Ration Card ರದ್ದತಿಯಿಂದ 249 ಕೋಟಿ ರು. ಉಳಿತಾಯ

By Kannadaprabha News  |  First Published Dec 28, 2021, 7:26 AM IST
  •  ಪಡಿತರ ಚೀಟಿ ರದ್ದತಿಯಿಂದ 249 ಕೋಟಿ ರು. ಉಳಿತಾಯ
  •  ಅಕ್ರಮವಾಗಿ ಪಡೆದಿದ್ದ 4.13 ಲಕ್ಷ ರೇಷನ್‌ ಕಾರ್ಡ್‌ ರದ್ದು
  • ಪ್ರತಿ ತಿಂಗಳೂ 82.71 ಲಕ್ಷ ಕೇಜಿ ಅಕ್ಕಿ ಸೋರಿಕೆಗೆ ತಡೆ
     

ವರದಿ :  ಸಂಪತ್‌ ತರೀಕೆರೆ

 ಬೆಂಗಳೂರು (ಡಿ.28):  ಅಕ್ರಮವಾಗಿ ಪಡೆದಿದ್ದ 4,13,571 ಅಂತ್ಯೋದಯ ಮತ್ತು ಬಿಪಿಎಲ್‌ (BPL)  ಪಡಿತರ ಚೀಟಿಗಳನ್ನು (Ration Card) ಆಹಾರ ಇಲಾಖೆ ರದ್ದುಪಡಿಸಿದ್ದರಿಂದ ಸರ್ಕಾರಕ್ಕೆ ಪ್ರತಿ ವರ್ಷ 249 ಕೋಟಿ ರು. ಉಳಿತಾಯವಾಗಲಿದೆ.  ಬಡತನ ರೇಖೆಗಿಂತ  ಕೆಳಗಿನವರೆಂದು ಸುಳ್ಳು ದಾಖಲೆ ನೀಡಿ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ತೆರಿಗೆ ಪಾವತಿದಾರರು, 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ (Land) ಹೊಂದಿರುವವರು ಮತ್ತು ಸರ್ಕಾರಿ ನೌಕರರು, ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರನ್ನು ಆಹಾರ ಇಲಾಖೆ ಪತ್ತೆ ಮಾಡಿ 4,13,571 ಕಾರ್ಡುಗಳನ್ನು ರದ್ದುಪಡಿಸಿದೆ. ಹೀಗಾಗಿ ಪ್ರತಿ ತಿಂಗಳು ಸೋರಿಕೆಯಾಗುತ್ತಿದ್ದ 82.71 ಲಕ್ಷ ಕೆ.ಜಿ. ಪಡಿತರ ಅಕ್ಕಿ ಮಿಕ್ಕಲಿದೆ.

Tap to resize

Latest Videos

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು (Paddy) ಖರೀದಿ ಮಾಡಿ ಅಕ್ಕಿಯಾಗಿ ಪರಿವರ್ತಿಸಿ ಪಡಿತರ ಆಹಾರ ಧಾನ್ಯವಾಗಿ ಹಂಚಿಕೆ ಮಾಡುತ್ತಿದೆ. ಭತ್ತ ಖರೀದಿಸಿ ಅಕ್ಕಿಯಾಗಿ (Rice) ಮಾಡಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರತಿ ಕೆಜಿಗೆ 25 ರು. ಖರ್ಚಾಗುತ್ತಿದೆ. ಒಂದು ಕುಟುಂಬಕ್ಕೆ (ನಾಲ್ಕು ಜನ ಸದಸ್ಯರಿರುವ ಕುಟುಂಬ) 5 ಕೆಜಿಯಂತೆ 20 ಕೆಜಿ ಅಕ್ಕಿಗೆ 500 ರು.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದೀಗ ಅಕ್ರಮವಾಗಿದ್ದ 4.14 ಲಕ್ಷ ಪಡಿತರ ಕಾರ್ಡುಗಳನ್ನು ರದ್ದುಪಡಿಸಿರುವುದರಿಂದ ತಿಂಗಳಿಗೆ 20,67,85,500 ರು.ನಂತೆ ಸರ್ಕಾರಕ್ಕೆ ಪ್ರತಿ ವರ್ಷ 248,14,26,500 ರು.ಗಳು (ಸುಮಾರು 249 ಕೋಟಿ ರು.) ಉಳಿತಾಯವಾಗಲಿದೆ.

