ನನ್ನ ಜೀವನದ ಅತಿ ಸಂತಸದ ಈ ದಿನವನ್ನು ನಾನು ನೋಡುತ್ತೇನೆ ಎನ್ನುವ ಭರವಸೆ ಖಂಡಿತ ನನಗೆ ಇರಲಿಲ್ಲ,ನನಗೆ ಈ ದಿನದ ಸಂಭ್ರಮವನ್ನು ಖುಷಿಯನ್ನು ಸಂತೋಷವನ್ನು ಆನಂದವನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ.
ಶಿವಮೊಗ್ಗ (ಜ.22): ನನ್ನ ಜೀವನದ ಅತಿ ಸಂತಸದ ಈ ದಿನವನ್ನು ನಾನು ನೋಡುತ್ತೇನೆ ಎನ್ನುವ ಭರವಸೆ ಖಂಡಿತ ನನಗೆ ಇರಲಿಲ್ಲ,ನನಗೆ ಈ ದಿನದ ಸಂಭ್ರಮವನ್ನು ಖುಷಿಯನ್ನು ಸಂತೋಷವನ್ನು ಆನಂದವನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ. ಈ ಪರಮಾನಂದದ ಕ್ಷಣಗಳನ್ನು ಹೇಳಲು ಶಬ್ಧಗಳು ಸಾಲುತ್ತಿಲ್ಲ, ನನ್ನ ಸಾರ್ವಜನಿಕ ಬದುಕು ಪ್ರಾರಂಬವಾದ ನಂತರದ ರಾಮಮಂದಿರ ಹೋರಾಟದ ಬಹುತೇಕ ಎಲ್ಲಾ ಹಂತದಲ್ಲೂ ತೊಡಗಿಸಿಕೊಂಡಿದ್ದೆ. 500 ವರ್ಷಗಳ ಹೋರಾಟ, ಲಕ್ಷಾಂತರ ಕಾರ್ಯಕರ್ತರ ತ್ಯಾಗ ಶ್ರಮ, ಸಾವಿರಾರು ಕಾರ್ಯಕರ್ತರ ಬಲಿದಾನದ ಫಲವನ್ನು ನಾನು ಬದುಕಿರುವಾಗಲೇ ನೋಡುತ್ತಿದ್ದೇನೆ ಎಂಬುದೇ ಲಕ್ಷಾಂತರ ರಾಮ ಭಕ್ತರಂತೆ ನನಗೂ ಅವಿಸ್ಮರಣೀಯ ವಿಚಾರ.
'ಕಟ್ಟುವೆವು ಕಟ್ಟುವೆವು ರಾಮ ಮಂದಿರ ಕಟ್ಟುವೆವು,; “ಕಟ್ಟುವೆವು ಕಟ್ಟುವೆವು ಮಂದಿರವಲ್ಲೇ ಕಟ್ಟುವೆವು”,”ರಾಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು “ಈ ತರದ ಘೋಷಣೆ ಕೂಗವಾಗಲೆಲ್ಲಾ ಒಮ್ಮೊಮ್ಮೆ ಇದು ಸಾಧ್ಯನಾ? ಎನಿಸುತ್ತಿತ್ತು ನಾವು ಭ್ರಮೆಗೊಳಾಗುತ್ತಿದ್ದೀವಾ ಭ್ರಮೆ ಹುಟ್ಟಿಸುತ್ತಿದ್ದೀವಾ ಎನಿಸಿದ್ದೂ ಇದೆ,ರಾಮ ಭಕ್ತರ ತ್ಯಾಗ, ಬಲಿದಾನಗಳು, ಕೋರ್ಟ್ ಕಛೇರಿಯ ಹೋರಾಟಗಳು, ರಥಯಾತ್ರೆ ಮೂಲಕ ಭಾರತವನ್ನು ಹೆಚ್ಚು ಬಾರಿ ಸುತ್ತಿ ಹಳ್ಳಿ ಹಳ್ಳಿಗಳಲ್ಲಿ ರಾಮ ಭಕ್ತರ ಭಕ್ತಿಯನ್ನು ಪರಾಕಾಷ್ಠೆಗೆ ತೆಗೆದುಕೊಂಡು ಹೋದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರ ಪರಿಶ್ರಮ, ದಿವಂಗತ ಅಶೋಕ ಸಿಂಘಾಲರಂತವರ ಬದುಕಿನ ಪೂರ್ಣ ಸಮರ್ಪಣೆ ಚಳವಳಿ ಸದಾ ಜೀವಂತವಾಗಿರುವಂತೆ ನೋಡಿಕೊಂಡಿದೆ, ಕಳೆದ 500 ವರ್ಷಗಳು ಎಂದರೆ ಹದಿನೈದಕ್ಕೂ ಹೆಚ್ಚು ತಲೆಮಾರುಗಳ ಕಾಲ ಈ ಹೋರಾಟವನ್ನು ಜೀವಂತವಾಗಿ ಇಡಲು ಶ್ರಮಿಸಿದ ಒಬ್ಬೊಬ್ಬ ವ್ಯಕ್ತಿಯ ಶ್ರಮದ ಒಟ್ಟು ಫಲ ಈ ದಿನ ನೋಡುತ್ತಿದ್ದೇವೆ.
