ವಕ್ಫ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಎಂಎಲ್‌ಸಿ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ರಾಜಕೀಯ ಉದ್ದೇಶದಿಂದ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಮಾತನಾಡಿದ್ದು, ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಧಾರವಾಡ (ಏ.13): ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎಂಎಲ್‌ಸಿ ಸಲೀಂ ಅಹ್ಮದ್ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ವಿರೋಧಕ್ಕೆ ಮುಫ್ತಿ ಮೊಹಮ್ಮದ್ ಸಯೀದ್ ಅಭಿನಂದನೆ ಸೂಚಿಸಿದ್ದಾರೆ. 1954ರಲ್ಲಿ ಜಾರಿಗೆ ಬಂದ ವಕ್ಫ್ ಕಾಯ್ದೆ 1995ರಲ್ಲಿ ತಿದ್ದುಪಡಿಯಾಗಿತ್ತು. ಆದರೆ, ಇದೀಗ ಬಿಜೆಪಿ ರಾಜಕೀಯ ಉದ್ದೇಶದಿಂದ ಬಲವಂತವಾಗಿ ತಿದ್ದುಪಡಿ ಮಾಡಿ ಬಿಲ್ ಪಾಸ್ ಮಾಡಿದೆ ಎಂದು ಸಲೀಂ ಆರೋಪಿಸಿದ್ದಾರೆ.
'ನಮ್ಮ ರಾಜ್ಯದಲ್ಲೂ ಈ ತಿದ್ದುಪಡಿ ವಿರುದ್ಧ ಬಿಲ್ ಪಾಸ್ ಮಾಡಿದ್ದೇವೆ. ಮುಂದೆಯೂ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾಯ್ದೆ ಜಾರಿ ಬಳಿಕ ದೇಶದಾದ್ಯಂತ ಅನೇಕರು ಈ ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬಂಗಾಳ ಹೊಸ ಕಾಶ್ಮೀರವೇ? 'ದಿ ಕಾಶ್ಮೀರ್ ಫೈಲ್' ನಿರ್ದೇಶಕ ಸ್ಫೋಟಕ ಹೇಳಿಕೆ!
ಜಾತಿಗಣತಿ ವರದಿ ಬಗ್ಗೆ ಹೇಳಿದ್ದೇನು?
ಜಾತಿಗಣತಿ ವರದಿಯ ಬಗ್ಗೆ ಮಾತನಾಡಿದ ಸಲೀಂ ಅಹ್ಮದ್, 'ಸುಮಾರು 10 ವರ್ಷಗಳ ಹಿಂದೆ ಸರ್ವೆ ನಡೆಸಲಾಗಿತ್ತು. ಈಗ ಕ್ಯಾಬಿನೆಟ್‌ನಲ್ಲಿ ವರದಿ ಮಂಡಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಓದಲಾಗುವುದು. ಏಪ್ರಿಲ್ 17ರಂದು ಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕಾಂಗ್ರೆಸ್‌ನ ಪ್ರಣಾಳಿಕೆಯಂತೆ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್‌ನಲ್ಲಿ ವರದಿಗೆ ವಿರೋಧವಿದೆ ಎಂಬ ಮಾತು ಸತ್ಯವಲ್ಲ. ಸಚಿವರಿಗೆ ವರದಿ ನೀಡಲಾಗಿದ್ದು, ಚರ್ಚೆಯ ನಂತರ ವಿಧಾನ ಪರಿಷತ್‌ನಲ್ಲೂ ಮಂಡಿಸಲಾಗುವುದು. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಮುರ್ಷಿದಾಬಾದ್: ಭುಗಿಲೆದ್ದ ಹಿಂಸಾಚಾರ, ಬಿಎಸ್‌ಎಫ್ ಮೇಲೆಯೇ ಗುಂಡಿನ ದಾಳಿ!
ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ನ್ಯಾಯಯುತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಲೀಂ ಅಹ್ಮದ್ ಭರವಸೆ ನೀಡಿದ್ದಾರೆ.