ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭಾನುವಾರ 2ನೇ ಬಾರಿಗೆ ಲೋಕಾರ್ಪಣೆಗೊಳಿಸುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಸೆಡ್ಡು ಹೊಡೆದಿದ್ದಾರೆ.
ಬೆಳಗಾವಿ (ಮಾ.06): ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭಾನುವಾರ 2ನೇ ಬಾರಿಗೆ ಲೋಕಾರ್ಪಣೆಗೊಳಿಸುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಸೆಡ್ಡು ಹೊಡೆದಿದ್ದಾರೆ. ಮಾ.2 ರಂದು ಸಿಎಂ ಬೊಮ್ಮಾಯಿ ಈ ಪ್ರತಿಮೆ ಲೋಕಾರ್ಪಣೆ ಮಾಡಿದ್ದರು. ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಶನಿವಾರದಿಂದಲೇ ಪ್ರಾಣ ಪ್ರತಿಷ್ಠಾಪನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು.
ಭಾನುವಾರ ಬೆಳಗ್ಗೆ ಹೆಬ್ಬಾಳಕರ ಹಾಗೂ ಇತರ ನಾಯಕರು ಬೃಹತ್ ಮೆರವಣಿಗೆಯಲ್ಲಿ ಸಾಗಿ ಬಂದರು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಶಿವಾಜಿ ವೇಷಧಾರಿ ಮಕ್ಕಳು ಮೆರವಣಿಗೆಗೆ ಮತ್ತಷ್ಟು ರಂಗು ತಂದರು. ಬಳಿಕ, ಪ್ರತಿಮೆ ಪಕ್ಕ ಸ್ಥಾಪಿಸಿರುವ 60 ಅಡಿ ಎತ್ತರದ ಎಲೆಕ್ಟ್ರಿಕ್ ಧ್ವಜಸ್ತಂಭಕ್ಕೆ ಪೂಜೆ ನೆರವೇರಿಸಲಾಯಿತು. ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ, ಮಹಾರಾಷ್ಟ್ರದ ಲಾತೂರ ಶಾಸಕ ಧೀರಜ್ ದೇಶಮುಖ, ಪ್ರತಿಮೆ ಅನಾವರಣಗೊಳಿಸಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ: ರಮೇಶ್ ಜಾರಕಿಹೊಳಿ
ಹೆಬ್ಬಾಳಕರ ವಿರುದ್ಧ 2 ಕೇಸ್: ಸಿಎಂಗೆ ಸಡ್ಡು ಹೊಡೆದು ಶಿವಾಜಿ ಪ್ರತಿಮೆ ಉದ್ಘಾಟಿಸಿದ ಲಕ್ಷ್ಮೇ ಹೆಬ್ಬಾಳ್ಕರ್ ಅವರ ಮೇಲೆ 2 ಪ್ರಕರಣ ದಾಖಲಿಸಲಾಗಿದೆ. ಪ್ರತಿಮೆ ಸ್ಥಾಪಿಸಿರುವ ಸ್ಥಳವಾದ ರಾಜಹಂಸಗಡ ಕೋಟೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಕೋಟೆ ಅಭಿವೃದ್ಧಿ ವೇಳೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ, ಪುರಾತತ್ವ ಇಲಾಖೆ ಲಕ್ಷ್ಮೇ ಹೆಬ್ಬಾಳಕರಗೆ ಈವರೆಗೆ ನಾಲ್ಕು ನೋಟಿಸ್ ನೀಡಿದೆ. ಅಲ್ಲದೆ, ಈ ಸಂಬಂಧ ಅವರ ವಿರುದ್ಧ 2 ಪ್ರಕರಣ ದಾಖಲಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಬ್ಬಾಳಕರ, ನನಗೆ ಕೊಡಬಾರದಷ್ಟುಕಷ್ಟಕೊಡುತ್ತಿದ್ದಾರೆ. ಪ್ರತಿಮೆ ಸ್ಥಾಪನೆ ಉದ್ದೇಶದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ನನ್ನ ಮೇಲೆ 2 ಪ್ರಕರಣ ಹಾಕಿದೆ. ಆದರೆ, ಧೈರ್ಯಕ್ಕೆ ಹೆಬ್ಬಾಳಕರ ಕಡಿಮೆ ಇಲ್ಲ. ಇವತ್ತು ನಾನು ಭಾವುಕಳಾಗಿದ್ದೇನೆ. ಶಿವಾಜಿ ಮಹಾರಾಜರು ಮಹಿಳೆಯರಿಗೆ ಸಾಕಷ್ಟುಗೌರವ ಕೊಡುತ್ತಿದ್ದರು. ಆದರೆ, ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾರೆ ಎಂದರು. ಗೋಕಾಕ ಶಾಸಕರು, ತಾವು ಶಿವ ಭಕ್ತರು ಎನ್ನುತ್ತಾರೆ. ಅವರು ಶಿವ ಭಕ್ತರಲ್ಲ, ಡೋಂಗಿ ಶಿವ ಭಕ್ತರು ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಧೂಳಿಪಟ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
ಜೈ ಮಹಾರಾಷ್ಟ್ರ ಘೋಷಣೆ: ರಾಜಹಂಸಗಡದಲ್ಲಿ ಮರಾಠಿ ಭಾಷಿಕರ ಗಮನ ಸೆಳೆಯಲು ಮಹಾರಾಷ್ಟ್ರದ ಶಾಸಕ ಧೀರಜ್ ದೇಶಮುಖ ಹಾಗೂ ಸತೇಜ್ ಪಾಟೀಲ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು. ಬಳಿಕ, ತಮ್ಮ ತಪ್ಪಿನ ಅರಿವಾಗಿ ಜೈ ಶಿವಾಜಿ, ಜೈ ಕರ್ನಾಟಕ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ಬಾಳಕರ, ಮಾ.2ರಂದು ಪ್ರತಿಮೆ ಕಾರ್ಯ ಇನ್ನೂ ಬಾಕಿ ಇರುವಾಗಲೇ ಗೋಕಾಕ ಶಾಸಕರು ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಅವರು ತರಾತುರಿಯಲ್ಲಿ ಮುಖ್ಯಮಂತ್ರಿಯನ್ನು ಕರೆಸಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಿಸಿದ್ದಾರೆ. ಮೂರ್ತಿಗೆ ಬಣ್ಣ ಹಚ್ಚಲು ತಂದ ಸಾಮಗ್ರಿಗಳು ಮೂರ್ತಿಯ ಪಕ್ಕದಲ್ಲೇ ಇದ್ದರೂ ಉದ್ಘಾಟನೆ ಮಾಡಿಸಿ, ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಾರೆ ಎಂದರು.