ಇಂದು ಜಗತ್ತಿನೆಲ್ಲೆಡೆ ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿದೆ. ಯಾವ ಧರ್ಮ ಹಿಂಸೆಯನ್ನು ತಡೆಗಟ್ಟಬೇಕೋ, ಅದೇ ಧರ್ಮದ ಹೆಸರಿನಲ್ಲಿ ಹಿಂಸೆ, ಭಯೋತ್ಪಾದನೆ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಅವರ ಮನಃ ಪರಿವರ್ತನೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಬಾಳೆಹೊನ್ನೂರು (ಮಾ.05): ಇಂದು ಜಗತ್ತಿನೆಲ್ಲೆಡೆ ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿದೆ. ಯಾವ ಧರ್ಮ ಹಿಂಸೆಯನ್ನು ತಡೆಗಟ್ಟಬೇಕೋ, ಅದೇ ಧರ್ಮದ ಹೆಸರಿನಲ್ಲಿ ಹಿಂಸೆ, ಭಯೋತ್ಪಾದನೆ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಅವರ ಮನಃ ಪರಿವರ್ತನೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ರಂಭಾಪುರಿ ಪೀಠದಲ್ಲಿ ಭಾನುವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂಸೆಯೆಡೆಗೆ ವಾಲಿದವರು ಧರ್ಮದೆಡೆಗೆ ಪರಿವರ್ತನೆ ಆಗಬೇಕು. ಇದು ಧರ್ಮ, ಧರ್ಮಗುರುಗಳಿಂದ ಮಾತ್ರ ಸಾಧ್ಯ. ಧರ್ಮದಿಂದ ವಿಶ್ವ ಶಾಂತಿ ಅವಶ್ಯವಾಗಿ ಆಗಬೇಕು. ಸಮಾನ ಅವಕಾಶವಿರುವ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು. ಕಾಮ, ಕ್ರೋಧ, ಮೋಹ, ಮದ, ಮತ್ಸರಗಳ ಸಂಕೋಲೆಯಲ್ಲಿ ಸಿಕ್ಕಿರುವವನು ಮನುಷ್ಯ. ಇವುಗಳಿಂದ ಹೊರಬಂದು ಪ್ರೀತಿ, ಪ್ರೇಮ, ವಿಶ್ವಾಸದ ಮೂಲಕ ನ್ಯಾಯ, ನೀತಿ, ಧರ್ಮದ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಮಾನವನಾಗುವುದು ಸುಲಭದ ಮಾತಲ್ಲ. ಮಾನವನಿಗೆ, ದಯೆ. ಕರುಣೆ, ವಾತ್ಸಲ್ಯ ಹಾಗೂ ಇತರರ ನೋವನ್ನು ಪಡೆದುಕೊಳ್ಳುವ, ಸಹಾಯ ಮಾಡುವ ಪ್ರವೃತ್ತಿ ಇರಬೇಕು ಎಂದು ಹೇಳಿದರು.
undefined
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಧೂಳಿಪಟ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
ಆತ್ಮಸಾಕ್ಷಿಯಂತೆ ಯಾರು ನಡೆದುಕೊಳ್ಳುತ್ತಾರೋ ಅವರೇ ನಿಜವಾದ ಮಾನವ. ಹಲವು ಬಾರಿ ಆತ್ಮಸಾಕ್ಷಿಯೊಂದಿಗೆ ನಾವು ರಾಜಿ ಮಾಡುತ್ತೇವೆ. ಆತ್ಮಸಾಕ್ಷಿಯಾಗಿ ನಡೆಯುವುದೆಂದರೆ ಸತ್ಯದ ದಾರಿಯಲ್ಲಿ ನಡೆಯುವುದಾಗಿದೆ. ಇದು ಬಹಳ ಕಷ್ಟದ ಕೆಲಸ. ಈ ದಾರಿಯಲ್ಲಿ ನಡೆದವನು ಸಾಧಕನಾಗುತ್ತಾನೆ ಎಂದರು. ಒಂದು ಕಾಲದಲ್ಲಿ ಭಕ್ತರು ಮಠಗಳಿಗೆ ಬರಬೇಕಿತ್ತು. ಆದರೆ ಇದೀಗ ರಂಭಾಪುರಿ ಪೀಠವೇ ಭಕ್ತರ ಮನೆ ಬಾಗಿಲಿಗೆ ಹೋಗಿದೆ. ರಾಜ್ಯದ ಎಲ್ಲಾ ಗ್ರಾಮಗಳಿಗೆ ಜಗದ್ಗುರುಗಳು ಭೇಟಿ ನೀಡಿ ಪೂಜೆ ಸಲ್ಲಿಸಿ ಭಕ್ತರಿಗೆ ಧರ್ಮ ವಿಚಾರದ ಜಾಗೃತಿ ಗೊಳಿಸಿದ್ದರಿಂದ ನಿರಂತರವಾಗಿ ಧರ್ಮ ಜಾಗೃತಿ ಬೆಳೆಯುತ್ತಿದೆ.
