ಕಟ್ಟಡ ಕಾರ್ಮಿಕರಿಗಾಗಿ Mobile Clinic : 3 ಜಿಲ್ಲೆಗಳಲ್ಲಿ ‘ಶ್ರಮಿಕ ಸಂಜೀವಿನಿ’ ಜಾರಿ

By Kannadaprabha NewsFirst Published Dec 28, 2021, 8:50 AM IST
Highlights
  • ಕಟ್ಟಡ ಕಾರ್ಮಿಕರಿಗಾಗಿ ಸಂಚಾರಿ ಕ್ಲಿನಿಕ್‌
  •  ರಾಜ್ಯ ಆವೃತ್ತಿಗೆ ಕಡ್ಡಾಯ ಬಳಸಲು ಸೂಚನೆಯಿದೆ
  •  ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ‘ಶ್ರಮಿಕ ಸಂಜೀವಿನಿ’ ಜಾರಿಗೆ ಸಿದ್ಧತೆ

 ಬೆಂಗಳೂರು (ಡಿ.28):  ಕಟ್ಟಡ ನಿರ್ಮಾಣ ಕಾರ್ಮಿಕರು (Labours)  ಮತ್ತು ಅವರ ಅವಲಂಬಿತರ ಸ್ವಾಸ್ಥ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಕಾರ್ಮಿಕ ಇಲಾಖೆಯು ‘ಶ್ರಮಿಕ ಸಂಜೀವಿನಿ’ ಯೋಜನೆ ಜಾರಿಗೆ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿದ್ದು, ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಮುಂದಾಗಿದೆ.  ಶ್ರಮಿಕರು ಇರುವೆಡೆಗೆ ತೆರಳಿ ಅವರ ಆರೋಗ್ಯ (Health) ಪರೀಕ್ಷಿಸಿ ಅಗತ್ಯ ಸಲಹೆ- ಸೂಚನೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಸಿದ್ಧಗೊಂಡಿರುವ ಸಂಚಾರಿ ಕ್ಲಿನಿಕ್‌ಗಳು (Mobile Clinic) ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಅಣಿಗೊಂಡಿರುವುದು ವಿಶೇಷ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ನಿಗದಿತ ಅವಧಿಯಲ್ಲಿ ನಿಗದಿತ ಪ್ರದೇಶಗಳಿಗೆ ಭೇಟಿ ನೀಡಿ ತಂಗಲಿರುವ ಈ ಸಂಚಾರಿ ಕ್ಲಿನಿಕ್‌ ಸೇವೆಯನ್ನು ಆರಂಭದಲ್ಲಿ ಬೆಳಗಾವಿ (Belagavi)  ವಿಭಾಗದ ಬೆಳಗಾವಿ, ಧಾರವಾಡ (Dharwad)  ಮತ್ತು ಉತ್ತರ ಕನ್ನಡ (Uttara Kannada)  ಜಿಲ್ಲೆಗಳಲ್ಲಿ ಜಾರಿಗೆ ಕಾರ್ಮಿಕ ಇಲಾಖೆ ಸಿದ್ಧತೆ ನಡೆಸಿದೆ.

ಯಾವ ಸೇವೆ?:  ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆಯನ್ನು (Free Health Service) ನೀಡಲಿದೆ. ಪ್ರತಿ ಸಂಚಾರಿ ಕ್ಲಿನಿಕ್‌ಗಳು ಓರ್ವ ವೈದ್ಯ, ನರ್ಸ್‌, ಫಾರ್ಮಸಿಸ್ಟ್‌, ಲ್ಯಾಬ್‌ ಟೆಕ್ನಿಷಿಯನ್‌, ಎಎನ್‌ಎಂ, ಚಾಲಕ ಮತ್ತು ಸಹಾಯಕ ಸಿಬ್ಬಂದಿಯನ್ನು ಹೊಂದಿರಲಿದೆ. ಪ್ರಥಮ ಚಿಕಿತ್ಸಾ ಸೇವೆಗಳು, ಪ್ರಯೋಗಾಲಯ ಪರೀಕ್ಷಾ ಸೇವೆಗಳು, ಕೋವಿಡ್‌ (Covid)  ಪರೀಕ್ಷಾ ಸೇವೆಗಳು, ಪ್ರಸವ ಪೂರ್ವ ಮತ್ತು ನಂತರ ಸೇವೆಗಳು, ಚುಚ್ಚು ಮದ್ದು ಸೇವೆಗಳು ಸೇರಿದಂತೆ ಇತರೆ ನಿರ್ದೇಶಿತ ಆರೋಗ್ಯ (health)  ಸೇವೆಗಳು ಸ್ಥಳದಲ್ಲಿಯೇ ದೊರಕಲಿವೆ.