2 ಕರಸೇವೆಗಳಲ್ಲಿ ತೀರ್ಥಹಳ್ಳಿಯಿಂದ ಸುಮಾರು ಇಪ್ಪತೈದು ಜನರ ತಂಡ ತೆರಳಿತ್ತು. ಪ್ರಥಮ ಬಾರಿ 1990ರಲ್ಲಿ ಹೋದಾಗ ಅಯೋಧ್ಯೆಯಿಂದ ಹತ್ತಾರು ಕಿ.ಮೀ ದೂರದಲ್ಲಿಯೇ ನಮ್ಮನ್ನು ತಡೆದು ಬಂಧಿಸಿ ಒಂದು ಕಾಡಿನಲ್ಲಿ ತೆಗೆದುಕೊಂಡು ಹೋಗಿ ನಿಮ್ಮನ್ನು ಬಿಡುಗಡೆ ಮಾಡಿದ್ದೇವೆ ಎಂದು ಅಧಿಕಾರಿ ಒಬ್ಬರು ಹೇಳಿದರು. ಇದರಿಂದ ಕೆರಳಿದ ನಮ್ಮೊಂದಿಗೆ ಇದ್ದ ಹಿರಿಯರಾದ ಪಿ.ವಿ.ಕೃಷ್ಣ ಭಟ್ಟರು ಅಧಿಕಾರಿಯ ದೌರ್ಜನ್ಯದ ವಿರುದ್ಧ ರೌದ್ರಾವತಾರ ತಾಳಿದನ್ನು ನೋಡಿದ ನನಗೆ ಪಿವಿಕೆಯವರ ಇನ್ನೊಂದು ಮುಖದ ಪರಿಚಯವಾಗಿತ್ತು, ಮಾರನೇ ದಿನ ಅಧಿಕಾರಿ ಕೃಷ್ಣ ಭಟ್ಟರ ವಾಗ್ಬಾಣಕ್ಕೆ ಉತ್ತರಿಸಲಾಗದೆ ನಮ್ಮನ್ನು ಬಿಡುಗಡೆ ಗೊಳಿಸಿದ. ಅದಲ್ಲದೇ ಆ ರಾತ್ರಿ ಆ ಕಾಡಿನಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾದಾಗ ಕಾಡಿನ ಸಮೀಪದ ಹಳ್ಳಿಯವರು ಸಾವಿರಾರು ಜನರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿ ಪ್ರೀತಿಯಿಂದ ಬೀಳ್ಕೊಟ್ಟ ರಾಮ ಭಕ್ತಿ ನಮಗೆ ಹೆಚ್ಚು ಸ್ಪೂರ್ತಿ ನೀಡಿತ್ತು,
ಎರಡನೇ ಬಾರಿ 1992ರ ಕರಸೇವೆಯಲ್ಲಿ ಪಾಲ್ಗೊಂಡಿದ್ದು ದಿನಗಳಷ್ಟೂ ಬದುಕಿನ ವಿಶೇಷ ದಿನಗಳಾಗಿದ್ದವು ,1992ರ ಡಿಸೆಂಬರ್ 6 ರಂದು ವಿವಾದಿತ ಕಟ್ಟಡ ಬೀಳುವ ದಿನ ನಾನು ಮತ್ತು ಶಿವಮೊಗ್ಗದ ಆರ್.ಕೆ.ಸಿದ್ದರಾಮಣ್ಣ ಸ್ಥಳದಿಂದ ಕೇವಲ 100 ಅಡಿ ದೂರದಲ್ಲಿ ಇದ್ದೆವು. ಸಾವಿರಾರು ವರ್ಷಗಳ ದಾಸ್ಯದ ಸಂಕೇತವೊಂದು ಹಿಂದೂ ಸ್ವಾಭಿಮಾನದ ಪ್ರತೀಕವಾಗಿ ಕುಸಿದು ಬೀಳುವುದನ್ನು ನೋಡಿದ ನನಗೆ ಪುಟಿದು ಚಿಮ್ಮುತ್ತಿದೆ ಅಂತ ಶಕ್ತಿಯೂ ಹೃದಯದೊಳಗಿನಿಂದ ಹಾಡುಗಳ ಸಾಲುಗಳನ್ನು ಮತ್ತೆ ಮತ್ತೆ ನೆನಪು ಮಾಡಿಸುತ್ತಿತ್ತು ವಿವಾದಿತ ಕಟ್ಟಡದ 3 ಗುಂಬಜುಗಳು ನೆಲಸಮವಾದ ನಂತರ, ಚಳುವಳಿಯ ಮೊದಲಿನಿಂದ ಕೊನೆಯವರೆಗೂ ಚಳುವಳಿಯ ಮಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡಿದ “ಶ್ರೇಷ್ಠ ರಾಷ್ಟ್ರಸಂತ ಪರಮ ಪೂಜನೀಯ ಪೇಜಾವರ ಶ್ರೀಗಳು” ರಾಮನ ವಿಗ್ರಹ ಪ್ರತಿಷ್ಟಾಪನೆಗೆ ಹೊರಟಾಗ ಅಧಿಕಾರಿಗಳು ತಡೆದರು.
