
ಚಾಮರಾಜನಗರ: ಜನರು ಆ ನೀರೊಳಗೆ ನಡೀಬಹುದು, ಆದರೆ ಶಾಸಕ ರಿಂದ ಆಗಲ್ಲ! ಅರ್ಥ ಆಗಲಿಲ್ಲವಾ? ಚಾಮರಾಜನಗರದ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಕೇವಲ ಒಂದು ಅಡಿ ನೀರಿನಲ್ಲಿ ನಡೆಯದೇ ದೋಣಿಯಲ್ಲಿ ಪ್ರಯಾಣಿಸಿದ ವಿಡಿಯೋ ಈಗ ವೈರಲ್ ಆಗಿದ್ದು, ಮಹೇಶ್‌ರನ್ನು ಜನ ಟ್ರೋಲ್ ಮಾಡುತ್ತಿದ್ದಾರೆ. ಕೇವಲ ಒಂದುವರೆ ಅಡಿ ನೀರಿನಲ್ಲಿ ದೋಣಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ದೋಣಿಯನ್ನು ಗ್ರಾಮಸ್ಥರಿಂದ ತಳ್ಳಿಸಿಕೊಂಡು ಮಳೆ ಹಾನಿ ಪ್ರದೇಶವನ್ನು ಮಹೇಶ್ ಪರಿಶೀಲಿಸಿದ್ದಾರೆ. ದೋಣಿಯಿಂದ ಇಳಿಯದೆ ದೋಣಿಯೊಳಗೆ ಕುಳಿತು ಮಳೆ ಹಾನಿ ಪರಿಶೀಲಿಸಿದ ಶಾಸಕರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.
ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ಪ್ರವಾಹ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ. ಸುಮಾರು ದೂರ ದೋಣಿ ತಳ್ಳಿ ಸಿಕೊಂಡು ಬಳಿಕ ನೀರಿಗೆ ಮಹೇಶ್ ನೀರಿಗೆ ಇಳಿದಿದ್ದಾರೆ. ಗ್ರಾಮಸ್ಥರು ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ನಂತರ ಟ್ರೋಲ್ ಮಾಡಲಾಗುತ್ತಿದೆ. ಜನಸಾಮಾನ್ಯರ ಮಳೆಯೇ ಮುಳುಗಿಹೋಗಿದೆ, ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಕ್ಷೇತ್ರದ ಶಾಸಕ ಒಂದಡಿ ನೀರಲ್ಲಿ ಇಳಿಯಲೂ ಯೋಚನೆ ಮಾಡುತ್ತಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೆಪ್ಪಕ್ಕೆ ಹುಟ್ಟುಹಾಕಿ ಬೆಪ್ಪಾದ ರೇಣುಕಾಚಾರ್ಯ!
ನಗೆಪಾಟಲಿಗೀಡಾಗಿದ್ದ ರೇಣುಕಾಚಾರ್ಯ:
2019ರಲ್ಲಿ ರಾಜ್ಯ ಇದೇ ರೀತಿಯ ಭೀಕರ ಮಳೆಗೆ ಸಾಕ್ಷಿಯಾಗಿತ್ತು. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ರೇಣುಕಾಚಾರ್ಯ ಮಾಡಿದ್ದ ಪಬ್ಲಿಸಿಟಿ ಗಿಮಿಕ್ ಭಾರೀ ವೈರಲ್ ಆಗಿತ್ತು. ಈಗ ಎನ್ ಮಹೇಶ್ ಮಾಡಿದಂತೆಯೇ ಅಂದು ಮಾಜಿ ಸಚಿವ ರೇಣುಕಾಚಾರ್ಯ ಪಾದವೂ ಮುಳುಗದಷ್ಟು ನೀರಿನಲ್ಲಿ ತೆಪ್ಪಕ್ಕೆ ಹುಟ್ಟುಹಾಕಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು. ಇಡೀ ರಾಜ್ಯ ಅತೀವೃಷ್ಟಿಯಿಂದ ತತ್ತರಿಸುತ್ತಿದ್ದರೆ ರಾಜಕೀಯ ನಾಯಕರು ಕೇವಲ ಪಬ್ಲಿಸಿಟಿಗಾಗಿ ನಾಟಕ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!
