ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಮಾಡಲು ಪ್ರತಿ ಮನೆಗೆ ತೆರಳಿದರೆ ನಾವು ದಲಿತರೆನ್ನುವ ಕಾರಣಕ್ಕೆ ಒಳಗೆ ಪ್ರವೇಶ ನೀಡದೆ ಹೊರಗೇ ನಿಲ್ಲಿಸುತ್ತಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಕಣ್ಣೀರಿಟ್ಟಿದ್ದಾರೆ.
ದಾವಣಗೆರೆ (ಜೂನ್ 27): ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಕಳೆದ ವಾರ ನಿಗೂಢ ಜ್ವರದಿಂದ ಜನ ತತ್ತರಿಸಿದ್ದರು. ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಔಷದೋಪಾಚರದ ನಂತರ ಪರಿಸ್ಥಿತಿ ತಹಬದಿಗೆ ಬಂದಿದೆ. ಚಿಕೂನ್ ಗೂನ್ಯ, ವೈರಲ್ ಪಿವರ್ , ಡೆಂಘಿಯ ಲಕ್ಷಣಗಳ ಹಿನ್ನಲೆಯಲ್ಲಿ ವೈದ್ಯರು ಶೂಶ್ರುಷಕರ ತಂಡ ದಿನಂಪ್ರತಿ ಭೇಟಿ ನೀಡಿ ಟೆಸ್ಟಿಂಗ್ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಆಶಾ ಕಾರ್ಯಕತೆಯೊಬ್ಬರು, ದಲಿತರೆಂದು ಮನೆಯ ಒಳಗೆ ಸೇರಿಸಲ್ಲ ಸರ್ ಹೇಗೆ ಕೆಲಸ ಮಾಡಲಿ ಎಂದು ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ.
ಹೌದು...ಗ್ರಾಮಗಳಲ್ಲಿ ನಾವು ದಲಿತರೆಂದು ಮನೆಯ ಒಳಗೆ ಸೇರಿಸುವುದಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರು ತಹಶೀಲ್ದಾರರ ಮುಂದೆ ಕಣ್ಣೀರು ಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ನಡೆದಿದೆ.
Davanagere: ಅಗಲಿದ ಪ್ರೀತಿಯ ಮಾಲೀಕನ ಸಮಾಧಿ ಮೇಲೆ ಮಲಗುವ 'ಡಯನಾ' ಶ್ವಾನ
ಕಾನನಕಟ್ಟೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಮಾಡಲು ಪ್ರತಿ ಮನೆಗೆ ತೆರಳಿದರೆ ನಾವು ದಲಿತರೆನ್ನುವ ಕಾರಣಕ್ಕೆ ಒಳಗೆ ಪ್ರವೇಶ ನೀಡದೆ ಹೊರಗಡೆ ನಿಲ್ಲಿಸುತ್ತಾರೆ. ಹೀಗಿರುವಾಗ ಹೇಗೆ ಕೆಲಸ ಮಾಡಲಿ ಸರ್ ಎಂದು ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ತಹಶೀಲ್ದಾರ್ ಹಾಗು ತಾಲೂಕು ಕಾರ್ಯನಿರ್ವಹಣಾಧಿಕಾರಿ ಮುಂದೆ ಕಣ್ಣೀರಿಟ್ಟರು.
ಕಾನನಕಟ್ಟೆ ಗ್ರಾಮದ ಗ್ರಾಮಸ್ಥರು ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ತಾಪಂಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ, ತಾಲೂಕು ಆರೋಗ್ಯಾಧಿಕಾರಿ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪೂಜಾರ ಸಿದ್ದಪ್ಪ ಗುರುವಾರ ಕಾನನಕಟ್ಟೆಗೆ ಭೇಟಿ ನೀಡಿದ್ದರು.ಈ ವೇಳೆ ಆಶಾ ಕಾರ್ಯಕರ್ತೆ ತಮ್ಮ ನೋವು ತೋಡಿಕೊಂಡರು.
ಅಧಿಕಾರಿಗಳು ಕೆಲಸ ಮಾಡಿ ಎಂದು ಹೇಳುತ್ತಾರೆ. ಆದರೆ ನಾವು ಎಸ್ಸಿ ಜನಾಂಗದವರೆಂದು ಸವರ್ಣಿಯರು ಮನೆಯೊಳಗೆ ಪ್ರವೇಶ ನೀಡದ ಕಾರಣ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ಸಮೀಕ್ಷೆಯನ್ನೂ ನಡೆಸಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬಳಿಕ ತಾಪಂ ಇಓ ಲಕ್ಷ್ಮೀಪತಿ ಸಮಾಧಾನಪಡಿಸಿ ಸಮೀಕ್ಷಾ ಕಾರ್ಯ ನಡೆಸುವಂತೆ ತಿಳಿಸಿದರು. ಇಡೀ ರಾಜ್ಯದಲ್ಲೇ ಒಳಗೊಂದು ಹೊರಗೊಂದು ಎನ್ನುವ ಪರಿಸ್ಥಿತಿ ಇದೆ.ಯಾರು ಪ್ರೀತಿ ಸ್ನೇಹದಿಂದ ಯಾರೋ ಕರೆಯುತ್ತಾರೋ ಅವರ ಕೆಲಸ ಮಾಡಿ. ಸರ್ಕಾರದ ಕೆಲಸ ಕಷ್ಟಪಟ್ಟು ಮಾಡಿ ಎಂದು ಕಿವಿಮಾತು ಹೇಳಿದರು.