
ಬೆಂಗಳೂರು (ಜೂ.27): ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೌಭಾಗ್ಯ ಲಕ್ಷ್ಮೇ ಶುಗರ್ ಕಂಪನಿ ಮೂಲಕ ರಾಜ್ಯದ ವಿವಿಧ ಡಿಸಿಸಿ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 819 ಕೋಟಿ ರು. ಸಾಲ ಪಡೆದು ತೀರಿಸದೆ ವಂಚಿಸುತ್ತಿದ್ದಾರೆ ಎಂದು ಎಂದು ಕಾಂಗ್ರೆಸ್ ಗಂಭೀರ ಆರೋಪಿಸಿದೆ. ಸರ್ಕಾರ ಕೂಡಲೇ ಜಾರಕಿಹೊಳಿ ಅವರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಾಲ ಮರುಪಾವತಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಸೌಭಾಗ್ಯ ಲಿಮಿಟೆಡ್‌ನ 6 ಮಂಡಳಿ ನಿರ್ದೇಶಕರಲ್ಲಿ ರಮೇಶ್ ಅವರ ಮಗ, ಮಗಳು, ಸೊಸೆ ಸೇರಿ ಅವರ ಕುಟುಂಬದವರೇ ನಾಲ್ವರು ಇದ್ದಾರೆ. ಉಳಿದವರು ಇವರ ಬೇನಾಮಿಗಳು. ಈ ಕಂಪನಿ ವಿವಿಧ ಬ್ಯಾಂಕ್‌ಗಳಿಂದ 578.39 ಕೋಟಿ ರು.ಸಾಲ ಪಡೆದಿದೆ. ಈ ಕಂಪನಿ ನಡೆಸುತ್ತಿರುವ ಅಭಿನಂದನ್ ಪಾಟೀಲ್, ಜಾರಕಿಹೊಳಿ ಅವರ ಬೇನಾಮಿದಾರ. ಸಾಲ ಕಟ್ಟುವಿಕೆ ತಪ್ಪಿಸಲು ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಇನ್ನೂ ಸಕ್ಕರೆ ಉತ್ಪಾದಿಸುತ್ತಿದೆ ಎಂದು ದೂರಿದರು.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಹಿಂದೆ ಜಾರಕಿಹೊಳಿ ಕೈವಾಡ?
ಸಹಕಾರಿ ಬ್ಯಾಂಕ್‌ಗಳಲ್ಲಿ ರಮೇಶ್ ಜಾರಕಿಹೊಳಿ ಕೋಟ್ಯಂತರ ಸಾಲ ಬಾಕಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರು. ಸಾಲ ಬಾರಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆ, ಸವರಿನ್ ಇಂಡಸ್ಟ್ರೀಸ್ ಸೇರಿದಂತೆ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳು ಡಿಫಾಲ್ಟ್‌ಗಳಿವೆ.
ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿಲ್ಲ. ವಿಜಯಪುರ, ಶಿರಸಿ, ತುಮಕೂರು, ಮಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಸಾಲ ಪಡೆದಿದ್ದು ಎರಡು ವರ್ಷದಿಂದ ಬಡ್ಡಿಯನ್ನೂ ಮರುಪಾವತಿ ಮಾಡಿಲ್ಲ. ಈಗಾಗಲೇ ಹಲವು ಬಾರಿ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಿಜಯಪುರ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಲಕ್ಷ್ಮೀ ಹೆಬ್ಬಾಳಕರ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.
BJP Politics: ರಮೇಶ ಜಾರಕಿಹೊಳಿ ಸಚಿವರಾಗ್ತಾರೆ ಯಾರದ್ದೂ ವಿರೋಧವಿಲ್ಲ: ಕಟೀಲ್
ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯು ನೂರಾರು ಕೋಟಿ ರು. ಬಾಕಿ ಉಳಿಸಿಕೊಂಡರೂ ಸರ್ಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಆರೋಪಿಸಿದ ನಡುವೆಯೇ ಎಸ್.ಟಿ. ಸೋಮಶೇಖರ ಅವರು ಬೆಳಗಾವಿಯಲ್ಲಿ ಸಭೆ ನಡೆಸಿ ಸಾಲ ಮರುಪಾವತಿ, ಸಾಲ ನೀಡಿರುವ ವಿವರ, ಬಡ್ಡಿ ಸೇರಿದಂತೆ ಯಾರಾರಯರು ಸುಸ್ತಿದಾರರಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