ಮೀಸಲಾತಿ ಭಿಕ್ಷೆಯಲ್ಲ, ಸಂವಿಧಾನಾತ್ಮಕ ಹಕ್ಕು. ನಮ್ಮಿಂದ ಕಿತ್ತುಕೊಂಡಿದ್ದರಲ್ಲೇ ಸ್ವಲ್ಪ ವಾಪಸ್ ಕೊಡಿ ಎಂದು ಕೇಳಲು ಭಯವೇಕೆ? ಇಷ್ಟುವರ್ಷ ಸುಮ್ಮನಿದ್ದದ್ದು ಸಾಕು. ಇನ್ನಾದರೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಧ್ವನಿ ಎತ್ತಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರು (ಜೂ.27): ಮೀಸಲಾತಿ ಭಿಕ್ಷೆಯಲ್ಲ, ಸಂವಿಧಾನಾತ್ಮಕ ಹಕ್ಕು. ನಮ್ಮಿಂದ ಕಿತ್ತುಕೊಂಡಿದ್ದರಲ್ಲೇ ಸ್ವಲ್ಪ ವಾಪಸ್ ಕೊಡಿ ಎಂದು ಕೇಳಲು ಭಯವೇಕೆ? ಇಷ್ಟುವರ್ಷ ಸುಮ್ಮನಿದ್ದದ್ದು ಸಾಕು. ಇನ್ನಾದರೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಧ್ವನಿ ಎತ್ತಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಜನ ಪ್ರಕಾಶನ’ ಹೊರತಂದಿರುವ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ‘ಮೀಸಲಾತಿ-ಭ್ರಮೆ ಮತ್ತು ವಾಸ್ತವ’ ಕೃತಿಯ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಮಾನತೆ ಉಂಟಾಗಲು ಕಾರಣವಾಗಿರುವ ಪಟ್ಟಭದ್ರ ಹಿತಾಸಕ್ತಿಗಳು ಮೀಸಲಾತಿಯನ್ನು ವಿರೋಧಿಸುತ್ತಿವೆ ಎಂದು ಟೀಕಿಸಿದರು. ಜಾತಿ ವ್ಯವಸ್ಥೆಯಿಂದಾಗಿ ನಮ್ಮ ಸಮಾಜದಲ್ಲಿ ಅಸಮಾನತೆ ಉಂಟಾಗಲು ಅವಕಾಶ ವಂಚಿತರು ಕಾರಣರಲ್ಲ.
ಪಠ್ಯ ವಿವಾದದಲ್ಲಿ ರಾಜಕೀಯಕ್ಕೆ ಯತ್ನ: ಸಿದ್ದರಾಮಯ್ಯ
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸ್ವಾರ್ಥ ಸಾಧನೆಗಾಗಿ ಜಾತಿ ವ್ಯವಸ್ಥೆ ಗಟ್ಟಿಗೊಳಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ ಆಸಮಾನತೆ ಸೃಷ್ಟಿಸಿದ್ದಾರೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರಿಗೆ ವಿದ್ಯಾಭ್ಯಾಸ ಮಾಡಲು, ಸಂಪತ್ತು ಅನುಭವಿಸಲು, ಅಧಿಕಾರ ನಡೆಸಲು ಅವಕಾಶವಿತ್ತು, ಇದು ಮೀಸಲಾತಿಯಲ್ಲವೇ ಎಂದು ಪ್ರಶ್ನಿಸಿದರು. ಚಿಂತಕ ಬಂಜಗೆರೆ ಜಯಪ್ರಕಾಶ್, ಆರ್ಥಿಕ ತಜ್ಞ ಟಿ.ಆರ್.ಚಂದ್ರಶೇಖರ್, ಪತ್ರಕರ್ತ ಬಿ.ಎಂ.ಹನೀಫ್, ಜನಮನ ಪ್ರಕಾಶನದ ರಾಜಶೇಖರ್ ಕಿಗ್ಗ ಮತ್ತಿತರರು ಉಪಸ್ಥಿತರಿದ್ದರು.
ಅಸಮಾನತೆ ಸಂಕಷ್ಟನೆನೆದ ನ್ಯಾ.ನಾಗಮೋಹನ ದಾಸ್: ನಾನು ಹಳ್ಳಿಯಲ್ಲಿ ಹುಟ್ಟಿಬೆಳೆದಿದ್ದು ಬಡತನ, ಜಾತೀಯತೆ, ಅಸಮಾನತೆಯನ್ನು ಹತ್ತಿರದಿಂದ ಅನುಭವಿಸಿದ್ದೇನೆ. ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದೇನೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಎಲ್‌ಎಲ್‌ಬಿಯಲ್ಲೂ ತೃತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ. ಕೆಲಸ ಸಿಗಲಿಲ್ಲ. ಸ್ನಾತಕೋತ್ತರ ಪದವಿಗೆ ಪ್ರವೇಶವೂ ಸಿಗಲಿಲ್ಲ. ಆದಾಯ ಇಲ್ಲ ಎಂದು ಹೆಣ್ಣು ಸಹ ಕೊಡಲಿಲ್ಲ. ಸುಮ್ಮನಿರುವುದು ಹೇಗೆ ಎಂದು ಕರಿ ಕೋಟು ಹಾಕಿಕೊಂಡು ವಕೀಲಿ ವೃತ್ತಿ ಮಾಡಿದೆ. ಪ್ರವೇಶ ಪರೀಕ್ಷೆ ಇದ್ದಿದ್ದರೆ ಇದರಲ್ಲೂ ಉತ್ತೀರ್ಣ ಆಗುತ್ತಿರಲಿಲ್ಲವೇನೋ ಎಂದು ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಪಕ್ಷಾಂತರಿಗಳು 10 ವರ್ಷ ಚುನಾವಣೆಗೆ ನಿಲ್ಲಬಾರದು: ಸಿದ್ದು
ಸಂವಿಧಾನದ ಪುಸ್ತಕ ಹಾಡಿನ ರೂಪದಲ್ಲಿ ತರುವೆ: ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಯಾವುದೇ ಹಂಗಿಲ್ಲದ ಮೀಸಲಾತಿ ಇಂದು ಸಮಾಜಕ್ಕೆ ಬೇಕಿದೆ. ನಾವು ಹಾಡಬೇಕಿರುವುದು ಹರಿಕಥೆಯಲ್ಲ. ಕಾನೂನಿನ ಹಾಡು ಹಾಡಬೇಕಿದೆ. ಈ ಸಂವಿಧಾನದ ಪುಸ್ತಕವನ್ನು ಜಾನಪದ ರೂಪದಲ್ಲಿ ಹಾಡಿಸಬೇಕಿದೆ. 20 ಕವಿಗಳಿಂದ ರಾಗ ಸಂಯೋಜನೆ ಮಾಡಿಸಿ ಹಾಡಿನ ರೂಪಕ್ಕೆ ತರುತ್ತೇವೆ. ಸಮಾನತೆಗಾಗಿ ನ್ಯಾ.ನಾಗಮೋಹನ್‌ದಾಸ್ ಶ್ರಮಿಸುತ್ತಿದ್ದಾರೆ. ಅವರ ಈ ಪುಸ್ತಕವನ್ನು ಕಾವ್ಯವಾಗಿ ಕಾಪಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ.ನಾಗಮೋಹನದಾಸ್ ಅವರ ‘ಮೀಸಲಾತಿ-ಭ್ರಮೆ ಮತ್ತು ವಾಸ್ತವ’ ಕೃತಿಯ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯನ್ನು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಲೇಖಕ ನ್ಯಾ.ನಾಗಮೋಹನದಾಸ್, ಸಂಗೀತ ನಿರ್ದೇಶಕ ಹಂಸಲೇಖ, ಚಿಂತಕ ಬಂಜಗೆರೆ ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.