ಹೊನ್ನಾಳಿ ತಾಲೂಕಿನ ಹಳ್ಳಿಯೊಂದರಲ್ಲಿ ರೇಣುಕಾಚಾರ್ಯ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಭೇಟಿ ನೀಡಿದ್ದರು. ಆದರೆ ಈ ವೇಳೆಗಾಗಲೇ ನೀರು ಕಡಿಮೆಯಾಗಿತ್ತು. ಹೇಗಿದ್ದರೂ ಭೇಟಿ ಕೊಟ್ಟಾಗಿದೆ. ಸಿಕ್ಕ ಪಬ್ಲಿಸಿಟಿ ಅವಕಾಶವನ್ನು ಬಳಕೆ ಮಾಡಿಕೊಳ್ಳೋಣ ಎಂದು ರೇಣುಕಾಚಾರ್ಯ ತೆಪ್ಪಕ್ಕೆ ಹುಟ್ಟು ಹಾಕಿದರು. ಆದರೆ ವಿಡಿಯೋದಲ್ಲಿ ಅವರ ಹಿಂದೆ ಮುಂದೆ ಜನ ಅರಾಮಾಗಿ ನಡೆಯುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿತ್ತು. ರಾಜ್ಯದ ಜನರ ಮೇಲೆ ಕೊಂಚವೂ ಚಿಂತೆಯಿಲ್ಲ, ನಾಟಕ ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗೋದಿಲ್ಲ: ಯಾರಿಗೆ ಅವಾಜ್ ?
ಪಬ್ಲಿಸಿಟಿಗಾಗಿ ರೇಣುಕಾಚಾರ್ಯ ಈ ರೀತಿಯ ನಾಟಕಗಳನ್ನು ಹಲವು ಬಾರಿ ಮಾಡಿ ಮುಜುಗರಕ್ಕೆ ಒಳಗಾಗಿದ್ದಾರೆ. ಆರು ಚಕ್ರದ ಬಸ್ ಚಲಿಸಲು ಡ್ರೈವಿಂಗ್ ಲೈಸನ್ಸ್ ಇಲ್ಲದಿದ್ದರೂ ಎರಡು ಬಾರಿ ಉದ್ಘಾಟನೆಯ ನೆಪದಲ್ಲಿ ರೇಣುಕಾಚಾರ್ಯ ಬಸ್ ಚಲಿಸಿದ್ದರು. ಅದೃಷ್ಟವಶಾತ್ ಯಾರಿಗೂ ಏನೂ ಆಗಲಿಲ್ಲ. ಅದಾದ ನಂತರ ಜಾತ್ರಾ ಮಹೋತ್ಸವದಲ್ಲಿ ಹೋರಿಯಿಂದ ಕಡೇ ಕ್ಷಣದಲ್ಲಿ ರೇಣುಕಾಚಾರ್ಯ ಬಚಾವಾಗಿದ್ದರು. ಅದಾಗಿ ಕೆಲವು ದಿನಗಳಲ್ಲಿ ಮತ್ತೊಂದು ಜಾತ್ರೆಯಲ್ಲೂ ಹೋರಿ ಗುದ್ದಲು ಬಂದಿತ್ತು. ಕೂದಲೆಳೆಯ ಅಂತರದಲ್ಲಿ ರೇಣುಕಾಚಾರ್ಯ ತಪ್ಪಿಸಿಕೊಂಡಿದ್ದರು. ಇದಾದ ನಂತರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಹುಷಾರಾಗಿರುವಂತೆ ರೇಣುಕಾಚಾರ್ಯಗೆ ಸೂಚನೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