ಆಗ ಪೇಜಾವರರು ಆಡಿದ ಒಂದು ಮಾತು ಈಗಲೂ ಕಣ್ಣಿಗೆ ಕಟ್ಟಿದಂತಿದೆ, “ರಾಮಲಲ್ಲನಾ ಪ್ರತಿಷ್ಟಾಪಿಸದೇ ಇಲ್ಲಿಂದ ತೆರಳುವ ಪ್ರಶ್ನೆಯೆ ಇಲ್ಲ, ಇಲ್ಲಿಯೇ ನನ್ನ ದೇಹಾಂತ್ಯವಾದರು ಸರಿಯೇ ಎಂದಿದ್ದರು. ಸಂತರೊಬ್ಬರು ಹಠಕ್ಕೆ ಬಿದ್ದರೆ ಏನಾಗ ಬಹುದು ಎನ್ನುವುದರ ಅರಿವಿದ್ದಂತಿದ್ದ ಅಧಿಕಾರಿ ಪ್ರತಿಷ್ಟಾಪನೆಗೆ ಕೊನೆಗೂ ಅವಕಾಶ ನೀಡಿದರು. ದೇಶದ ಮೂಲೆ ಮೂಲೆಯಿಂದ ತಂದಿದ್ದ ಇಟ್ಟಿಗೆಗಳನ್ನು ಸರಯೂ ನದಿ ತೀರದಿಂದ ಮರಳನ್ನು ಮೂರು ನಾಲ್ಕು ಕಿ.ಮೀ ದೂರದವರೆಗೆ ಕಾರ್ಯಕರ್ತರೇ ಸಾಲು ಮಾಡಿ ಕೈಯಿಂದ ಕೈಯಿಗೆ ಸಾಗಿಸಿದ್ದು ನಾವೆಲ್ಲರೂ ಕೂಡ ಅದರಲ್ಲಿ ಭಾಗಿಯಾಗಿದ್ದು ರಾಮ ಭಕ್ತಿಗೆ ಇಂಬು ನೀಡಿತ್ತು,
ನಮ್ಮೊಂದಿಗೆ ಬಂದಿದ್ದ ಪಾಕ ಪ್ರವೀಣ ರಂಜದಕಟ್ಟೆಯ ಶ್ರೀಕಾಂತ್ ಶಾಸ್ತ್ರಿ ಮತ್ತು ಕೆಲ ಸ್ನೇಹಿತರು ನಾವಲ್ಲಿ ಇದ್ದ ಅಷ್ಟು ದಿನಗಳು ಅಲ್ಲೇ ಸ್ಟೌವ್ ಪಾತ್ರೆ ಕೊಂಡುಕೊಂಡು ನಮಗೆಲ್ಲ ಹೊಟ್ಟೆ ತುಂಬುವಷ್ಟು ಉಪ್ಪಿಟ್ಟು ಮಾಡಿ ಬಡಿಸಿದ್ದಲ್ಲದೇ, ಮಾರಾಟವನ್ನು ಕೂಡ ಮಾಡಿ ಅಯೋಧ್ಯೆ ಪ್ರವಾಸದ ಖರ್ಚನ್ನು ಅಯೋಧ್ಯೆಯಲ್ಲಿಯೇ ಗಳಿಸಿದ್ದು, ರೈಲಿನಲ್ಲಿ ಅಯೋಧ್ಯೆ ಹೋಗಿ ವಾಪಾಸು ಬರುವಾಗ ಅವರು ವಿಮಾನದಲ್ಲಿ ಬರುವಷ್ಟು ಹಣ ಗಳಿಸಿದ್ದು ಕೂಡ ವಿಶೇಷವಾಗಿತ್ತು, ಇವತ್ತು ಬಿಜೆಪಿಯ ವೈಭವದ ದಿನಗಳನ್ನು ನೋಡುತ್ತಿದ್ದೇವೆ. ಇವತ್ತು ಪಂಚಾಯಿತಿಯಿಂದ ಪಾರ್ಲಿಮೆಂಟ್ ನವರೆಗೆ ನಮ್ಮ ಕಾರ್ಯಕರ್ತರು ಅಧಿಕಾರದಲ್ಲಿದ್ದಾರೆ. ನನ್ನ 5 ನೇ ಭಾರಿಯ ಶಾಸಕತ್ವವೂ ಸೇರಿದಂತೆ ಪಕ್ಷದ ಈ ಎಲ್ಲಾ ವೈಭವಗಳಿಗೆ ರಾಮ ಮಂದಿರ ಚಳುವಳಿ ಅಪಾರವಾದ ಕೊಡುಗೆ ನೀಡಿದೆ ಎಂದರೆ ಅದು ಅತಿಶಯೋಕ್ತಿಯಲ್ಲ.
ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿಕೊಂಡಿದ್ದ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ವಿವಾದಿತ ಕಟ್ಟಡ ಬಿದ್ದಿದ್ದರಿಂದ ತಮ್ಮ ಓಟು ಬ್ಯಾಂಕ್ಗೆ ಧಕ್ಕೆಯಾಗುತ್ತದೆ ಎಂದು ಭಾವಿಸಿ ನಾಲ್ಕು ರಾಜ್ಯಗಳ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ಪ್ರಜಾಪ್ರಭುತ್ವಕ್ಕೆ ತುರ್ತು ಪರಿಸ್ಥಿತಿಯಲ್ಲಿ ಅವಮಾನ ಮಾಡಿದಂತೆ ಮತ್ತೊಮ್ಮೆ ಅವಮಾನ ಮಾಡುವ ಕೆಲಸ ಮಾಡಿತ್ತು,,ಚಳುವಳಿಯನ್ನು ಹೋರಾಟವನ್ನು ದಮನ ಮಾಡುವ ತಂತ್ರ ಕುತಂತ್ರವನ್ನು ಮುಂದುವರಿಸಿರುವ ಪಕ್ಷವು ತನ್ನ ಪಕ್ಷದ ಪ್ರಮುಖ ನಾಯಕರು ಸುಪ್ರೀಂ ಕೋರ್ಟ್ನ ವಕೀಲರು ಸೇರಿದಂತೆ 26 ಜನರ ವಕೀಲರ ತಂಡವನ್ನು ರಾಮ ಮಂದಿರ ಆಗದಂತೆ ಕೋರ್ಟಿನಲ್ಲಿ ವಾದ ಮಾಡಿ ತಡೆಯಲು ನಿರಂತರವಾಗಿ ಶ್ರಮಿಸಿದರು ಕೂಡ ಒಬ್ಬೊಬ್ಬ ಹಿಂದೂವಿನಲ್ಲಿ ಇದ್ದ ರಾಮನಡೆಗಿನ ಭಕ್ತಿ ರಾಮನ ಅಸ್ತಿತ್ವವನ್ನು ರಾಮ ಮಂದಿರವನ್ನು ಪುನರ್ ಪ್ರತಿಷ್ಟಾಪಿಸಲು ಕಾರಣವಾಯಿತು ,
ರಾಮನ ಅಸ್ತಿತ್ವ ಪ್ರಶ್ನಿಸಿದವರು, ರಾಮನ ಡಿಗ್ರಿ ಸರ್ಟಿಫಿಕೇಟ್ ಕೇಳಿದವರು ದೈಹಿಕವಾಗಿ ಮಾತ್ರ ಅಲ್ಲ ರಾಜಕೀಯವಾಗಿಯೂ ನಶಿಸಿದ್ದಾರೆ. ಇನ್ನೊಂದು ಸ್ವಲ್ಪ ಜನರ ರಾಜಕೀಯ ನಶೀಸುವಿಕೆಯನ್ನು ಕೂಡ ನೋಡೋರಿದ್ದೇವೆ, ಐದು ಲಕ್ಷಕ್ಕೂ ಹೆಚ್ಚು ಜನ ಅಯೋಧ್ಯೆಗೆ ಕರಸೇವೆಗೆ ಹೊರಡಲು ಸಿದ್ದರಾದಾಗಲೇ ಜೀವಂತ ವಾಪಸ್ಸು ಬರುತ್ತೇವೆ ಎನ್ನುವ ಖಾತ್ರಿ ಬಹಳಷ್ಟು ಜನರಿಗೆ ಇರಲಿಲ್ಲ. ವಿವಾದಿತ ಕಟ್ಟಡ ಬಿದ್ದ ನಂತರ ಅಂದು ಗಂಡೆದೆಯ ತೀರ್ಮಾನ ತೆಗೆದುಕೊಂಡವರು ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ ಸಿಂಗರು, ಕಟ್ಟಡ ಬೀಳುವವರೆಗು ಕೇಂದ್ರ ಸರ್ಕಾರ ಕಳಿಸಿದ್ದ ಮಿಲಿಟರಿ ಪಡೆಗಳು ಅಯೋಧ್ಯೆಗೆ ತೆರಳದಂತೆ ಮಾರ್ಗ ಮಧ್ಯದಲ್ಲಿ ರಸ್ತೆಗಳಲ್ಲಿ ನೂರಾರು ಮರಗಳನ್ನು ಕಡಿದು ವಾಹನ ತೆರಳದಂತೆ ಮಾಡಿದ್ದ ಕರಸೇವಕರು ,ಸ್ಥಳಿಯ ಗ್ರಾಮಸ್ಥರು ಮತ್ತು ವಿವಾದಿತ ಕಟ್ಟಡ ಬಿದ್ದ ನಂತರ ದೊಡ್ಡ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ನಾನು ನೀರಾಳನಾದೆ ಎಂದು ರಾಮ ಭಕ್ತಿ ಪ್ರೇರಿಪಿಸಿದ ಕಲ್ಯಾಣ ಸಿಂಗರು ಈ ದೇಶದ ರಾಜಕಾರಣದಲ್ಲಿ ಚಿರಸ್ಥಾಯಿಯಾಗಿ ಇರುತ್ತಾರೆ,
ಹಿಂದಿನ ತಂತ್ರಜ್ಞಾನದ ಸುಣ್ಣ ಬೆಲ್ಲ ಬಳಿಸಿ ಸುರಗಿ ಗಾರೆಯಲ್ಲಿ ಮಂದಿರದ ಅವಶೇಷಗಳನ್ನೇ ಬಳಸಿ ಕಟ್ಟಿದ ಗಟ್ಟಿ ಮುಟ್ಟಾದ ಕಟ್ಟಡವನ್ನು ಬಹುಶಃ ಈಗೀನ ಜೆ ಸಿ ಬಿ ಹಿಟ್ಯಾಚಿ ಬಳಸಿ ಕೆಡವುದಾಗಿದ್ದರೂ ಹತ್ತಾರು ದಿನಗಳು ಬೇಕಾಗುತ್ತಿತ್ತು,ರಾಮ ಭಕ್ತರ ಆವೇಶ ಎಷ್ಟಿತ್ತು ಎಂದರೆ 4 ಘಂಟೆಗಳಲ್ಲಿ ಕೇವಲ ಸುತ್ತಿಗೆ ಚಾಣಗಳನ್ನು ಬಳಸಿ ನೆಲಸಮ ಮಾಡಿದ್ದರ ಹಿಂದೆ ನೂರಾರು ವರ್ಷಗಳ ದಾಸ್ಯಕ್ಕೆ ಉತ್ತರ ಕೊಡಬೇಕೆನ್ನುವ ಕೆಚ್ಚು ಹೊರಬಂದು ದಾಸ್ಯದ ಸಂಕೋಲೆಯನ್ನು ಕಳಚುವ ಹಂತಕ್ಕೆ ಸಾಗಲು ಅವಕಾಶ ಆಗಿದೆ ,ಪ್ರಾರಂಬದಲ್ಲಿ ವಿರೋದಿಸಿದ್ದ ಪೋಲಿಸರು ಕಟ್ಟಡ ಬೀಳುವವರೆಗೂ ಸುಮ್ಮನಾದರು,, ಪ್ರಾರಂಬದ ರಾಮ ಭಕ್ತರ ಮೇಲಿದ್ದ ಆಕ್ರೋಶದಂತೆ ಕಟ್ಟಡ ಬೀಳುವಾಗ ಒಬ್ಬ ಪೋಲಿಸ್ ಲಾಠಿ ಎತ್ತಿದ್ದರೆ,ಅಲ್ಲಿದ್ದ ಅಧಿಕಾರಿ ಲಾಠಿ ಚಾರ್ಜ್ಗೆ ಆದೇಶಿಸಿದ್ದರೇ ಕೆಲ ಕ್ಷಣದಲ್ಲೇ ಕಾಲ್ತುಳಿತದಲ್ಲೇ ಸಾವಿರಾರು ಜನ ಸಾಯುವ ಸಾಧ್ಯತೆ ಇತ್ತು. ಮತ್ತೊಂದು ಜಲಿಯನ್ ವಾಲಾ ಬಾಗ್ ನಡೆದಿರುತ್ತಿತ್ತು,ಆ ದಿನ ಲಕ್ಷಾಂತರ ಕಾರ್ಯಕರ್ತರಲ್ಲಿ ರಾಮ ಸೇರಿಕೊಂಡಂತೆ ಶಸ್ತ್ರಸಜ್ಜಿತ ಪೋಲಿಸರಲ್ಲೂ ರಾಮನ ಆಳಿಕೆಯಾಗಿರಬಹುದು ಎಂದು ಅನಿಸದೇ ಇರದು. ಬೀಳುವ ಸಮಯದಲ್ಲಿ ಕಮಿಷನರ್ ನಿಂದ ಹಿಡಿದು ಕಾನ್ಸ್ಟೇಬಲ್ನವರೆಗೆ ಆ ದಿನ ಎಲ್ಲರೂ ಸುಮ್ಮನಿದ್ದಾಗಲೇ ನನಗನ್ನಿಸಿತ್ತು ರಾಮ ಈ ದೇಶದಲ್ಲಿ ಸದಾ ಜೀವಂತ ಎಂದು.