25 ಕೋಟಿ ರು. ಹೆಚ್ಚುವರಿ ಹೊರೆ:

ಕೇಂದ್ರ ಸರ್ಕಾರ (Govt Of India)  ಯೂನಿಟ್‌ ಆಧಾರದಲ್ಲಿ ರಾಜ್ಯದ 4.04 ಕೋಟಿ ಜನರಿಗೆ ಮಾತ್ರ ಆಹಾರ ಧಾನ್ಯಗಳನ್ನು ಕೊಡುತ್ತಿದೆ. ಆದರೆ ರಾಜ್ಯ ಸರ್ಕಾರ ಬಿಪಿಎಲ್‌, ಅಂತ್ಯೋದಯ ಫಲಾನುಭವಿಗಳಾದ 4.18 ಕೋಟಿ ಜನ ಸಂಖ್ಯೆಗೆ ಆಹಾರ ಧಾನ್ಯ ಹಂಚಿಕೆ ಮಾಡುತ್ತಿದೆ. ಅಂದರೆ ಕೇಂದ್ರ ನಿಗದಿಪಡಿಸಿದ್ದಕ್ಕಿಂತ 14 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಸ್ವಂತ ಖರ್ಚಿನಲ್ಲಿ ಪಡಿತರ ವಿತರಣೆ ಮಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 25 ಕೋಟಿ ರು.ಗಳಿಗೂ ಅಧಿಕ ಹೊರೆ ಬೀಳುತ್ತಿದೆ.

ರಾಜ್ಯದ 4.18 ಕೋಟಿ ಜನರಿಗೆ ಮಾತ್ರ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 3 ರು.ಗಳಂತೆ ಸಬ್ಸಿಡಿ ರೂಪದಲ್ಲಿ ಆಹಾರ ಧಾನ್ಯ ವಿತರಿಸುತ್ತಿದೆ. ಉಳಿದಂತೆ ಹೆಚ್ಚುವರಿಗೆ ಜನರಿಗೆ ಪ್ರತಿ ಕೆಜಿಗೆ 25 ರು.ನಂತೆಗೆ ಅಕ್ಕಿ ಕೊಡುತ್ತಿದೆ. ಈ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಅಕ್ರಮ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದರಿಂದ ಕೋಟ್ಯಂತರ ರು.ಗಳು ಉಳಿಕೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಂಗಳಿಗೆ 6.58 ಕೋಟಿ ರು. ಉಳಿತಾಯ

ಫಲಾನುಭವಿ ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಅಕ್ರಮವಾಗಿ ಪಡಿತರ ಆಹಾರ (Food) ಧಾನ್ಯ ಪಡೆಯುತ್ತಿದ್ದ ಪ್ರಕರಣಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪತ್ತೆ ಮಾಡಿದೆ. 5.25 ಲಕ್ಷ ಮಂದಿ ಫಲಾನುಭವಿಗಳು ಮೃತಪಟ್ಟಿದ್ದರೂ ಲೆಕ್ಕಕ್ಕೇ ಸಿಕ್ಕಿರಲಿಲ್ಲ. ಪ್ರಸ್ತುತ ಇಲಾಖೆ ಮೃತರ ಅಂಕಿಸಂಖ್ಯೆ ಪತ್ತೆಯಾಗಿದ್ದರಿಂದ ತಿಂಗಳಿಗೆ 26,29,025 ಕೆಜಿ ಪಡಿತರ ಆಹಾರ ಧಾನ್ಯ ಸೇರಿದಂತೆ 6.58 ಕೋಟಿ ರು.ಪ್ರತಿ ತಿಂಗಳು ಉಳಿತಾಯವಾಗಲಿದೆ ಎಂದು ಆಹಾರ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ್‌ ಅವರು  ಮಾಹಿತಿ ನೀಡಿದ್ದಾರೆ.

  •  ಪಡಿತರ ಚೀಟಿ ರದ್ದತಿಯಿಂದ 249 ಕೋಟಿ ರು. ಉಳಿತಾಯ
  •  ಅಕ್ರಮವಾಗಿ ಪಡೆದಿದ್ದ 4.13 ಲಕ್ಷ ರೇಷನ್‌ ಕಾರ್ಡ್‌ ರದ್ದು
  • ಪ್ರತಿ ತಿಂಗಳೂ 82.71 ಲಕ್ಷ ಕೇಜಿ ಅಕ್ಕಿ ಸೋರಿಕೆಗೆ ತಡೆ
click me!