ಶ್ರಮಿಕ ವರ್ಗ ಮತ್ತು ಅವರ ಕುಟುಂಬ ವರ್ಗದ ಆರೋಗ್ಯ ಸೇವೆ ಒದಗಿಸಲು ಮೊಬೈಲ್‌ (Mobile)  ಕ್ಲಿನಿಕ್‌ಗಳಲ್ಲಿ ಅತ್ಯಾಧುನಿಕ ಸವಲತ್ತುಗಳನ್ನು ನೀಡಲು ಇಲಾಖೆ ಆದ್ಯತೆ ನೀಡಿದೆ. ಆಧುನಿಕ  ಸ್ಟ್ರೆಚರ್, ಬೆಡ್‌, ಆಕ್ಷಿಜನ್‌, ಇಸಿಜಿ  ಸೌಲಭ್ಯ, ಅವಶ್ಯಕ ವೈದ್ಯಕೀಯ ಪರಿಕರಗಳು, ಸಿಬ್ಬಂದಿಗೆ ಅಸನ ವ್ಯವಸ್ಥೆ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಹೊಂದಿರಲಿದೆ. ಸಂಚಾರಿ ಆರೋಗ್ಯ ಕ್ಲಿನಿಕ್‌ಗಳ ಸೇವೆ ಕುರಿತು ಇಲಾಖೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಲು ಉದ್ದೇಶಿಸಿದೆ. ಚಿಕಿತ್ಸೆ ಬರುವ ಪ್ರತಿ ಕಾರ್ಮಿಕನಿಗೆ ಕ್ರಮ ಸಂಖ್ಯೆ ನೀಡಿ ಪ್ರತ್ಯೇಕ ಒಪಿಡಿ ದಾಖಲೆ ನಿರ್ವಹಣೆ, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಔಷಧೋಪಚಾರಗಳನ್ನು ಒದಗಿಸಲಿದೆ.

ಮಹತ್ವಾಕಾಂಕ್ಷಿ ಯೋಜನೆ

‘ಶ್ರಮಿಕ ಸಂಜೀವಿನಿ’ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ದಿನನಿತ್ಯದ ಬಿಡುವಿಲ್ಲದ ಕೆಲಸದ ನಡುವೆ ಶ್ರಮಿಕ ವರ್ಗ ಇದ್ದಲ್ಲಿಯೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಎಂಬುದೇ ಈ ಯೋಜನೆಯ ಹಿಂದಿನ ಮಹದುದ್ದೇಶ.

-ಶಿವರಾಂ ಹೆಬ್ಬಾರ್‌, ಕಾರ್ಮಿಕ ಸಚಿವ

ತಂತ್ರಜ್ಞಾನದ ಮೂಲಕ ಆರೋಗ್ಯ ಸೇವೆ :    ಸಮರ್ಥ ತಂತ್ರಜ್ಞಾನಗಳನ್ನು (Technology ) ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕ ಮತ್ತು ಪ್ರಾಥಮಿಕ ಆರೋಗ್ಯ  ಸೇವೆಗಳನ್ನು ಆಯುಷ್ (AYUSH) ಪದ್ಧತಿಯ ಮುಖಾಂತರ ಜನರಿಗೆ ತಲುಪಿಸಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. `ಆಯುಷ್ ಪದ್ಧತಿಯ ಮೂಲಕ ಸಾರ್ವಜನಿಕ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ಪೂರೈಕೆ’ ಕುರಿತು ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ `ಜಿಜ್ಞಾಸಾ’ದಲ್ಲಿ (Jignasa 2021 International Conference) ಭಾಗವಹಿಸಿ ಮಾತನಾಡಿದರು. 

ಕೋವಿಡ್ 9Covid) ನಂತರದ ಪರಿಸ್ಥಿತಿಯು ಜಗತ್ತನ್ನು ಭೌತಿಕವಾಗಿ ದೂರವಿಟ್ಟಿದ್ದು, ಎಲ್ಲವೂ ವರ್ಚುಯಲ್ ಆಗಿವೆ. ಆದರೆ, ಈ ರೂಪವು ಹೆಚ್ಚು ಪರಿಣಾಮಕಾರಿ ಎನ್ನುವುದು ಕೂಡ ಈಗ ಸಾಬೀತಾಗಿದೆ. ಸಮಸ್ಯೆಗಳಿಗೆ ಹೆದರದೆ ನಾವು ಅವುಗಳನ್ನು ಎದುರಿಸಿ, ಸರಿಯಾದ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಹೇಳಿದರು.  ಆಯುಷ್ ಪದ್ಧತಿಯಲ್ಲಿನ ಚಿಕಿತ್ಸೆಗಳ ಮೂಲಕ ಮನುಷ್ಯನ ಆರೋಗ್ಯವನ್ನು ಹೇಗೆ ಪರಿಪೂರ್ಣವಾಗಿ ಕಾಪಾಡಬಹುದು ಎನ್ನುವುದು ನಮ್ಮ ಪ್ರಾಚೀನ ವಿಜ್ಞಾನದಲ್ಲಿ ಇದೆ. ಈಗ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ಸಮಗ್ರ ಬೆಳವಣಿಗೆಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸೂಚಿಸಿದರು. 

ತಂತ್ರಜ್ಞಾನದ ಮೂಲಕ ನಾವು ಇಡೀ ಜಗತ್ತನ್ನು ತಲುಪಬಹುದು. ಇದರಲ್ಲಿ ಮುಂಚೂಣಿಯಲ್ಲಿರುವುದೇ ಕರ್ನಾಟಕ ರಾಜ್ಯದ ಮತ್ತು ಬೆಂಗಳೂರಿನ ಶಕ್ತಿಯಾಗಿದೆ. ಆಯುಷ್ ಪದ್ಧತಿಯ ಮೂಲಕ ಇಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಬೇಕು ಎಂದು ಸಚಿವರು ನುಡಿದರು. 

click me!