ರಾಮ ಮಂದಿರ ಹೋರಾಟದಲ್ಲಿ ಹುತಾತ್ಮರಾದ ,ಹೋರಾಟದಲ್ಲಿಯೇ ಬದುಕು ಪೂರ್ತಿ ಕಳೆದುಕೊಂಡ ಸಂಘ ಮತ್ತು ಪರಿವಾರದ ಲಕ್ಷಾಂತರ ಕಾರ್ಯಕರ್ತರಿಗೆ, ಕರಸೇವಕರಿಗೆ ನಾಯಕರಿಗೆ, ಪ್ರಚಾರಕರಿಗೆ ಎಲ್ಲರಿಗೂ ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸಲೇ ಬೇಕು,ರಾಮಮಂದಿರ ಉದ್ಘಾಟನೆಯ ಸಂಭ್ರಮವನ್ನು ಎಲ್ಲರೂ ತಮ್ಮ ತಮ್ಮ ಮನೆ, ಊರುಗಳಲ್ಲಿ ಶಾಂತಿ ಮತ್ತು ಭಕ್ತಿಯಿಂದ ಆಚರಿಸುವಂತಾಗಲಿ. ತೀರ್ಥಹಳ್ಳಿಯಿಂದ ಅಯೋಧ್ಯೆಗೆ ಹೊದವರಲ್ಲಿ ಕೆಲವರು ನಮ್ಮೊಂದಿಗೆ ಇಂದು ಜೀವಂತವಾಗಿಲ್ಲ ಅವರಾತ್ಮಗಳು ಉಧ್ಗಾಟನೆ ದಿನಾಂಕ ಘೋಷಣೆ ಆದ ದಿನದಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿರಬಹುದು ,
ಗಾಂಧಿಜೀಯ ರಾಮ ರಾಜ್ಯದ ಕಲ್ಪನೆಯ ಬಗ್ಗೆ ಪುಂಖಾನುುಂಖವಾಗಿ ಭಾಷಣ ಮಾಡುತ್ತಿದ್ದ ಜನ ಇವತ್ತು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರ ಮಾಡಿದ್ದಾರೆ ರಾಮನ ಮಂದಿರವನ್ನು ಟೆಂಟ್ ಗೆ ಹೋಲಿಸುತ್ತಿದ್ದಾರೆ,ರಾಮನ ವಿಗ್ರಹವನ್ನು ಗೊಂಬೆಗೆ ಹೋಲಿಸುತ್ತಿದ್ದಾರೆ,ಸನಾತನ ಧರ್ಮದ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ, ಆದರೆ ರಾಮನ ಮಂದಿರವನ್ನು ಹೋರಾಟವನ್ನು ಹೀಗೆಳೆಯುತ್ತಿದ್ದ ಕೆಲವು ಜನರಿಂದು ಮಂದಿರ ಉಧ್ಗಾಟನೆಯ ಶುಭಾಶಯಗಳ ಫ್ಲೆಕ್ಸ್ ಹಾಕಿ ದೇವಸ್ಥಾನ ಶುಚಿ ಗೊಳಿಸುವಷ್ಟು ಆಶ್ಚರ್ಯ ಮತ್ತ ಆನಂದಕರ ಬದಲಾವಣೆ ಆಗಿದ್ದನ್ನು ಕೂಡ ನೋಡುತ್ತಿದ್ದೇವೆ,ಅವರಿಗೂ ರಾಮ ಒಳಿತು ಮಾಡಲಿ,
ಪ್ರತಿ ಚುನಾವಣೆಗೆ ಮನೆ ಮನೆ ಹೋದಾಗೆಲ್ಲಾ ನನ್ನನ್ನೂ ಸೇರಿದಂತೆ ನಮ್ಮೆಲ್ಲಾ ಕಾರ್ಯಕರ್ತರಿಗೂ ಕೆಲವು ರಾಜಕೀಯ ವಿರೋಧಿಗಳು ಕುಹಕವಾಡುತ್ತಿದ್ದರು , ಚುನಾವಣೆ ಬರಲಿಕ್ಕೂ ನಿಮಗೆ ರಾಮ ನೆನಪಾಗುತ್ತಾನೆ,ಇಟ್ಟಿಗೆ ಏನಾಯಿತು ದುಡ್ಡು ಏನಾಯಿತು ಎನ್ನುವ ಪ್ರಶ್ನೆ ಎಲ್ಲಾ ಬಿಜೆಪಿ ಕಾರ್ಯಕರ್ತನಿಗೂ ಎದುರಾಗಿದೆ, ಪ್ರಶ್ನೆ ಎದುರಾದಗೆಲ್ಲಾ ತಾಳ್ಮೆಯಿಂದ ಕಟ್ಟುವ ಬರವಸೆ ಇಲ್ಲದೇ ಇದ್ದರೂ*ಕಟ್ಟುತ್ತೇವೆ* ಎಂದು ಉತ್ತರಿಸಿ ಬರುತ್ತಿದ್ದ, ರಾಷ್ಟ್ರೀಯತೆ ಬೇರುಗಳನ್ನು ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಬಿತ್ತುವಂತೆ ಮಾಡಿದ ಪರಿವಾರದ ಎಲ್ಲಾ ಕಾರ್ಯಕರ್ತರು, ಹಾಗೂ ದೇಶದಾದ್ಯಂತ ಸಾವಿರಾರು ಜನ ನಾಯಕರನ್ನ ಹುಟ್ಟು ಹಾಕಿ ಸಂಸದ ಶಾಸಕರನ್ನಾಗಿ ಮಾಡಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಕೋಟಿ ಕೋಟಿ ಪ್ರಣಾಮಗಳು, ರಾಮ ರಾಜ್ಯ ನಿರ್ಮಾಣದ ಕನಸು ಕಂಡ ಗಾಂಧೀಜಿಯವರ ಆಶಯಗಳು ಸಾಕರಗೊಳ್ಳುವ ದಿನಗಳು ಹತ್ತಿರದಲ್ಲಿವೆ ಎಂದೆನಿಸುತ್ತಿದೆ, ಕಳೆದ 10 ವರ್ಷಗಳ ನರೇಂದ್ರ ಮೋದಿಯವರ ಆಡಳಿತ ಭಾರತವನ್ನು ವಿಶ್ವಗುರು ಮಾಡುವ ಕಡೆ ತೆಗೆದುಕೊಂಡು ಹೋಗುತ್ತಿದೆ,
ಗಾಂಧೀಜಿಯವರ ಕಲ್ಪನೆಯ ರಾಮರಾಜ್ಯ ನಿರ್ಮಾಣ ಆದ ದಿನ ಭಾರತ ವಿಶ್ವಗುರು ಆಗಲೇಬೇಕು ಆಗೆ ಆಗುತ್ತದೆ, ಯಾವುದೇ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೋರಾಟ ಯಶಸ್ವಿಯಾದ ದಿನ ಪ್ರತಿಯೊಬ್ಬನಿಗೂ ಆಗೋ ಸಂತೋಷವೇ ನನಗೂ ಆಗುತ್ತಿದೆ, ಆದರೆ ನಾನು ಸಂತೋಷಕ್ಕೆ ಸೀಮಿತಗೊಳಿಸದೆ ಅದನ್ನು ಬದುಕಿನ ಸಾರ್ಥಕತೆ ಎಂದೇ ಭಾವಿಸುವೆ, ವಿವಾದಿತ ಕಟ್ಟಡಕ್ಕೆ ಸುತ್ತ ಹಾಕಿದ್ದ ತಂತಿ ಬೇಲಿ ಮುರಿದು ನುಗ್ಗುತ್ತಿದ್ದ ಕರ ಸೇವಕನಿಗೆ ಅಲ್ಲಿದ್ದ ಪೊಲೀಸರು ಅಡ್ಡ ತಡೆಯಲು ಆಗದೆ ಕೈಲಿದ್ದ ಲಾಠಿ ಪುಡಿ ಆಗುವವರೆಗೂ ಹೊಡೆದರು ಕೂಡ ,ತಂತಿ ಮುಳ್ಳು ಮೈ ತುಂಬಾ ಪರಚಿ ರಕ್ತ ಸುರಿಯುತ್ತಿದ್ದರು ಕೂಡ ಎದೆಗುಂದಂದೆ, ಮುಲಾಯಂ ಸಿಂಗ್ ಯಾದವನ ಸರ್ಕಾರದ ಕೋವಿ ಗುಂಡುಗಳಿಗೆ ಎದೆಯೊಡ್ಡಿ ದಾಸ್ಯದ ಸಂಕೋಲೆ ಕಳಚಿದ ನಮ್ಮ ಲಕ್ಷ ಲಕ್ಷ ಕಾರ್ಯಕರ್ತರ ಜೀವನದಲ್ಲಿ ಜನವರಿ 22 ,2024 ರ ದಿನಕ್ಕಿಂತ ಪರಮೋಚ್ಚ ದಿನ ಮತ್ತೊಂದು ಇರಲಾರದು, ಅನೇಕರು ಮಾತಿಗೆ ಹೇಳುತ್ತಾ ಇರುತ್ತಾರೆ ಅಯೋಧ್ಯೆ ಹೋರಾಟದಲ್ಲಿ ಸರಯೂ ನಿಧಿಯಲ್ಲಿ ನೀರನಷ್ಟೇ ರಕ್ತ ಹರಿದಿದೆ ಎಂದು ,ಹರಿದ ಚೆಲ್ಲಿದ ರಕ್ತಕ್ಕೆ ಪಲಪ್ರದವಾಗಿ ದೊರೆತಿದ್ದೇ ನಾಳಿನ ರಾಮನ ಮಂದಿರ,
ಅಯೋಧ್ಯೆ ರಾಮಮಂದಿರ ಇಡೀ ವಿಶ್ವಕ್ಕೇ ದಾರಿದೀಪ: ಬಸವರಾಜ ಬೊಮ್ಮಾಯಿ ವಿಶೇಷ ಲೇಖನ
