
ತುಮಕೂರು (ಏ.13): ಜಾತಿಗಣತಿ ವರದಿ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಪಟೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ವರದಿ ಸಂಪುಟದಲ್ಲಿ ಮಂಡನೆಯಾಗಿದ್ದು, ಇದರ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ವರದಿಯನ್ನು ಸಂಪೂರ್ಣ ಓದಿದ ಬಳಿಕವೇ ಯಾವುದೇ ಕಾಮೆಂಟ್ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ, ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೇವಲ ಜಾತಿಗಣತಿ ವರದಿಯ ವಿಷಯವನ್ನೇ ಚರ್ಚಿಸಲಾಗುವುದು.
ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು. ಆದರೆ, ಸಿಎಂ ಸಿದ್ದರಾಮಯ್ಯ ಅವರು ವರದಿಯ 95% ಸರಿಯಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ವರದಿ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಜಾತಿಗಣತಿಗೆ ಸರ್ಕಾರ 168 ಕೋಟಿ ರೂ. ಖರ್ಚು ಮಾಡಿದ್ದು, ಇದಕ್ಕೆ ಸರಿಯೋ ತಪ್ಪೋ ಎಂಬ ತೀರ್ಮಾನವಾಗಬೇಕು ಎಂದಿದ್ದಾರೆ. ವರದಿಯನ್ನು 1 ಕೋಟಿ 37 ಲಕ್ಷ ಕುಟುಂಬಗಳಿಗೆ ಭೇಟಿ ನೀಡಿ, ಸಹಿ ಸಂಗ್ರಹಿಸಿ ತಯಾರಿಸಲಾಗಿದೆ. ಯಾರಿಗಾದರೂ ಅನುಮಾನವಿದ್ದರೆ, ಬ್ಯಾಕ್‌ವರ್ಡ್ ಕ್ಲಾಸ್ ಕಮಿಷನ್ ಕಚೇರಿಯಲ್ಲಿ ವಿವರಗಳನ್ನು ಪರಿಶೀಲಿಸಬಹುದು ಎಂದರು. ಇನ್ನು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿಲ್ಲ ಎಂಬ ಸಿದ್ದಲಿಂಗ ಶ್ರೀ ಹೇಳಿಕೆಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ವಿರೋಧಕ್ಕೆ ಪ್ರತಿಕ್ರಿಯೆ:
ಬಿಜೆಪಿ ಈ ವರದಿಯನ್ನು ವಿರೋಧಿಸುತ್ತಿದ್ದರೂ, ಇದು 2015 ರಿಂದ ನಡೆದ ಪ್ರಕ್ರಿಯೆಯಾಗಿದ್ದು, ಸರ್ಕಾರದ ಉದ್ದೇಶ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಹಿಂದುಳಿದವರನ್ನು ಮುಂದೆ ತರುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂ ಜಾತಿಗಳ ವಿಚಾರ:
ಮುಸ್ಲಿಂ ಜಾತಿಗಳ ಸಂಖ್ಯೆ ಹೆಚ್ಚಿದೆ ಎಂಬ ವಿಚಾರವನ್ನು ತಳ್ಳಿಹಾಕಿರುವ ಪರಮೇಶ್ವರ್, ವರದಿಯನ್ನು ಬ್ಯಾಕ್‌ವರ್ಡ್ ಕ್ಲಾಸ್ ಕಮಿಷನ್‌ಗೆ ನೀಡಿದ ರೆಫರೆನ್ಸ್ ಟರ್ಮ್ಸ್ ಪ್ರಕಾರವೇ ತಯಾರಿಸಲಾಗಿದೆ ಎಂದಿದ್ದಾರೆ.
ಮುಂದಿನ ನಡೆ ಏನು?
ಏಪ್ರಿಲ್ 17 ರ ಸಚಿವ ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ವಿವರವಾಗಿ ಚರ್ಚಿಸಿ, ಸರ್ಕಾರದ ಅಂತಿಮ ತೀರ್ಮಾನವನ್ನು ಘೋಷಿಸಲಾಗುವುದು. 'ವರದಿಯ ಉದ್ದೇಶವೇ ಸಮಾಜದ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಮತ್ತು ಸ್ಥಾನಮಾನ ಕಲ್ಪಿಸುವುದು. ಈ ಗುರಿ ಸಾಧನೆಯಾದರೆ ಸಾಕು' ಎಂದು ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