ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅಡ್ಡಿ ಈ ವರ್ಷ ತೆರವು: ಸಿಎಂ ಬೊಮ್ಮಾಯಿ

Published : Jun 27, 2022, 05:00 AM IST
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅಡ್ಡಿ ಈ ವರ್ಷ ತೆರವು: ಸಿಎಂ ಬೊಮ್ಮಾಯಿ

ಸಾರಾಂಶ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕಿರುವ ಅಡ್ಡಿ ಈ ವರ್ಷ ನಿವಾರಣೆ ಆಗಲಿದ್ದು, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ (ಜೂ.27): ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕಿರುವ ಅಡ್ಡಿ ಈ ವರ್ಷ ನಿವಾರಣೆ ಆಗಲಿದ್ದು, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದಡಿ ನಗರಪ್ರದೇಶದ ಬಡ ವರ್ಗಗಳ ಪ್ರದೇಶದಲ್ಲಿ ಸುಮಾರು .34 ಕೋಟಿ ವೆಚ್ಚದ ವಿವಿಧ ಮೂಲಸೌಕರ್ಯಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಬೊಮ್ಮಾಯಿ ಈ ವಿಚಾರ ತಿಳಿಸಿದರು. ಹುಬ್ಬಳ್ಳಿ ವಾಣಿಜ್ಯನಗರಿಯಾಗಿ ಬೆಳೆಯಲು ಈ ಯೋಜನೆ ಸಾಕಷ್ಟುಕೊಡುಗೆ ನೀಡಲಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮತ್ತು ಆ ಮೂಲಕ ಕಾರವಾರ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆ ಅನೇಕ ವರ್ಷದಿಂದ ನನೆಗುದಿಗೆ ಬಿದ್ದಿದೆ. 

ಆದರೆ ಈ ವರ್ಷಾಂತ್ಯದ ಒಳಗೆ ಯೋಜನೆ ಅರಣ್ಯ ಹಾಗೂ ಪರಿಸರ ಮಂತ್ರಾಲಯದ ನಿರಾಕ್ಷೇಪಣೆ ಪಡೆಯುವ ಹಂತದಲ್ಲಿದೆ. ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿದೆ ಎಂದರು. ಇನ್ನು, ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೂಡ ಅನುಮೋದನೆ ನೀಡಿದೆ. ಇದಕ್ಕಾಗಿ .823 ಕೋಟಿ ಮೀಸಲಾಗಿಟ್ಟಿದ್ದು, ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ. ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ. ಇದರ ಭೂಸ್ವಾಧೀನ ಪ್ರಕ್ರಿಯೆಗೆ ಇರುವ ತೊಡಕು ನಿವಾರಿಸಿ ಇದೇ ವರ್ಷದಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.

ತುರ್ತು ಪರಿಸ್ಥಿತಿ ವಿರುದ್ಧ ಬೀದಿಗಿಳಿದು ಹೋರಾಡಿದ್ದೆ: ಸಿಎಂ ಬೊಮ್ಮಾಯಿ

ನಿರ್ಧಾರಕ್ಕೆ 10 ವಾರ ಗಡುವು: ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ.ಮೀ. ಉದ್ದದ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಾಣ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಹತ್ತು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (ಎನ್‌ಬಿಡಬ್ಲ್ಯೂ) ಹೈಕೋರ್ಚ್‌ ನಿರ್ದೇಶಿಸಿದೆ. ಯೋಜನೆಯನ್ನು ಪ್ರಶ್ನಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಹಾಜರಾಗಿದ್ದ ಕೇಂದ್ರ ಸರ್ಕಾರಿ ವಕೀಲರು, ಯೋಜನೆಯ ಸಾಧಕ-ಬಾಧಕಗಳ ಅಧ್ಯಯನಕ್ಕೆ ಪರಿಸರ ಸಚಿವಾಲಯ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಯೋಜನೆ ಹಾಗೂ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲಿದೆ. ಅದನ್ನು ಆಧರಿಸಿ ಎನ್‌ಡಬ್ಲ್ಯೂಬಿ ನಿರ್ಧಾರ ಕೈಗೊಳ್ಳಲಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ನ್ಯಾಯಪೀಠ ಪ್ರತಿಕ್ರಿಯಿಸಿ, ನ್ಯಾಯಾಲಯಕ್ಕೆ ಯಾವುದೇ ಸಮಿತಿಯ ವರದಿ ಅಗತ್ಯವಿಲ್ಲ. ಯೋಜನೆ ಕುರಿತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಪಷ್ಟನಿಲುವನ್ನು ಕೋರ್ಚ್‌ಗೆ ತಿಳಿಸಿ. ಹೈಕೋರ್ಚ್‌ ನಿರ್ದೇಶನದಂತೆ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳುವ ಕೆಲಸವನ್ನು ಮಂಡಳಿ ಇನ್ನೂ ಆರಂಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಂಜನಾದ್ರಿ ಸಮಗ್ರ ಅಭಿವೃದ್ಧಿ: ಭೂಸ್ವಾಧೀನಕ್ಕೆ ಸಿಎಂ ಬೊಮ್ಮಾಯಿ 1 ತಿಂಗಳ ಗಡುವು

ಅಲ್ಲದೆ, ನಿರ್ಧಾರ ಕೈಗೊಳ್ಳಲು ಮಂಡಳಿಗೆ ಇರುವ ಸಮಸ್ಯೆ ಏನು ಎಂಬುದೇ ಕೋರ್ಚ್‌ಗೆ ಅರ್ಥವಾಗುತ್ತಿಲ್ಲ. ಯೋಜನೆಯನ್ನು ಯಾವಾಗ ಆರಂಭಿಸಬೇಕೆಂದು ಉದ್ದೇಶಿಸಿದ್ದೀರಾ, ಐದು ವರ್ಷ ಕಳೆದ ನಂತರ ಆರಂಭಿಸುತ್ತೀರಾ ಎಂದು ಪ್ರಶ್ನಿಸಿದ ನ್ಯಾಯಪೀಠ, ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಪ್ರಮುಖವಾಗಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಆದರೆ, ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿತು. ಅಂತಿಮವಾಗಿ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಹತ್ತು ವಾರದೊಳಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