸುಧಾಮೂರ್ತಿ ಕೂಡ ಭಾಗಿಯಾಗಿದ್ದರು. ಮೋದಿ @20 ಪುಸ್ತಕದಲ್ಲಿ ಸುಧಾಮೂರ್ತಿಯವರು ಕೂಡ ತಮ್ಮ ಒಂದು ಲೇಖನ ಬರೆದಿದ್ದಾರೆ. ಆ ಲೇಕನದ ಹೆಸರು 'Than Comes The Winds Of Change'.

ಮೋದಿಯನ್ನು ನೋಡುವ ದೃಷ್ಟಿಕೋನ ಬದಲಾಯಿತು: ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಸುಧಾಮೂರ್ತಿಯವರು ನಾನು ಮೋದಿಯವರನ್ನು ಯಾವ ರೀತಿಯಲ್ಲೂ ಬಲ್ಲವಳಲ್ಲ. ಅವರ ಜೊತೆ ಕೆಲಸ ಮಾಡಿದವಳಲ್ಲ. ಅವರಿರೋದು ದಿಲ್ಲಿಯಲ್ಲಿ . ನಾನು ಇರೋದು ಹಳ್ಳಿಯಲ್ಲಿ. ಆದ್ರೆ ಮೋದಿಯವರ ಬಗ್ಗೆ ಬರೆದುಕೊಡಿ ಎಂದು ಕೇಳಿದಾಗ ಆರಂಭದಲ್ಲಿ ನಂಗೆ ಏನು ಬರೆಯಬೇಕು ಎಂದು ಗೊತ್ತಾಗಿಲ್ಲ. ನನ್ನ ಬಳಿ ಅಂಕಿ ಅಂಶಗಳು ಇರಲಿಲ್ಲ. ನನಗೆ ಗೊತ್ತಿರುವ ಮಾಹಿತಿ ಬರೆದಿದ್ದೇನೆ. ಆದರೆ ಈ ಲೇಖನ ಬರೆಯುತ್ತಾ ಬರೆಯುತ್ತಾ ಮೋದಿಯವರನ್ನು ನೋಡುವ ನನ್ನ ದೃಷ್ಟಿ ಕೋನ ಬದಲಾಯಿತು ಎಂದು ತಮ್ಮ ಭಾಷಣದಲ್ಲಿ ಹೇಳಿದರು. 

ಮ್ಯೂನಿಚ್‌ನಲ್ಲಿ ಅದ್ಧೂರಿ ಸ್ವಾಗತ, ಸಂಜೆ 6.30ಕ್ಕೆ ಭಾರತೀಯ ಸಮುದಾಯದ ಜೊತೆ ಮೋದಿ ಮಾತು!

ಸಮರ್ಥ ನಾಯಕ ಬೇರೆಯವರಿಗೆ ಕೆಲಸ ಮಾಡುತ್ತಾರೆ: ತಮ್ಮ ಭಾಷಣದಲ್ಲಿ ಮೋದಿಯವರ ಆಡಳಿತ ವೈಖರಿ ಗುಣಗಾನ ಮಾಡಿದ ಸುಧಾಮೂರ್ತಿ, ಒಬ್ಬ ಮಹಾನ್ ನಾಯಕನ ಗುಣಗಳೇ ಬೇರೆ ಇರುತ್ತವೆ. ಸಮರ್ಥ ನಾಯಕ ಬೇರೆಯವರಿಗೆ ಕೆಲಸ ಮಾಡುತ್ತಾರೆ. ತನಗಾಗಿ ಏನು ಮಾಡಿಕೊಳ್ಳೋದಿಲ್ಲ. ಮೋದಿ ಒಬ್ಬ ಸಮರ್ಥ ನಾಯಕ ಎಂದ ಅವರು, ಸಮರ್ಥ ನಾಯಕತ್ವ ವಿಕಾಸಕ್ಕೆ ಕಾರಣವಾಗುತ್ತದೆ, ಆ ಗುಣಗಳನ್ನು ನಾನು ಮೋದಿಯವರಲ್ಲಿ ಕಂಡೆ ಎಂದು ಹೇಳಿದರು. ಪ್ರಧಾನಿ ಮೋದಿ ಸಾಮಾನ್ಯ ಜನರ ಜೊತೆ ಬೆರೆಯುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕೇವಲ ಮಾತಿನಿಂದ ಏನು ಆಗೋದಿಲ್ಲ. ಕೃತಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದ ಸುಧಾಮೂರ್ತಿ ಮೋದಿಯವರ ಆಡಳಿತ ವೈಖರಿಗೆ ತಮ್ಮ ಮಾತಿನ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

click me!