ಉತ್ತರದಲ್ಲಿ ಕಾಶಿ, ದಕ್ಷಿಣದಲ್ಲಿ ರಂಭಾಪುರಿ ಪೀಠವಿದೆ. ರೇಣುಕಾಚಾರ್ಯರ ವಿಚಾರಧಾರೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಿದೆ. ಪಂಚಪೀಠಗಳು ರಾಜ್ಯದಲ್ಲಿ ಮಾತ್ರವಲ್ಲದೇ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಮಾಡಿರುವ ಸೇವೆ, ಭಕ್ತಿಯ ಬೀಜವನ್ನು ಎಲ್ಲರ ಮನದಾಳದಲ್ಲಿ ಬಿತ್ತಿ, ಸತ್ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಇವೆಲ್ಲವೂ ನಮ್ಮ ಇತಿಹಾಸ ಅಷ್ಟೇ ಅಲ್ಲ, ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಬಹಳಷ್ಟು ಜನ ಮಠ, ಮಾನ್ಯಗಳಿಗೆ ಅನುದಾನ ಏಕೆ ಕೊಡಬೇಕೆಂದು ಟೀಕೆ ಮಾಡುತ್ತಾರೆ. ಆದರೆ, ಟೀಕೆ ಮಾಡಿದವರು ಇಂದು ಮಠಗಳಿಗೆ ಭೇಟಿ ಕೊಟ್ಟಿದ್ದಾರೆ. ಚುನಾವಣೆ ಬಂದಾಗ ಮಠ, ಗುರುಗಳು ನೆನಪಾಗುತ್ತಾರೆ. ಆದರೆ ನಾವು ಹಾಗಲ್ಲ 365 ದಿನವೂ ಮಠ, ಪೀಠ, ಜಗದ್ಗುರುಗಳ ಬಗ್ಗೆ ವಿಶೇಷ ಗೌರವ ಹೊಂದಿದ್ದೇವೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಜಗತ್ತಿನ ಅತ್ಯಂತ ಶ್ರೀಮಂತ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಜನ ಸಮಾಧಾನ, ನೆಮ್ಮದಿ, ಶಾಂತಿಯಿಂದ ಇದ್ದಾರೆ. ಇದಕ್ಕೆ ಪ್ರಮುಖ ಕಾರಣ. ದೇವರಲ್ಲಿನ ನಂಬಿಕೆ, ಆಧ್ಯಾತ್ಮ ಕಾರಣವಾಗಿದೆ. ಇದರ ಮೂಲಕವಾಗಿ ಜನರ ಆಸ್ಮಿತೆ, ನಂಬಿಕೆಯನ್ನು ಹೆಚ್ಚು ಮಾಡಲಾಗಿದೆ. ಧಾರ್ಮಿಕ ಆಚರಣೆ ಪರಿಣಾಮ ಜನರು ಜಗತ್ತಿನ ಇತರ ದೇಶಗಳಿಗೆ ಹೋಲಿಸಿದಾಗ ಅತ್ಯಂತ ನೆಮ್ಮದಿಯಿಂದ ಇದ್ದಾರೆ ಎಂದರು.
ಜಗತ್ತಿನ ಅನೇಕ ದೇಶಗಳಲ್ಲಿ ಅಲ್ಲಿನ ಬಹಳಷ್ಟು ಜನರಿಗೆ ಮಾನಸಿಕ ಸಮಸ್ಯೆ ಹೆಚ್ಚಾಗಿದೆ. ಇದು ಯಾಕೆ ಆಗಿದೆ ಎಂದರೆ ಅಲ್ಲಿನ ಜೀವನ ಪದ್ಧತಿಯಲ್ಲಿ ಆಧ್ಯಾತ್ಮದ ಲವಲೇಶವೂ ಇಲ್ಲ. ಆಧ್ಯಾತ್ಮದ ಲವಲೇಶ ಇದ್ದಲ್ಲಿ ಸನಾತನ ಪದ್ಧತಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಕುಟುಂಬ, ಸಾಮಾಜಿಕ ಪದ್ಧತಿ ಇದೆ. ಧರ್ಮ ಎಂದರೆ ಜೀವನದ ದಾರಿ ಎಂದು ನಾವು ಹೇಳಿದ್ದೇವೆ. ಕಾಲಕಾಲಕ್ಕೆ ಧರ್ಮದ ವ್ಯಾಖ್ಯಾನಗಳನ್ನು ಒಪ್ಪಿಕೊಳ್ಳುವುದು ನಮ್ಮ ಸಿದ್ಧಾಂತವಾಗಿದೆ.
ಆಡಳಿತಗಾರನಿಗೆ ತಲೆ ತಣ್ಣಗಿರಬೇಕು, ಹೃದಯ ವಿಶಾಲವಾಗಿರಬೇಕು: ಸಿಎಂ ಬೊಮ್ಮಾಯಿ
ಕಾರ್ಯಕ್ರಮದಲ್ಲಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಸಿ.ಪಾಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಉಮಾ ಪ್ರಶಾಂತ್, ಯುವ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಡಾ.ಕೃಷ್ಣಾರೆಡ್ಡಿ, ಸಿ.ಮೃತ್ಯುಂಜಯಸ್ವಾಮಿ, ಪ್ರಶಾಂತ್ ರಿಪ್ಪನ್‌ಪೇಟೆ ಇದ್ದರು.