ದಾಳಿ ಅಕ್ರಮಣಗಳ ಇತಿಹಾಸವನ್ನೇ ಓದಿದ ನಾವು ಪುನರುತ್ಥಾನದ ಬಗ್ಗೆ ಓದಿರಲೇ ಇಲ್ಲ, ಅಲೆಕ್ಸಾಂಡರ್ ನಿಂದ ಶುರುವಾದ ದಾಳಿ ಘಜನಿ ಘೋರಿಯಿಂದ ಮೊನ್ನೆ ಮೊನ್ನೆಯ ಪರ್ವೆಜ್ ಮುಷರಫ್ ನವರೆಗೆ ಧಾಳಿಗಳು ನಡಿದಿವೆ,ಪುರುರವನಿಂದ ಶುರುವಾಗಿ ರಾಣ ಪ್ರತಾಪ ಶಿವಾಜಿಯಿಂದ ಈಗೀನ ನರೇಂದ್ರ ಮೋದಿಯವರಿಗೆ ಉತ್ತರ ಕೊಡುತ್ತಲೇ ಬಂದಿದ್ದೇವೆ,ಈ ಕಾಲ ಮೋದಿಯ ಯುಗ ಹೆಚ್ಚು ವಿಶೇಷವಾಗಿ ಕಾಣುತ್ತಿದೆ ಏಕೆಂದರೆ, ದಾಳಿಗೆ ಆಕ್ರಮಣಗಳಿಗೆ ಮರು ದಾಳಿ ಮಾಡುವುದರ ಜೊತೆಗೆ ಪುನರುತ್ಥಾನವನ್ನೂ ನೋಡುತ್ತಿದ್ದೇವೆ, ಪುನರುತ್ಥಾನದ ಭಾಗವೇ ಈ ರಾಷ್ಟ್ರ ಮಂದಿರ ಆಗುತ್ತಿದೆ, ಆದ್ದರಿಂದಾಗಿಯೇ ಜೀವ ಮತ್ತು ಬದುಕು ಕಳೆದುಕೊಂಡ ಕಾರ್ಯಕರ್ತನ ತ್ಯಾಗ ಬಲಿದಾನ ಮಂದಿರ ಉಧ್ಗಾಟನೆ ನಂತರವೂ ವ್ಯರ್ಥವಾಗದಂತೆ ರಾಮ ರಾಜ್ಯ ನಿರ್ಮಾಣ ಮಾಡುವ ಕೈಂಕರ್ಯವನ್ನು ನರೇಂದ್ರ ಮೋದಿ ಕಳೆದ 10 ವರ್ಷಗಳಿಂದ ಮಾಡುತ್ತಿದ್ದಾರೆ, ಮುಂದಿನ 5 ವರ್ಷಗಳಲ್ಲಿಯೂ ಕೂಡ ಮಾಡುವವರಿದ್ದಾರೆ,
ಹೋರಾಟದಲ್ಲಿ ಕಳೆದ 500 ವರ್ಷಗಳಲ್ಲಿ ಪಾಲ್ಗೊಂಡು ಹುತಾತ್ಮರಾದ ಮತ್ತು ನಮ್ಮೊಂದಿಗೆ ಇಲ್ಲವಾಗಿರುವ ಎಲ್ಲ ಕಾರ್ಯಕರ್ತರ ಆತ್ಮಗಳ ಸಂಭ್ರಮಾಚರಣೆ ಕೂಡ ಸ್ವರ್ಗದಲ್ಲಿ ಜೋರೇ ಇರಬಹುದು, ಇರುತ್ತದೆ ಈ ಸಂದರ್ಭದಲ್ಲಿ ಬದುಕಿದ್ದು ಸಾರ್ಥಕ ಭಾವ ಕಾಣುತ್ತಿರುವ ನಾವೆಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ, ರಾಮ ಮಂದಿರ ಉದ್ಘಾಟನೆಯ ದಿನವನ್ನು ಸಮಗ್ರ ಭಾರತೀಯರ ರಾಷ್ಟ್ರ ಮಂದಿರ ಉದ್ಘಾಟನೆ ದಿನವೆಂದೇ ಭಾವಿಸೋಣ, ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕಿ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ದುರ್ಬಲಗೊಳಿಸುವ ಶಕ್ತಿಗಳ ಶಕ್ತಿ ಕುಂದಿ ಜಾತಿ ಮತ ಪಂಥಗಳ ಮೀರಿದ ಸಂಘಟಿತ ಸಮಾಜ ನಿರ್ಮಾಣವಾಗಲಿ, ಮಂದಿರದ ನಿರ್ಮಾಣ ಶಕ್ತಿ ಶಾಲಿ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿಯಾಗಲಿ, ಭಾರತ ಮಾತಾಕಿ ಜೈ.